ವಂದೇ ಭಾರತ್ ರೈಲು ಪ್ರಯಾಣ ಕಲಿಸಿದ ಎಚ್ಚರಿಕೆಯ ಪಾಠ

Shreya Hegde
0

 ದುಬಾರಿ ಬೀಳ್ಕೊಡುಗೆ! ಭಾವನೆಗಳ ಕ್ಷಣಕ್ಕೆ ₹36,140 ದಂಡ 

‌



ರೈಲು ನಿಲ್ದಾಣದಲ್ಲಿ ಬೀಳ್ಕೊಡುವ ಕ್ಷಣಗಳು ಯಾವಾಗಲೂ ಭಾವನಾತ್ಮಕವಾಗಿರುತ್ತವೆ. ಉದ್ಯೋಗಕ್ಕಾಗಿ ದೂರದ ಊರಿಗೆ ಹೊರಡುವ ಮಗ, ಓದಿಗಾಗಿ ಬೇರೆ ರಾಜ್ಯಕ್ಕೆ ತೆರಳುವ ಮಗಳು, ಬಹಳ ದಿನಗಳ ನಂತರ ಊರಿಗೆ ಮರಳುವ ಸಂಬಂಧಿಕರು, ರೈಲು ಹೊರಡುವ ಮುನ್ನ ಇನ್ನೊಂದು ಮಾತು, ಇನ್ನೊಂದು ಅಪ್ಪುಗೆ, ಇನ್ನೊಂದು ಕ್ಷಣ ಜೊತೆಯಲ್ಲಿರಬೇಕೆಂಬ ಹಂಬಲ ಸಹಜ. ಮನೆಯಿಂದ ಹೊರಟಾಗಿನಿಂದಲೇ ಮನಸ್ಸಿನಲ್ಲಿ ಕಳವಳ. ರೈಲು ನಿಲ್ದಾಣಕ್ಕೆ ಬಂದ ಮೇಲೆ ಲಗೇಜುಗಳನ್ನು ಬೋಗಿಗೆ ತಲುಪಿಸಿ, ಸೀಟು ಹುಡುಕಿಕೊಟ್ಟು, ನೀರಿನ ಬಾಟಲಿ ಇಟ್ಟು, ಪ್ರಯಾಣಕ್ಕೆ ಬೇಕಾದ ಎಲ್ಲವನ್ನೂ ಸರಿಪಡಿಸಿ ಕೊಡುವ ಆತುರ. ರೈಲು ಹೊರಡಲು ಇನ್ನೂ ಸಮಯವಿದೆ ಎಂದುಕೊಂಡು, ಕೊನೆಯ ಕ್ಷಣದವರೆಗೂ ತಮ್ಮವರ ಜೊತೆಗಿರಲು ಬಯಸುವ ಸಂಬಂಧಿಕರು. ಇಂತಹ ದೃಶ್ಯಗಳು ನಮ್ಮ ರೈಲು ನಿಲ್ದಾಣಗಳಲ್ಲಿ ಪ್ರತಿದಿನ ಕಾಣಸಿಗುತ್ತವೆ.


ಆದರೆ ಕೆಲವೊಮ್ಮೆ ಪ್ರೀತಿಯಿಂದ ಮಾಡಿದ ಒಂದು ಸಣ್ಣ ತಪ್ಪು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ವಿಶೇಷವಾಗಿ ಆಧುನಿಕ ರೈಲುಗಳಾದ ವಂದೇ ಭಾರತ್‌ನಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ರೈಲಿನ ಸಮಯಪಾಲನೆಗೆ ಸಂಬಂಧಿಸಿದ ನಿಯಮಗಳನ್ನು ನಿರ್ಲಕ್ಷಿಸುವುದು ದುಬಾರಿಯಾಗಬಹುದು, ಎಂಬುದಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. 2026ರ ನವೆಂಬರ್ 15ರಂದು ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಾರಾಣಸಿ–ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಂತಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಕುಟುಂಬದ ಸದಸ್ಯರನ್ನು ಬೀಳ್ಕೊಡಲು ಬಂದಿದ್ದ ಕೆಲವರು, ಅವರಿಗೆ ಲಗೇಜುಗಳನ್ನು ಬೋಗಿಯೊಳಗೆ ಇಡಲು ಮತ್ತು ಸೀಟಿನಲ್ಲಿ ಕುಳಿತುಕೊಳ್ಳಲು ಸಹಾಯ ಮಾಡಲು ರೈಲಿನೊಳಗೆ ಪ್ರವೇಶಿಸಿದ್ದರು.


ರೈಲು ಕಾನ್ಪುರ ನಿಲ್ದಾಣಕ್ಕೆ ಬೆಳಿಗ್ಗೆ ಸುಮಾರು 9.26ಕ್ಕೆ ಆಗಮಿಸಿ, 9.30ಕ್ಕೆ ಹೊರಡಬೇಕಿತ್ತು. ಕೇವಲ ನಾಲ್ಕು ನಿಮಿಷಗಳ ನಿಲುಗಡೆಯ ಅವಧಿ. ಈ ಸಮಯದಲ್ಲಿ ಸಂಬಂಧಿಕರನ್ನು ಬೀಳ್ಕೊಡಲು ಬೋಗಿಯೊಳಗೆ ಹೋದವರು, ರೈಲು ಹೊರಡುವ ಮುನ್ನ ಕೆಳಗಿಳಿಯುವ ಬಗ್ಗೆ ಸರಿಯಾಗಿ ಗಮನ ಹರಿಸಲಿಲ್ಲ. ಅಷ್ಟರಲ್ಲಿ ವಂದೇ ಭಾರತ್ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡವು. ರೈಲು ಚಲಿಸಲು ಆರಂಭಿಸಿತು.


ತಾವು ರೈಲಿನೊಳಗೇ ಉಳಿದುಬಿಟ್ಟಿದ್ದೇವೆ ಎಂಬುದು ಅರಿವಾಗುತ್ತಿದ್ದಂತೆ ಅವರಿಗೆ ಗಾಬರಿಯಾಯಿತು. ತಕ್ಷಣ ರೈಲಿನ ಸಿಬ್ಬಂದಿಯನ್ನು ಸಂಪರ್ಕಿಸಿ ಬಾಗಿಲು ತೆರೆಯುವಂತೆ ಮನವಿ ಮಾಡಿದರು. ಆದರೆ ಚಲಿಸುತ್ತಿರುವ ರೈಲಿನ ಬಾಗಿಲುಗಳನ್ನು ಸುರಕ್ಷತಾ ನಿಯಮಗಳನ್ನು ಮೀರಿ ತೆರೆಯುವುದು ಸಾಧ್ಯವಿರಲಿಲ್ಲ. ರೈಲನ್ನು ಮಧ್ಯದಲ್ಲಿ ನಿಲ್ಲಿಸಿ ಅವರನ್ನು ಕೆಳಗಿಳಿಸುವುದೂ ಸುರಕ್ಷಿತ ಪರಿಹಾರವಾಗಿರಲಿಲ್ಲ. ಕೊನೆಗೆ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಯಿತು. ಅಧಿಕಾರಿಗಳ ಸೂಚನೆಯಂತೆ ರೈಲಿಗೆ ಇಟಾವಾ ಜಂಕ್ಷನ್‌ನಲ್ಲಿ ವಿಶೇಷ ನಿಲುಗಡೆ ವ್ಯವಸ್ಥೆ ಮಾಡಲಾಯಿತು. ಕಾನ್ಪುರದಿಂದ ಸುಮಾರು 139 ಕಿಲೋಮೀಟರ್ ದೂರದಲ್ಲಿರುವ ಇಟಾವಾ ತಲುಪಿದ ಬಳಿಕ ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರ ನೆರವಿನಿಂದ ಅವರೆಲ್ಲರೂ ಕೆಳಗಿಳಿದರು.


ಆದರೆ ಅಲ್ಲಿಗೆ ಅವರ ಸಂಕಷ್ಟ ಮುಗಿಯಲಿಲ್ಲ.  ಪ್ರಯಾಣದ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಕಾರಣ ರೈಲ್ವೆ ಅಧಿಕಾರಿಗಳು ನಿಯಮಾನುಸಾರ ದಂಡ ಮತ್ತು ಪ್ರಯಾಣ ಶುಲ್ಕ ವಸೂಲಿ ಮಾಡಿದರು. ವರದಿಗಳ ಪ್ರಕಾರ ಒಟ್ಟು ₹36,140 ವಸೂಲಿ ಮಾಡಲಾಯಿತು. ಹೀಗೆ ತಮ್ಮವರನ್ನು ಬೀಳ್ಕೊಡಲು ಹೋದವರ ಪಾಲಿಗೆ ಒಂದು ನಿಮಿಷದ ಅಜಾಗರೂಕತೆ ಸಾವಿರಾರು ರೂಪಾಯಿಗಳ ನಷ್ಟಕ್ಕೂ, ಸುಮಾರು 139 ಕಿಲೋಮೀಟರ್‌ಗಳ ಅನಗತ್ಯ ಪ್ರಯಾಣಕ್ಕೂ ಕಾರಣವಾಯಿತು.


ನಮ್ಮ ಆತ್ಮೀಯರಿಗೂ ಆಗಿತ್ತು ಇದೇ ಅನುಭವ!

ಇಂತಹದ್ದೇ ಒಂದು ಅನುಭವ ಕೆಲವು ತಿಂಗಳುಗಳ ಹಿಂದೆ ನಮ್ಮ ಆತ್ಮೀಯರಿಗೂ ಆಗಿತ್ತು. ಅವರ ಶ್ರೀಮತಿಯವರು ವಂದೇ ಭಾರತ್ ರೈಲಿನಲ್ಲಿ ಧಾರವಾಡಕ್ಕೆ ಪ್ರಯಾಣಿಸಬೇಕಿತ್ತು. ಅವರನ್ನು ರೈಲು ಹತ್ತಿಸಲು ನಮ್ಮ ಸ್ನೇಹಿತರು ರೈಲು ನಿಲ್ದಾಣಕ್ಕೆ ತೆರಳಿದ್ದರು. ಆದರೆ ನಿಲ್ದಾಣ ತಲುಪುವಷ್ಟರಲ್ಲಿ ಸ್ವಲ್ಪ ತಡವಾಗಿತ್ತು. ಜೊತೆಗೆ ತಂದಿದ್ದ ಕೈಚೀಲಗಳೂ ಭಾರವಾಗಿದ್ದರಿಂದ, ಅವುಗಳನ್ನು ಬೋಗಿಯೊಳಗೆ ಕೊಂಡೊಯ್ದು ನಿಗದಿತ ಆಸನದ ಬಳಿ ತಲುಪಿಸಿಕೊಡಲು ನಮ್ಮ ಸ್ನೇಹಿತರೂ ತಮ್ಮ ಪತ್ನಿಯೊಂದಿಗೆ ರೈಲನ್ನು ಹತ್ತಿದ್ದರು.


ಆದರೆ ಅವರು ಆಸನದ ಬಳಿ ತಲುಪುವಷ್ಟರಲ್ಲಿ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿದ್ದವು. ಹೀಗಾಗಿ ಪ್ರಯಾಣದ ಟಿಕೆಟ್ ಇಲ್ಲದಿದ್ದರೂ ಅನಿವಾರ್ಯವಾಗಿ ರೈಲಿನಲ್ಲೇ ಸುಮಾರು 45 ನಿಮಿಷಗಳ ಕಾಲ ಪ್ರಯಾಣಿಸಿ ತುಮಕೂರು ನಿಲ್ದಾಣದಲ್ಲಿ ಇಳಿಯಬೇಕಾಯಿತು. ಅಲ್ಲಿಂದ ಬೆಂಗಳೂರಿಗೆ ಬರಲು ಮತ್ತೊಂದು ರೈಲಿನ ಟಿಕೆಟ್ ಖರೀದಿಸಿ, ಬೇರೆ ರೈಲಿನಲ್ಲಿ ವಾಪಸ್ಸಾಗುವಂತಾಯಿತು.


ಈ ನಡುವೆ ಟಿಕೆಟ್ ತಪಾಸಣೆಗೆ ಬಂದ ಟಿಕೆಟ್ ಪರೀಕ್ಷಕರಿಗೆ ನಮ್ಮ ಸ್ನೇಹಿತರು ತಮ್ಮ ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ವಿವರಿಸಿದರು. ಅವರು ಮಾಜಿ ಹಿರಿಯ ಸೇನಾಧಿಕಾರಿಗಳಾಗಿದ್ದುದನ್ನೂ ತಿಳಿದ ಟಿಕೆಟ್ ಪರೀಕ್ಷಕರು, ಸರ್, ನಿಮ್ಮಂತಹ ವಿದ್ಯಾವಂತರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದವರೇ ಹೀಗೆ ಮಾಡಿದರೆ, ಉಳಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಎಂದು ಗಂಭೀರವಾಗಿ ಎಚ್ಚರಿಸಿದರು. ಅವರ ಪರಿಸ್ಥಿತಿಯನ್ನು ಪರಿಗಣಿಸಿ, ಯಾವುದೇ ದಂಡ ವಿಧಿಸದೆ ಎಚ್ಚರಿಕೆ ನೀಡಿ ಬಿಡಲಾಯಿತು ಎಂಬುದು ವಿಶೇಷ. ಆದರೆ ಆ ಘಟನೆಯಿಂದ ಅವರಿಗೆ ದೊರೆತ ಪಾಠ ಮಾತ್ರ ಮರೆಯಲಾಗದ್ದು. ಇಂತಹ ಸಂದರ್ಭಗಳನ್ನು ನೆನಪಿಸಿಕೊಂಡಾಗ, ನಮ್ಮ ಹಿರಿಯರು ಹೇಳಿರುವ ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಗಾದೆ ಎಷ್ಟು ಅರ್ಥಪೂರ್ಣವೆನಿಸುತ್ತದೆ! ಅದೇ ರೀತಿ, ತಮ್ಮ ಪರಿಸ್ಥಿತಿಯನ್ನು ಶಾಂತವಾಗಿ ಮತ್ತು ಸರಿಯಾದ ರೀತಿಯಲ್ಲಿ ವಿವರಿಸುವುದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದಕ್ಕೆ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯೂ ನೆನಪಾಗುತ್ತದೆ.


ಪ್ರೀತಿಯಿಂದ ನಮ್ಮವರನ್ನು ಬೀಳ್ಕೊಡಲು ಹೋಗಿ, ನಾವೇ ಅನಗತ್ಯ ಪ್ರಯಾಣಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಬರಬಾರದು. ಆದ್ದರಿಂದ ವಂದೇ ಭಾರತ್ ಮಾತ್ರವಲ್ಲ, ಯಾವುದೇ ರೈಲಿನಲ್ಲಾದರೂ ಪ್ರಯಾಣದ ಟಿಕೆಟ್ ಇಲ್ಲದೆ ಬೋಗಿಯೊಳಗೆ ಪ್ರವೇಶಿಸದಿರುವುದೇ ಜಾಣತನ. ಆತುರಕ್ಕಿಂತ ಎಚ್ಚರಿಕೆ ಮುಖ್ಯ. ಭಾವನೆಗಳಿಗಿಂತ ಸುರಕ್ಷತೆ ಮುಖ್ಯ ಎಂಬುದನ್ನು ಇಂತಹ ಅನುಭವಗಳು ನಮಗೆ ನೆನಪಿಸುತ್ತವೆ.


ವಂದೇ ಭಾರತ್ ರೈಲಿನ ಬಾಗಿಲುಗಳು ಏಕೆ ವಿಶೇಷ?

ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಮಾನ್ಯ ರೈಲುಗಳಿಗಿಂತ ವಿಭಿನ್ನವಾದ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ರೈಲು. ವೇಗ, ಆರಾಮದಾಯಕ ಆಸನಗಳು, ಸ್ವಯಂಚಾಲಿತ ಬಾಗಿಲುಗಳು, ಆಧುನಿಕ ಸುರಕ್ಷತಾ ವ್ಯವಸ್ಥೆಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ರೂಪಿಸಲಾದ ಹಲವು ತಂತ್ರಜ್ಞಾನಗಳು ಇದರ ವಿಶೇಷತೆ. ಈ ರೈಲುಗಳ ಬಾಗಿಲುಗಳು ರೈಲು ನಿಲುಗಡೆಯಲ್ಲಿದ್ದಾಗ ಮಾತ್ರ ಪ್ರಯಾಣಿಕರ ಏರು-ಇಳಿಯುವಿಕೆಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತವೆ. ರೈಲು ಹೊರಡುವ ಮುನ್ನ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತವೆ. ರೈಲು ಚಲಿಸುತ್ತಿರುವಾಗ ಅವುಗಳನ್ನು ಸಾಮಾನ್ಯವಾಗಿ ತೆರೆಯಲು ಸಾಧ್ಯವಿಲ್ಲ. ಮುಂದಿನ ನಿಗದಿತ ನಿಲ್ದಾಣದಲ್ಲಿ ರೈಲು ನಿಂತ ನಂತರವೇ ಬಾಗಿಲು ತೆರೆಯುವ ವ್ಯವಸ್ಥೆ ಇರುತ್ತದೆ.


ಇಂತಹ ವ್ಯವಸ್ಥೆಯ ಮುಖ್ಯ ಉದ್ದೇಶ ಪ್ರಯಾಣಿಕರ ಸುರಕ್ಷತೆ. ರೈಲು ಚಲಿಸುತ್ತಿರುವಾಗ ಯಾರಾದರೂ ಬಾಗಿಲು ತೆರೆಯಲು ಪ್ರಯತ್ನಿಸುವುದು ಅಥವಾ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸುವುದು ಅಪಾಯಕಾರಿ. ಆದ್ದರಿಂದ ಆಧುನಿಕ ರೈಲುಗಳ ಬಾಗಿಲು ವ್ಯವಸ್ಥೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು.


ಪ್ಲಾಟ್‌ಫಾರ್ಮ್ ಟಿಕೆಟ್ ಎಂದರೆ ರೈಲಿನಲ್ಲಿ ಪ್ರಯಾಣಿಸುವ ಅನುಮತಿಯಲ್ಲ!

ಈ ಘಟನೆಯಿಂದ ಮತ್ತೊಂದು ಪ್ರಮುಖ ವಿಷಯ ಸ್ಪಷ್ಟವಾಗುತ್ತದೆ. ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಬೀಳ್ಕೊಡಲು ಅಥವಾ ಬರಮಾಡಿಕೊಳ್ಳಲು ಹೋಗುವವರು ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯಬೇಕು. ಆದರೆ ಪ್ಲಾಟ್‌ಫಾರ್ಮ್ ಟಿಕೆಟ್ ಹೊಂದಿರುವುದರಿಂದ ರೈಲಿನ ಬೋಗಿಯೊಳಗೆ ಪ್ರವೇಶಿಸಿ ಪ್ರಯಾಣಿಸುವ ಅಧಿಕಾರ ಸಿಗುವುದಿಲ್ಲ. ಪ್ಲಾಟ್‌ಫಾರ್ಮ್ ಟಿಕೆಟ್ ನಿಲ್ದಾಣದ ನಿರ್ದಿಷ್ಟ ಪ್ರದೇಶಕ್ಕೆ ಪ್ರವೇಶಿಸಲು ಮಾತ್ರ ಅನುಮತಿ ನೀಡುತ್ತದೆ. ರೈಲಿನಲ್ಲಿ ಪ್ರಯಾಣಿಸಲು ಮಾನ್ಯ ಪ್ರಯಾಣ ಟಿಕೆಟ್ ಅಗತ್ಯ. ಪ್ರಯಾಣದ ಉದ್ದೇಶವಿಲ್ಲದವರು ರೈಲಿನ ಬೋಗಿಯೊಳಗೆ ಪ್ರವೇಶಿಸದೆ ಪ್ಲಾಟ್‌ಫಾರ್ಮ್‌ನಲ್ಲಿಯೇ ತಮ್ಮ ಸಂಬಂಧಿಕರನ್ನು ಬೀಳ್ಕೊಡಬೇಕು.


ಈ ನಿಯಮ ಕೇವಲ ವಂದೇ ಭಾರತ್ ರೈಲಿಗೆ ಮಾತ್ರ ಸೀಮಿತವಾದುದಲ್ಲ. ರೈಲ್ವೆ ನಿಲ್ದಾಣಗಳಲ್ಲಿನ ಪ್ರವೇಶ ನಿಯಮಗಳು ಮತ್ತು ಪ್ರಯಾಣ ಟಿಕೆಟ್‌ಗೆ ಸಂಬಂಧಿಸಿದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು.


ಪ್ರೀತಿಯ ಹೆಸರಿನಲ್ಲಿ ನಿಯಮ ಉಲ್ಲಂಘಿಸುವುದು ಸರಿಯೇ?

ನಮ್ಮಲ್ಲಿ ಬಹಳಷ್ಟು ಜನರಿಗೆ ರೈಲಿನಲ್ಲಿ ಪ್ರಯಾಣಿಸುವ ಸಂಬಂಧಿಕರನ್ನು ಬೀಳ್ಕೊಡುವಾಗ ಬೋಗಿಯೊಳಗೆ ಹೋಗಿ ಎಲ್ಲವನ್ನೂ ಸರಿಪಡಿಸಿಕೊಡುವ ಅಭ್ಯಾಸವಿದೆ. ವಯಸ್ಸಾದ ತಂದೆ-ತಾಯಿಯರನ್ನು ಕೂರಿಸುವುದು, ಮಕ್ಕಳಿಗೆ ಸೀಟು ಹುಡುಕಿಕೊಡುವುದು, ಭಾರವಾದ ಲಗೇಜುಗಳನ್ನು ಮೇಲಿನ ರ್ಯಾಕ್‌ನಲ್ಲಿ ಇಡುವುದು, ಕುಡಿಯುವ ನೀರು ಮತ್ತು ತಿಂಡಿ ಇಟ್ಟುಕೊಡುವುದು – ಇವೆಲ್ಲವೂ ಪ್ರೀತಿಯ ಅಭಿವ್ಯಕ್ತಿಗಳೇ. ಆದರೆ ಈ ಪ್ರೀತಿಯ ಅಭಿವ್ಯಕ್ತಿ ನಿಯಮಗಳನ್ನು ಉಲ್ಲಂಘಿಸುವಂತಿರಬಾರದು. ಕೆಲವೊಮ್ಮೆ ಒಬ್ಬರನ್ನು ಬೀಳ್ಕೊಡಲು ಐದು-ಆರು ಮಂದಿ ಪ್ಲಾಟ್‌ಫಾರ್ಮ್‌ನಿಂದ ಬೋಗಿಯೊಳಗೆ ನುಗ್ಗುತ್ತಾರೆ. ಇದರಿಂದ ಬೋಗಿಯ ಪ್ರವೇಶ ದ್ವಾರದಲ್ಲಿ ಜನದಟ್ಟಣೆ ಉಂಟಾಗುತ್ತದೆ. ನಿಜವಾದ ಪ್ರಯಾಣಿಕರಿಗೆ ಒಳಗೆ ಹೋಗಲು ತೊಂದರೆಯಾಗುತ್ತದೆ. ಲಗೇಜುಗಳನ್ನು ಇಡುವುದು, ಆಸನ ಹುಡುಕುವುದು ಮತ್ತು ರೈಲಿನಿಂದ ಇಳಿಯುವುದು ಗೊಂದಲಮಯವಾಗುತ್ತದೆ.


ವಿಶೇಷವಾಗಿ ವೃದ್ಧರು, ಮಕ್ಕಳು, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ಇಂತಹ ಜನದಟ್ಟಣೆ ಅಪಾಯಕಾರಿಯಾಗಬಹುದು. ರೈಲು ಹೊರಡುವ ಸಮಯದಲ್ಲಿ ಅನಗತ್ಯವಾಗಿ ಬೋಗಿಯೊಳಗೆ ಇರುವವರಿಂದ ಸಿಬ್ಬಂದಿಗೂ ತಮ್ಮ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತದೆ. ಹೀಗಾಗಿ, ಒಬ್ಬರನ್ನು ಬೀಳ್ಕೊಡಲು ಹತ್ತು ಮಂದಿ ಬರುವುದಕ್ಕಿಂತ ಅಗತ್ಯವಿರುವ ಒಬ್ಬರು ಅಥವಾ ಇಬ್ಬರು ಮಾತ್ರ ನಿಲ್ದಾಣಕ್ಕೆ ಬರುವುದು ಉತ್ತಮ. ಸಾಧ್ಯವಾದರೆ ಪ್ರಯಾಣಿಕರಿಗೆ ಲಗೇಜು ಮತ್ತು ಇತರ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಮಾಡಿಕೊಡಬೇಕು.


ರೈಲು ನಿಲ್ದಾಣದಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಎಚ್ಚರಿಕೆಗಳು

1. ಪ್ರಯಾಣಿಕರನ್ನು ಬೀಳ್ಕೊಡಲು ನಿಲ್ದಾಣಕ್ಕೆ ಹೋಗುವಾಗ ಅಗತ್ಯವಿದ್ದರೆ ಮಾನ್ಯ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯಿರಿ.

2. ಪ್ರಯಾಣ ಟಿಕೆಟ್ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ರೈಲಿನ ಬೋಗಿಯೊಳಗೆ ಪ್ರವೇಶಿಸಬೇಡಿ.

3. ವೃದ್ಧರು ಅಥವಾ ಮಕ್ಕಳಿಗೆ ಸಹಾಯ ಮಾಡಲು ಬೋಗಿಯೊಳಗೆ ಹೋದರೂ, ರೈಲು ಹೊರಡುವುದಕ್ಕೂ ಮುನ್ನ ಪ್ಲಾಟ್‌ಫಾರ್ಮ್‌ಗೆ ಮರಳಿರುವುದನ್ನು ಖಚಿತಪಡಿಸಿಕೊಳ್ಳಿ. ಆದರೆ ರೈಲ್ವೆ ನಿಯಮಗಳು ಮತ್ತು ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದೆ ಬೋಗಿಯೊಳಗೆ ಪ್ರವೇಶಿಸಬೇಡಿ.

4. ರೈಲು ಹೊರಡುವ ಸೂಚನೆ, ಸೈರನ್ ಅಥವಾ ಸಿಬ್ಬಂದಿಯ ಪ್ರಕಟಣೆಗಳನ್ನು ನಿರ್ಲಕ್ಷಿಸಬೇಡಿ.

5. ಬಾಗಿಲು ಮುಚ್ಚುವ ಸಮಯದಲ್ಲಿ ಲಗೇಜು ಇಡುವುದು, ಫೋಟೋ ತೆಗೆಯುವುದು ಅಥವಾ ಕೊನೆಯ ಕ್ಷಣದ ಮಾತುಕತೆಯಲ್ಲಿ ತೊಡಗಬೇಡಿ.

6. ರೈಲು ಚಲಿಸಲು ಆರಂಭಿಸಿದ ನಂತರ ಹತ್ತಲು ಅಥವಾ ಇಳಿಯಲು ಪ್ರಯತ್ನಿಸಬೇಡಿ.

7. ರೈಲಿನಲ್ಲಿ ಅನಿರೀಕ್ಷಿತವಾಗಿ ಸಿಲುಕಿಕೊಂಡರೆ ಗಾಬರಿಯಿಂದ ಬಾಗಿಲು ತೆರೆಯಲು ಯತ್ನಿಸದೆ ತಕ್ಷಣ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಿ. ತುರ್ತು ಪರಿಸ್ಥಿತಿಯಲ್ಲಿ ಅವರ ಸೂಚನೆಗಳನ್ನು ಅನುಸರಿಸಿ.


ರೈಲ್ವೆ ಇಲಾಖೆಯೂ ಜಾಗೃತಿ ಮೂಡಿಸಬೇಕಿದೆ

ಪ್ರಯಾಣಿಕರು ನಿಯಮ ಪಾಲಿಸುವುದು ಎಷ್ಟು ಮುಖ್ಯವೋ, ರೈಲ್ವೆ ಇಲಾಖೆಯೂ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸುವುದು ಅಷ್ಟೇ ಅಗತ್ಯ. ವಂದೇ ಭಾರತ್‌ನಂತಹ ಆಧುನಿಕ ರೈಲುಗಳು ನಿಲ್ದಾಣಕ್ಕೆ ಆಗಮಿಸುವಾಗ ಮತ್ತು ಹೊರಡುವಾಗ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪಷ್ಟವಾದ ಧ್ವನಿ ಪ್ರಕಟಣೆಗಳನ್ನು ನೀಡಬೇಕು. ಬಾಗಿಲು ಮುಚ್ಚುವ ಮುನ್ನ ಪ್ರಯಾಣಿಕರಿಗೆ ಮತ್ತು ಅವರನ್ನು ಬೀಳ್ಕೊಡಲು ಬಂದವರಿಗೆ ಎಚ್ಚರಿಕೆ ಸಂದೇಶಗಳು ಕೇಳಿಸುವಂತಿರಬೇಕು. ರೈಲು ಹೊರಡುವ ಸಮಯದಲ್ಲಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಅನಗತ್ಯವಾಗಿ ಬೋಗಿಯೊಳಗೆ ಉಳಿದಿರುವವರನ್ನು ಗಮನಿಸಬೇಕು.


ವಿಶೇಷವಾಗಿ ಹೊಸದಾಗಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವವರಿಗೆ ಸ್ವಯಂಚಾಲಿತ ಬಾಗಿಲುಗಳ ಕಾರ್ಯವಿಧಾನದ ಬಗ್ಗೆ ಸರಳ ಭಾಷೆಯಲ್ಲಿ ಮಾಹಿತಿ ನೀಡುವುದು ಸಹಾಯಕವಾಗುತ್ತದೆ. ನಿಲ್ದಾಣದ ಪ್ರವೇಶ ದ್ವಾರ, ಪ್ಲಾಟ್‌ಫಾರ್ಮ್ ಮತ್ತು ರೈಲಿನ ಬಾಗಿಲುಗಳ ಬಳಿ ಸ್ಪಷ್ಟವಾದ ಸೂಚನಾ ಫಲಕಗಳನ್ನು ಅಳವಡಿಸುವುದರಿಂದ ಇಂತಹ ತಪ್ಪುಗಳನ್ನು ತಡೆಯಬಹುದು. ಆದರೆ ಎಚ್ಚರಿಕೆ ಫಲಕಗಳಿದ್ದರೂ ಅವುಗಳನ್ನು ಓದುವುದು ಮತ್ತು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ.


ಬೀಳ್ಕೊಡುಗೆ ಪ್ರೀತಿಯಿಂದಿರಲಿ, ಪಶ್ಚಾತ್ತಾಪದಿಂದಲ್ಲ!

ಒಂದು ಕ್ಷಣ ಯೋಚಿಸಿ ನೋಡಿ. ತಮ್ಮವರನ್ನು ಬೀಳ್ಕೊಡಲು ನಿಲ್ದಾಣಕ್ಕೆ ಬಂದವರು, ರೈಲು ಹೊರಟ ನಂತರ ತಮ್ಮವರ ಬದಲು ತಾವೇ ರೈಲಿನೊಳಗೆ ಸಿಲುಕಿಕೊಂಡರೆ ಅವರ ಕುಟುಂಬದವರ ಮನಸ್ಥಿತಿ ಹೇಗಿರಬಹುದು? ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಕೈಬೀಸುತ್ತಿದ್ದವರು ರೈಲು ದೂರವಾಗುತ್ತಿದ್ದಂತೆ ತಮ್ಮ ಮನೆಯವರ ಜೊತೆಗೆ ಬಂದಿದ್ದವರೂ ರೈಲಿನಲ್ಲಿ ಹೊರಟುಹೋಗಿರುವುದನ್ನು ಕಂಡರೆ ಎಷ್ಟು ಆತಂಕವಾಗಬಹುದು? ಅವರಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರೆ ಕುಟುಂಬದವರ ಆತಂಕ ಇನ್ನಷ್ಟು ಹೆಚ್ಚಿರಬಹುದು. ಒಂದು ಕಡೆ ರೈಲಿನೊಳಗೆ ಸಿಲುಕಿದವರ ಗಾಬರಿ, ಇನ್ನೊಂದು ಕಡೆ ಪ್ಲಾಟ್‌ಫಾರ್ಮ್‌ನಲ್ಲಿ ಉಳಿದವರ ಆತಂಕ. ಕೊನೆಗೆ ಇಟಾವಾದಲ್ಲಿ ಇಳಿಯುವವರೆಗೆ ಅನಗತ್ಯ ಪ್ರಯಾಣ, ವಿಚಾರಣೆ ಮತ್ತು ದಂಡದ ಸಂಕಷ್ಟ.


ಇದಕ್ಕೆಲ್ಲ ಕಾರಣ ಯಾರನ್ನಾದರೂ ಪ್ರೀತಿಯಿಂದ ಬೀಳ್ಕೊಡಬೇಕೆಂಬ ಆಸೆಯಲ್ಲ; ಆ ಆಸೆಯನ್ನು ವ್ಯಕ್ತಪಡಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಿವಿಲ್ಲದಿರುವುದು ಮತ್ತು ಸಮಯದ ಬಗ್ಗೆ ಅಜಾಗರೂಕತೆ ತೋರಿರುವುದು. ನಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿ ಬೀಳ್ಕೊಡುವುದೇ ನಿಜವಾದ ಪ್ರೀತಿ. ಅವರನ್ನು ಬೋಗಿಯೊಳಗೆ ಕೂರಿಸಿ ಕೊನೆಯ ಕ್ಷಣದವರೆಗೂ ಜೊತೆಯಲ್ಲಿರುವುದಕ್ಕಿಂತ, ಪ್ಲಾಟ್‌ಫಾರ್ಮ್‌ನಲ್ಲೇ ನಿಂತು ಸುರಕ್ಷಿತವಾಗಿ ಬೀಳ್ಕೊಡುವುದು ಉತ್ತಮ. ರೈಲು ಹೊರಡುವಾಗ ಕೈಬೀಸಬಹುದು, ದೂರವಾಣಿ ಮೂಲಕ ಮಾತನಾಡಬಹುದು, ಸಂದೇಶ ಕಳುಹಿಸಬಹುದು. ಆದರೆ ಒಂದು ಕ್ಷಣದ ಭಾವನಾತ್ಮಕ ನಿರ್ಧಾರದಿಂದ ಕಾನೂನುಬಾಹಿರ ಪ್ರಯಾಣಕ್ಕೆ ಸಿಲುಕಿಕೊಳ್ಳುವ ಅಗತ್ಯವಿಲ್ಲ.


ನೆನಪಿರಲಿ: ರೈಲಿನಲ್ಲಿ ಪ್ರಯಾಣಿಸದಿದ್ದರೆ ಬೋಗಿಯೊಳಗೆ ಪ್ರವೇಶಿಸಬೇಡಿ. ಪ್ಲಾಟ್‌ಫಾರ್ಮ್‌ನಲ್ಲೇ ಬೀಳ್ಕೊಡಿ. ಪ್ರೀತಿ ಅಮೂಲ್ಯ; ಆದರೆ ಅಜಾಗರೂಕತೆಯಿಂದ ಅದಕ್ಕೆ ಸಾವಿರಾರು ರೂಪಾಯಿಗಳ ಬೆಲೆ ಕಟ್ಟಬೇಕಾಗಿಲ್ಲ!


ಈ ಘಟನೆ ಕೇವಲ ಹಾಸ್ಯ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸುದ್ದಿಯಲ್ಲ. ಪ್ರತಿಯೊಬ್ಬ ರೈಲು ಪ್ರಯಾಣಿಕರೂ, ಅವರನ್ನು ಬೀಳ್ಕೊಡಲು ಬರುವವರೂ ತಿಳಿದುಕೊಳ್ಳಬೇಕಾದ ಒಂದು ಮಹತ್ವದ ಸುರಕ್ಷತಾ ಪಾಠ. ಹಾಗಾಗಿ ಇದನ್ನು ಸಾಧ್ಯವಾದಷ್ಟೂ ಮಟ್ಟಿಗೆ ನಿಮ್ಮ ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ಅರಿವು ಮೂಡಿಸೋಣ ಅಲ್ವೇ? ಏನಂತೀರೀ?

 

- ಶ್ರೀಕಂಠ ಬಾಳಗಂಚಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top