ವಂದೇ ಭಾರತ್ ಸ್ಲೀಪರ್ ರೈಲಿಗೆ ಸಂಭ್ರಮದ ಸ್ವಾಗತ; ಮುಗಿಲು ಮುಟ್ಟಿದ ಜಯಕಾರ

Shreya Hegde
0

ಐತಿಹಾಸಿಕ ಘಟನೆಗೆ ಸಾಕ್ಷಿಯಾಗದ ಕಾಂಗ್ರೆಸ್ ನಾಯಕರಿಗೆ ಡಾ. ಉಮೇಶ್ ಜಾಧವ್ ತಿರುಗೇಟು

‌



ಕಲಬುರಗಿ: ಬೆಂಗಳೂರಿಂದ ಮುಂಬೈಗೆ ಹೊರಟ ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಕಲಬುರಗಿಯಲ್ಲಿ ಅಮಿತೋತ್ಸಾಹದಿಂದ ಸಂಭ್ರಮದ ಸ್ವಾಗತ ನೀಡಲಾಯಿತು. ರೈಲು ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮದ ಜಯಕಾರ ಮುಗಿಲುಮುಟ್ಟಿತ್ತು.


ಬೆಂಗಳೂರಿನಿಂದ ಭಾನುವಾರ ಮಧ್ಯಾಹ್ನ ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ವಿ. ಸೋಮಣ್ಣ  ಚಾಲನೆ ನೀಡಿದ ವಂದೇ ಭಾರತ ಸ್ಲೀಪರ್ ರೈಲು ರಾತ್ರಿ 9.30ಕ್ಕೆ ಕಲಬುರಗಿ ನಿಲ್ದಾಣ ಆಗಮಿಸುತ್ತಿದ್ದಂತೆ ಸೇರಿದ ಜನಸ್ತೋಮ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕಿ ಸಂತಸದಿಂದ ಕುಪ್ಪಳಿಸಿದರು. ಸುಮಾರು 10 ನಿಮಿಷಗಳ ಕಾಲ ತಂಗಿದ ಈ ರೈಲು ಗಾಡಿಗೆ ಮಾಜಿ ಸಂಸದರಾದ ಡಾ ಉಮೇಶ್ ಜಾಧವ್ ಹಸಿರು ನಿಶಾನೆ ತೋರಿಸಿ ಮುಂಬೈ ಕಡೆಗೆ ಬೀಳ್ಕೊಟ್ಟು ರೈಲು ಚಾಲಕ ಮತ್ತು ಸಿಬ್ಬಂದಿಗಳಿಗೆ ಹಾಗೂ ಪ್ರಯಾಣಿಕರಿಗೆ ಶುಭ ಕೋರಿದರು.


ಅಭಿವೃದ್ಧಿಗೆ ಸಾಕ್ಷಿಯಾಗದ ಪ್ರಿಯಾಂಕ್ ಖರ್ಗೆಗೆ ತಿರುಗೇಟು:

ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ರಾಜ್ಯೋತ್ಸವದ ದಿನ ವರದಾನವಾದ ವಂದೇ ಭಾರತ್ ರೈಲು ಸಂಚಾರ ಐತಿಹಾಸಿಕ ಘಟನೆ ಯಾಗಿದ್ದು ಇಂತಹ ಅಭಿವೃದ್ಧಿ ಪರ ಕಾರ್ಯಕ್ರಮಕ್ಕೆ ಸಾಕ್ಷಿಯಾಗದ ಕಾಂಗ್ರೆಸ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅಭಿವೃದ್ಧಿ ಸಹಿಸದ ಸಚಿವರಾಗಿದ್ದಾರೆ. ಕಾಂಗ್ರೆಸ್ ನಾಯಕರು  ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿರುವುದು ಅವರ ಅಭಿವೃದ್ಧಿ ವಿರೋಧಿ ಮನಸ್ಸನ್ನು ತೋರಿಸುತ್ತದೆ ಎಂದು ನಂತರ ನಡೆದ ಕಾರ್ಯಕ್ರಮದಲ್ಲಿ ಸೇರಿದ ಜನರನ್ನುದ್ದೇಶಿಸಿ ಡಾ ಉಮೇಶ್ ಜಾಧವ್ ತಿರುಗೇಟು ನೀಡಿದರು.




ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಜಾಯಮಾನ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮೋದಿ ಅವರು ರಾಜ್ಯೋತ್ಸವದ ಶುಭದಿನದಂದು ನೀಡಿದ ಈ ವಿದೇಶ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಕಾಂಗ್ರೆಸ್ ಈ ಭಾಗವನ್ನು ಹಿಂದುಳಿಯುವಂತೆ ಇಡುವ ಮನೋಧರ್ಮವಾಗಿದೆ. ಮೋದಿ ಆಡಳಿತದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಎಸ್ ಐ ಆರ್ ಚುನಾವಣಾ ಪ್ರಕ್ರಿಯೆಯನ್ನು ಕೇರಳ, ತಮಿಳುನಾಡು ಪ್ರಶಂಸಿಸುತ್ತಿದ್ದರೆ ಕಾಂಗ್ರೆಸ್ ಮಾತ್ರ ವಿರೋಧ ಮಾಡಿ ಜನರ ಮುಂದೆ ತನ್ನ ಅಸಲಿ ಮುಖ ಬಯಲು ಮಾಡುತ್ತಿದೆ. ಬಿಜೆಪಿ 2028 ಮತ್ತು 2029 ರ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಲು ಮೋದಿ ಅವರ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿಡಬೇಕು ಎಂದು ಡಾ ಜಾಧವ್ ಕರೆ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಮಾತನಾಡಿ ಶುಭ ಕೋರಿದರು.


ಗಣ್ಯರ ಉಪಸ್ಥಿತಿ:

ವಂದೇ ಭಾರತ್ ಸ್ಲೀಪರ್ ರೈಲನ್ನು ಸ್ವಾಗತಿಸಲು  ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್ ಶಶಿಲ್ ನಮೋಶಿ, ಶಾಸಕ ಡಾ ಅವಿನಾಶ್ ಜಾಧವ್, ಮೇಯರ್ ಅಜ್ಮಲ್ ಮೊಹಮ್ಮದ್ ಗೋಲಾ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪೊಲೀಸ್ ಆಯುಕ್ತರಾದ ಡಾ.  ಶರಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಶಿವರಾಜ್ ರದ್ದೇವಾಡಗಿ, ಅವ್ವಣ್ಣ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಚಂದು ಪಾಟೀಲ್, ಶಿವಕಾಂತ್ ಮಹಾಜನ, ವಾಣಿಜ್ಯೋದ್ಯಮ ಸಂಸ್ಥೆಯ ಶರಣು ಪಪ್ಪಾ, ಶಿವರಾಜ್ ಇಂಗಿನಶೆಟ್ಟಿ,ಹೋಟೆಲ್ ಸಂಘದ ನರಸಿಂಹ ಮೆಂಡನ್, ಡಾ ಸದಾನಂದ ಪೆರ್ಲ, ಮಹೇಶ್ ಕಡೇಚೂರ್, ರಾಮಚಂದ್ರ ಜಾಧವ್,ಸೋಲಾಪುರ ವಿಭಾಗೀಯ ಡಿಪಿಓ ದೀಪಿಂಗ್ ಸಿಂಗ್, ಇಂಜಿನಿಯರ್ ವಿಭಾಗದ ಸೌರವ್ ಕುಮಾರ್  ವ್ಯವಸ್ಥಾಪಕ ಜಯದೀಪ್ ಪ್ರದಕ್ಷಿಣ್, ರೈಲ್ವೆವಾಣಿಜ್ಯ ವಿಭಾಗದ ಅತುಲ್ ಲೋಕರೆ, ಇಂಜಿನಿಯರ್ ಅವಿರಾಜ್ ಇಂಗ್ಲೆ ಶಿವ ಕುಮಾರ್, ಕಲಬುರಗಿ ನಿಲ್ದಾಣದ ಮ್ಯಾನೇಜರ್ ಜಿ.ಜಿ ಮೋನ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿ ಆರ್ ಎಂ ಸುಜಿತ್ ಮಿಶ್ರಾ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top