ಶಿವಮೊಗ್ಗ: ಬೆಂಗಳೂರಿನ ರಾಜ್ಯ NSS ಕೋಶವು 2024 ಹಾಗೂ 2025 ನೇ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ ಘೋಷಣೆಯಾಗಿರುವುದು ಹೆಮ್ಮೆಯನ್ನು ತಂದಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಸಂಧ್ಯಾ ಕಾವೇರಿ ತಿಳಿಸಿದ್ದಾರೆ.
ಕುಮಾರಿ ಸಂಧ್ಯಾ ಕೆ ಕೆ ಯವರಿಗೆ 2024 ನೇ ಸಾಲಿನ ಅತ್ಯುತ್ತಮ ಸ್ವಯಂ ಸೇವಕಿ ರಾಜ್ಯ ಪ್ರಶಸ್ತಿ ಹಾಗೂ ಹರ್ಷವರ್ಧನ ರವರಿಗೆ 2025 ನೇ ಸಾಲಿನ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ.
ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ ರಜನಿ ಪೈರವರು ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕ್ರಮಾಧಿಕಾರಿಗಳಾದ ಸುಕೀರ್ತಿ, ಮೋಹನಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಶೈಕ್ಷಣಿಕ ನಿರ್ದೇಶಕರಾದ ಪ್ರೀತಿ ಶಾನಭಾಗ್, ವಾಮನ ಶಾನಭಾಗ್, ರಾಜೇಂದ್ರ ಚೆನ್ನಿ ಹಾಗೂ ಆಡಳಿತಾಧಿಕಾರಿ ರಾಮಚಂದ್ರ ಬಾಳಿಗರವರು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂಧರ್ಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಬ್ಬರು ಕುವೆಂಪು ವಿಶ್ವ ವಿದ್ಯಾಲಯದ NSS ಸಂಯೋಜಕರಾದ ಡಾ ಶುಭ ಮರವಂತೆಯವರು ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ತಿಳಿಸಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ NSS ಘಟಕಗಳಿಂದ ನಡೆಸಲಾದ ಹಲವಾರು ತರಬೇತಿಗಳು ಹಾಗೂ ಕಾರ್ಯಕ್ರಮಗಳೇ ನಮ್ಮಲ್ಲಿ ಸ್ವಯಂ ಸೇವೆಯ ಹಾಗೂ ನಾಯಕತ್ವದ ಗುಣಗಳ ಬೆಳವಣಿಗೆಗೆ ಕಾರಣ ಎಂದರು.
ಅವರಿಬ್ಬರು ಈ ಸಂದರ್ಭದಲ್ಲಿ ತಮ್ಮ ಪೋಷಕರನ್ನು, ಕಾಲೇಜಿನ NSS ಕಾರ್ಯಕ್ರಮಾಧಿಕಾರಿಗಳನ್ನು, ಹಾಗೂ ಎಲ್ಲಾ ಉಪನ್ಯಾಸಕರ ಬೆಂಬಲವನ್ನು ಸ್ಮರಿಸಿ ತಮ್ಮ ಸಹಪಾಠಿಗಳ ಪ್ರೋತ್ಸಾಹವನ್ನು ನೆನಪಿಸಿಕೊಂಡರು. ಕುಮಾರಿ ಸಂಧ್ಯಾ ಹಾಗೂ ಹರ್ಷವರ್ಧನ 2024ರಲ್ಲಿ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರಲ್ಲದೆ ಹರ್ಷವರ್ಧನ ರಾಜ್ಯ NSS ಪಡೆಯ ಮುಂದಾಳತ್ವವನ್ನು ವಹಿಸಿದ್ದರು ಎಂದು ಸಂಧ್ಯಾ ಕಾವೇರಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

