ವನರಾಗ ಶರ್ಮಾ ಕೃತಿಗೆ ಸಾಹಿತ್ಯ ಜ್ಯೋತಿ ಪ್ರಶಸ್ತಿ

Shreya Hegde
0



ಯಲ್ಲಾಪುರ: ಯಲ್ಲಾಪುರದ ಹಿರಿಯ ಸಾಹಿತಿ ವನರಾಗ ಶರ್ಮಾ ಅವರ 'ಚಿನ್ನಾ ನನ್ನ ಮುದ್ದು ಚಿನ್ನಾ' ಮಕ್ಕಳ ಕಥಾಸಂಕಲನಕ್ಕೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ರಾಜ್ಯಮಟ್ಟದ 'ಸಿಸು ಸಾಹಿತ್ಯ ಜ್ಯೋತಿ' ಪ್ರಶಸ್ತಿ ಲಭಿಸಿದೆ. ಸಾಹಿತಿ ವೇ. ಗುರುಪಾದ ಸ್ವಾಮಿ ಹಿರೇಮಠ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನವೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಾನದ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಶಿವಪ್ರಸಾದ ಹುಲೆಪ್ಪನವರ ಹಾಗೂ ಕಾರ್ಯದರ್ಶಿ ಆರ್.ಜಿ. ಹಿರೇಮಠ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.


ಇತ್ತೀಚಿನ ದಿನಗಳಲ್ಲಿ ವನರಾಗ ಶರ್ಮಾ ಅವರ ವಿವಿಧ ಸಾಹಿತ್ಯ ಕೃತಿಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳು ಒಲಿದು ಬಂದಿರುವುದು ವಿಶೇಷವಾಗಿದೆ. ಈ ಹಿಂದೆ, ಭಾಮಿನಿ ಷಟ್ಪದಿಯಲ್ಲಿ ರಚಿಸಲಾದ 19,524 ಸಾಲುಗಳ ಬೃಹತ್ ಕೃತಿ 'ಸಂಪೂರ್ಣ ಮಧುರ ರಾಮಾಯಣ' ಮಹಾಕಾವ್ಯಕ್ಕೆ ಮಂಡ್ಯದ 'ಅಡ್ವೈಸರ್' ಮಾಸಪತ್ರಿಕೆ ವಾರ್ಷಿಕವಾಗಿ ನಡೆಸುವ 2025ರ ರಾಷ್ಟ್ರಮಟ್ಟದ ಪುಸ್ತಕ ಪ್ರಶಸ್ತಿ ಲಭಿಸಿತ್ತು. ವರ್ತಮಾನ ಕಾಲಘಟ್ಟದ ಒಂದು ಶ್ರೇಷ್ಠ ಕೃತಿ ಎಂದು ಗುರುತಿಸಲ್ಪಟ್ಟ ಈ ಮಹಾಕಾವ್ಯಕ್ಕೆ ನಗದು ಬಹುಮಾನ, ಪ್ರಮಾಣ ಪತ್ರ, ಫಲಕ, ಪುಸ್ತಕ ಮತ್ತು ಇತರ ಪರಿಕರಗಳೊಂದಿಗೆ ಗೌರವಿಸಲಾಗುವುದು ಎಂದು ಸಂಪಾದಕ ಹಾಗೂ ಆಯೋಜಕ ಬಸವರಾಜು ತಿಳಿಸಿದ್ದಾರೆ.




ಅಲ್ಲದೆ, ವನರಾಗ ಶರ್ಮಾ ಅವರ 'ಕೊಳಲನೇಕೆ ನುಡಿಸದಿರುವೆ' ಕವನ ಸಂಕಲನಕ್ಕೂ ಹಾಸನದ ಮಾಣಿಕ್ಯ ಪ್ರಕಾಶನ ಮತ್ತು ಸಾಹಿತ್ಯ ವೇದಿಕೆ ನೀಡುವ ರಾಜ್ಯಮಟ್ಟದ ದತ್ತಿನಿಧಿ 'ಕಾವ್ಯಮಾಣಿಕ್ಯ' ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪುರಸ್ಕೃತರನ್ನು ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಇತರ ಗೌರವಗಳೊಂದಿಗೆ ವಾರ್ಷಿಕ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಈ ಸಾಧನೆಗಾಗಿ ವನರಾಗ ಶರ್ಮಾ ಅವರು ಸಂಘಟಕರಿಗೆ ಹಾಗೂ ತೀರ್ಪುಗಾರರಿಗೆ ಕೃತಜ್ಞತೆ ಸಲ್ಲಿಸಿದ್ದು, ಪ್ರಶಸ್ತಿ ಪಡೆದ ಇತರ ಸಾಹಿತಿಗಳನ್ನೂ ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top