ರೈಲ್ವೆ ಇಲಾಖೆಯ 'ವೈಟಿಂಗ್ ಲಿಸ್ಟ್' ಅವ್ಯವಸ್ಥೆ: ಸೀಟು ಕೊಡದಿದ್ದರೂ ಕೇವಲ 3 ತಿಂಗಳಲ್ಲಿ ಬರೋಬ್ಬರಿ 40 ಕೋಟಿ ಲಾಭ!

Shreya Hegde
0



ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಬುಕ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು ರೀತಿಯ ಲಾಟರಿ ಟಿಕೆಟ್ ಖರೀದಿಸಿದಂತಾಗಿದೆ. ಕನ್ಫರ್ಮ್ ಟಿಕೆಟ್ ಸಿಗುವುದು ದೇವರೇ ಬಲ್ಲ, ಆದರೆ 'ವೈಟಿಂಗ್ ಲಿಸ್ಟ್' ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಹೇಗೆ ಕತ್ತರಿ ಬೀಳುತ್ತಿದೆ ಎನ್ನುವುದಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಸಿಕ್ಕಿರುವ ಅಧಿಕೃತ ಉತ್ತರವೇ ಜ್ವಲಂತ ಸಾಕ್ಷಿ. ಟಿಕೆಟ್ ಕನ್ಫರ್ಮ್ ಆಗದೆ, ಪ್ರಯಾಣಿಸಲು ಸೀಟು ಕೂಡ ಸಿಗದೆ ಹೋದರೂ, ಜನರ ದುಡ್ಡಿನಲ್ಲಿ ರೈಲ್ವೆ ಇಲಾಖೆ ಹೇಗೆ ಕೋಟಿ ಕೋಟಿ ಆದಾಯ ಮಾಡುತ್ತಿದೆ ಎಂಬ ಕರಾಳ ಸತ್ಯ ಈಗ ಬಯಲಾಗಿದೆ.


ನಾನು ಹಾಕಿದ್ದ ಆರ್‌ಟಿಐಗೆ ಬಂದ ಉತ್ತರದ ಪ್ರಕಾರ, ಕೇವಲ ಒಂದು ತ್ರೈಮಾಸಿಕದಲ್ಲಿ ಅಂದರೆ ಜನವರಿ 1, 2024 ರಿಂದ ಮಾರ್ಚ್ 31, 2024 ರವರೆಗೆ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಬುಕ್ ಮಾಡಲಾಗಿ, ಚಾರ್ಟ್ ತಯಾರಾದ ಬಳಿಕವೂ 'ವೈಟಿಂಗ್ ಲಿಸ್ಟ್'ನಲ್ಲೇ ಉಳಿದು ರದ್ದಾದ ಟಿಕೆಟ್‌ಗಳ ಕ್ಯಾನ್ಸಲೇಶನ್ ಶುಲ್ಕದಿಂದಲೇ ರೈಲ್ವೆ ಇಲಾಖೆ ಬರೋಬ್ಬರಿ 40,28,28,493 ರೂಪಾಯಿಗಳನ್ನು (40 ಕೋಟಿ ರೂ.) ಕಲೆಕ್ಟ್ ಮಾಡಿದೆ! ನೆನಪಿಡಿ, ಇದು ಕೇವಲ IRCTC ವೆಬ್ಸೈಟ್ ನಲ್ಲಿ ಮಾತ್ರ. ಸ್ಟೇಷನ್ ಬುಕಿಂಗ್ ಡಾಟಾ ಕೇಳಲಿಲ್ಲ.  ಪ್ರಯಾಣಿಕನಿಗೆ ಯಾವುದೇ ಸೇವೆಯನ್ನು ಒದಗಿಸಿಲ್ಲ, ಆತನಿಗೆ ಸೀಟು ಕೂಡ ಕೊಟ್ಟಿಲ್ಲ. ಆದರೂ ಆತನ ಟಿಕೆಟ್ ರದ್ದಾದದ್ದಕ್ಕೆ ಆತನಿಂದಲೇ ಕೋಟ್ಯಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇದೇ ಆರ್‌ಟಿಐ ಉತ್ತರದಲ್ಲಿ ಐಆರ್‌ಸಿಟಿಸಿ ಬಹಳ ಜಾಣತನದಿಂದ "ಈ ಕ್ಯಾನ್ಸಲೇಶನ್ ಶುಲ್ಕವನ್ನು ರೈಲ್ವೆ ಇಲಾಖೆ ಪಡೆಯುತ್ತದೆಯೇ ಹೊರತು ಐಆರ್‌ಸಿಟಿಸಿ ಅಲ್ಲ" ಎಂದು ನುಣುಚಿಕೊಂಡಿದೆ.   




ವೈಟಿಂಗ್ ಲಿಸ್ಟ್ ಕಥೆ ಹೀಗಾದರೆ, ಇನ್ನು ಆರ್‌ಎಸಿ ಟಿಕೆಟ್‌ಗಳ ಕಥೆ ಇನ್ನೂ ರೋಚಕ. ಇದೇ ಆರ್‌ಟಿಐ ಅರ್ಜಿಯಲ್ಲಿ ಆರ್‌ಎಸಿ ಟಿಕೆಟ್‌ಗಳ ರದ್ದತಿ ಶುಲ್ಕದ ಬಗ್ಗೆಯೂ ಪ್ರಶ್ನೆ ಕೇಳಲಾಗಿತ್ತು. ಆದರೆ ಅದಕ್ಕೆ ರೈಲ್ವೆ ಇಲಾಖೆಯಿಂದ ಕೇವಲ ಹಾರಿಕೆಯ ಹಾಗೂ ಅಸ್ಪಷ್ಟ ಉತ್ತರ ಬಂದಿದೆ. ಆರ್‌ಎಸಿ ಬಗ್ಗೆ ಸರಿಯಾದ ಮಾಹಿತಿ ನೀಡಲು ಇಲಾಖೆ ಹಿಂದೇಟು ಹಾಕುತ್ತಿರುವುದು ಯಾಕೆ? ಏಕೆಂದರೆ, ಆರ್‌ಎಸಿ ಎಂದರೆ ಒಂದೇ ಸೀಟಿನಲ್ಲಿ ಇಬ್ಬರನ್ನು ಕೂರಿಸಿಕೊಂಡು ಪೂರ್ಣ ಟಿಕೆಟ್ ದರ ವಸೂಲಿ ಮಾಡುವ ತಂತ್ರ. ಒಂದು ವೇಳೆ ಆ ಟಿಕೆಟ್ ಕೂಡ ರದ್ದಾದರೆ ಅಲ್ಲಿಯೂ ಕ್ಯಾನ್ಸಲೇಶನ್ ಶುಲ್ಕದ ಭಾರಿ ಲೂಟಿ ನಡೆಯುತ್ತದೆ. ಈ ನಿಖರ ಅಂಕಿ-ಅಂಶಗಳು ಹೊರಬಿದ್ದರೆ ಜನರ ಆಕ್ರೋಶ ಇನ್ನಷ್ಟು ಸ್ಫೋಟಗೊಳ್ಳುತ್ತದೆ ಎಂಬ ಭಯದಿಂದಲೇ ಆರ್‌ಎಸಿ ಬಗ್ಗೆ ಮಾಹಿತಿ ಮುಚ್ಚಿಡಲಾಗುತ್ತಿದೆಯೇ ಎಂಬ ಗಂಭೀರ ಅನುಮಾನ ಮೂಡುತ್ತಿದೆ.


ಚಾರ್ಟ್ ಪ್ರಿಪೇರ್ ಆದಾಗ ಸೀಟು ಸಿಗದೆ ಆ ಟಿಕೆಟ್ ಆಟೋಮ್ಯಾಟಿಕ್ ಆಗಿ ರದ್ದಾದರೆ, "ಕ್ಯಾನ್ಸಲೇಶನ್ ಚಾರ್ಜ್" ಹೆಸರಿನಲ್ಲಿ ಪ್ರತಿ ಟಿಕೆಟ್‌ನಿಂದ ಹಣ ಕಟಾವು ಮಾಡಿಕೊಳ್ಳುವುದು ಎಷ್ಟರಮಟ್ಟಿಗೆ ನ್ಯಾಯ? ರೈಲ್ವೆಯ ಈ ವೈಫಲ್ಯಕ್ಕೆ ಪ್ರಯಾಣಿಕರು ಏಕೆ ದಂಡ ತೆರಬೇಕು? ಸೀಟು ಕೊಡದಿದ್ದ ಮೇಲೆ ಕಟ್ಟಿದ ಪೂರ್ಣ ಹಣವನ್ನು ವಾಪಸ್ ಮಾಡುವುದು ವ್ಯವಸ್ಥೆಯ ಕರ್ತವ್ಯ. ಆದರೆ, ಕೇವಲ ಮೂರೇ ತಿಂಗಳಲ್ಲಿ 40 ಕೋಟಿ ರೂಪಾಯಿಗಳನ್ನು ಕೇವಲ ಕ್ಯಾನ್ಸಲೇಶನ್ ಹೆಸರಿನಲ್ಲಿಯೇ ನುಂಗಿ ನೀರು ಕುಡಿಯುತ್ತಿರುವ ಇಲಾಖೆಯ ಈ "ವೈಟಿಂಗ್ ಲಿಸ್ಟ್ ದಂಧೆ"ಗೆ ಕಡಿವಾಣ ಹಾಕುವವರು ಯಾರು ಎಂಬುದೇ ಈಗಿರುವ ಬಹುದೊಡ್ಡ ಪ್ರಶ್ನೆ.


-ಆದಿತ್ಯ ನಾರಾಯಣ್

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top