ಬೆವರು ಸುರಿಸಿ ದುಡಿದರೂ ಕೈಯಲ್ಲಿ ಉಳಿಯದು ಕಾಸು,
ಬೆಲೆ ಏರಿಕೆಯ ಬಿಸಿಗೆ ಬಡವರ ಬದುಕಿನಲ್ಲಿ ನಿರಾಸೆ.
ಹಾಲು-ತರಕಾರಿ ಕೊಳ್ಳುವುದಕ್ಕೂ ಕಾಡುತ್ತಿದೆ ಸಂಕಟ,
ತುತ್ತಿನ ಅನ್ನಕ್ಕೂ ತತ್ವಾರವಾಗಿ ಕಣ್ಣೀರಾಗಿದೆ ಉಸಿರು!
ಬಸ್ ಪ್ರಯಾಣದ ದರ ಏರಿಕೆ ಜನರಿಗೊಂದು ಹೊರೆ,
ದಿನಸಿ ವಸ್ತುಗಳ ಬೆಲೆ ಏರಿಕೆ ಸಂಸಾರಕ್ಕೆ ಬರೆ.
ಆದಾಯದ ಸೆಲೆ ಬತ್ತಿದೆ, ಖರ್ಚಿನ ಹೊಳೆ ಹರಿಯುತ್ತಿದೆ,
ನೆಮ್ಮದಿಯ ಕನಸು ನುಚ್ಚುನೂರಾಗಿ ಬದುಕು ಸಾಗುತ್ತಿದೆ ನಲುಗಿ!
ಒಲೆಯ ಮೇಲಿನ ಪಾತ್ರೆಯಲ್ಲಿ ಕುದಿಯುತ್ತಿದೆ ಬಡವರ ಗೋಳು,
ದುಡಿಮೆಯ ಬೆವರನ್ನೇ ನುಂಗುತ್ತಿದೆ ಬೆಲೆ ಏರಿಕೆಯ ಜ್ವಾಲೆ.
ರೂಪಾಯಿ ರೂಪಾಯಿಗೂ ಲೆಕ್ಕವಿಡುವಂತಾಗಿದೆ ಬಡವರ ಬಾಳು,
ಆಡಳಿತದ ಕಿವಿಗೆ ಮುಟ್ಟದೇಕೆ ಈ ಜನರ ಕಣ್ಣೀರ ಕೂಗು?
ಬೆಲೆ ನಿಯಂತ್ರಣದ ದಿಟ್ಟ ಕ್ರಮ ಸರ್ಕಾರದಿಂದ ಬರಲಿ,
ಬಡವರ ಬದುಕಿನ ಬವಣೆಗೆ ಪರಿಹಾರದ ಬೆಳಕು ಮೂಡಲಿ.
ದುಡಿಮೆಯ ಫಲ ಜನರ ಮನೆಮನಗಳಲ್ಲಿ ನೆಮ್ಮದಿಯಾಗಿ ನಲಿಯಲಿ,
ಜನಪರ ಆಡಳಿತದ ನಿಜದ ಆಶಯ ಜನಮಾನಸದಲ್ಲಿ ಉಳಿಯಲಿ!
– ಡಾ. ಜಯವೀರ ಎ. ಕೆ. ಖೇಮಲಾಪುರ

