ಬೆಂಗಳೂರು: ಕಾಂಗ್ರೆಸ್ ಸರಕಾರವು ಯಾವುದಕ್ಕೆ ಬೆಲೆ ಏರಿಸಿಲ್ಲ ಎಂದು ಹುಡುಕುವುದೇ ಕಷ್ಟವಾಗಿದೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ರಾಜ್ಯ ಸರಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಜನಾಕ್ರೋಶಕ್ಕೆ ಸ್ಪಂದಿಸಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಇಂದು ಮದಕರಿ ನಾಯಕನ ಆಸ್ಥಾನವನ್ನು ರಕ್ಷಿಸಿದ ವೀರ ವನಿತೆ ಓಬವ್ವರ ಜನ್ಮ ದಿನಾಚರಣೆ. ಅವರಿಗೆ- ಮಹಿಳೆಯರಿಗೆ ಗೌರವ ಸಲ್ಲುವಂತೆ ಮಾಡಿದವರು ಬಸವರಾಜ ಬೊಮ್ಮಾಯಿಯವರು ಎಂದು ವಿವರಿಸಿದರು.
ಹಾಲು, ನೀರಿನ ದರ ಹೆಚ್ಚಳ, ಬಸ್ ಟಿಕೆಟ್ ದರ ಏರಿಸಿದ್ದಾರೆ. ವಿದ್ಯುತ್ ದರವೂ ಏರಲಿದೆ ಎಂದು ಎಚ್ಚರಿಸಿದರು. ಜನರ ಮೇಲೆ ಹೊರೆ ಹಾಕಿ ಇನ್ನೊಂದು ವರ್ಷ ಕಳೆಯುವ ಚಿಂತನೆಯಲ್ಲಿ ಈ ಸರಕಾರ ಇದೆ ಎಂದು ದೂರಿದರು. ಚುನಾವಣೆಗೆ ಮೊದಲು ಮತ ಭಿಕ್ಷೆ ಬೇಡಿದ್ದರು. ಈಗ ಎಲ್ಲಕ್ಕೂ ಕತ್ತರಿ ಹಾಕಿದ್ದಾರೆ ಎಂದು ಟೀಕಿಸಿದರು. ಈಗ ಮೋದಿಜೀ ಅವರು ಕೊಡುವ ಅಕ್ಕಿಯನ್ನಷ್ಟೇ ಕೊಡುತ್ತಿದ್ದಾರೆ ಎಂದು ದೂರಿದರು. ಗೃಹಲಕ್ಷ್ಮಿಯರನ್ನು ಭಿಕ್ಷುಕರನ್ನಾಗಿ ಮಾಡಿದ್ದಾರೆ ಎಂದರು. ಇವರದು ಗ್ಯಾರಂಟಿ ಚೋರಿ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಮತ ಕೇಳಲು ಹೋದಾಗ ಹುಶಾರಾಗಿರಬೇಕು ಎಂದು ವ್ಯಂಗ್ಯವಾಗಿ ನುಡಿದರು. 300, 400, 700, 2 ಸಾವಿರ- ಹೀಗೆ ಗ್ಯಾರಂಟಿ ಹಣ ಜಮಾ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇವರದು ಚಾಕು, ಚೂರಿ ಸಂಸ್ಕೃತಿ:
ಚೂರಿ ಕಳಿಸುತ್ತಾರೆ. ಕಾಂಗ್ರೆಸ್ಸಿನ ಸಂಸ್ಕೃಯೇ ಚಾಕು, ಚೂರಿ ಸಂಸ್ಕೃತಿ ಎಂದು ಟೀಕಿಸಿದರು. 2028ರಲ್ಲಿ ರಾಜ್ಯದ ಜನರು ಮನಸ್ಸು ಮಾಡಿದರೆ ಇವರನ್ನು ಅರಬ್ಬಿ ಸಮುದ್ರದಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಎಚ್ಚರಿಸಿದರು. ಕಾಂಗ್ರೆಸ್ಸಿನ ತುಂಡುಗಳು ಎಲ್ಲೆಡೆ ಇವೆ ಎಂದು ವಿವರಿಸಿದರು. ವಿದ್ಯಾವಂತರ ಹೆಚ್ಚಳದಿಂದ ಕಾಂಗ್ರೆಸ್ಸಿನ ಮನೆ ಬಾಗಿಲು ಹಾಕುವಂತಾಗಿದೆ ಎಂದು ವಿಶ್ಲೇಷಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

