ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಜೃಂಭಣೆಯ 'ಭಾರತೀಯ ಮಹಿಳಾ ದಿನಾಚರಣೆ'

Upayuktha
0

ಡಾ. ರಾಘವಿ ಕೃಷ್ಣಾಚಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ




ಬೆಂಗಳೂರು: ಶ್ರೀಕೃಷ್ಣನು ನರಕಾಸುರನನ್ನು ವಧಿಸಿ, ಅವನ ಬಂಧನದಲ್ಲಿದ್ದ 16,100 ಸ್ತ್ರೀಯರನ್ನು ಮುಕ್ತಗೊಳಿಸಿ ಹೊಸ ಬದುಕನ್ನು ನೀಡಿದ ದಿನ ಹಾಗೂ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವಾದ ನರಕ ಚತುರ್ದಶಿಯ ಸವಿನೆನಪಿನಲ್ಲಿ 2ನೇ ವರ್ಷದ ‘ಭಾರತೀಯ ಮಹಿಳಾ ದಿನಾಚರಣೆ’ಯನ್ನು ಇಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.


ಪೇಜಾವರ ಶ್ರೀಗಳ ಅಪೇಕ್ಷೆ, ಆದೇಶ ಹಾಗೂ ಮಾರ್ಗದರ್ಶನದಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಮತ್ತು ಹೆಳವನಕಟ್ಟೆ ರಂಗನಾಥ ಭಕ್ತವೃಂದದ ಸಂಯುಕ್ತ ಆಶ್ರಯದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಮಹಿಳಾ ಗೋಷ್ಠಿ ಹಾಗೂ ಮಹಿಳಾ ಹರಿದಾಸ ಸಾಹಿತ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಾಧಕರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ವಿತರಣಾ ಸಮಾರಂಭ ನಡೆಯಿತು.


ವಿದ್ವತ್ಪೂರ್ಣ ಮಹಿಳಾ ಗೋಷ್ಠಿ:

ಕಾರ್ಯಕ್ರಮವು ಶ್ರೀಮತಿ ಲತಾ ಉಟಗಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಶ್ರದ್ಧಾಭಕ್ತಿಗಳಿಂದ ಪ್ರಾರಂಭವಾಯಿತು. ತದನಂತರ ನಡೆದ ಮಹಿಳಾ ಗೋಷ್ಠಿಯಲ್ಲಿ ಶ್ರೀಮತಿ ಭಾಮಾ ರಾಘವೇಂದ್ರಾಚಾರ್‌, ಡಾ. ರಾಘವಿ ಕೃಷ್ಣಚಾರ್‌ ಭುಜಂಗ್‌, ಶ್ರೀಮತಿ ಲತಾ ಮೂರ್ತಿ, ಶ್ರೀಮತಿ ಲಕ್ಷ್ಮೀ ಗುಪ್ತ ಹಾಗೂ ಡಾ. ವಿದ್ಯಾ ಕಸ್ಬೆ ಇವರಿಂದ ವಿಷಯಾಧಾರಿತ ವಿದ್ವತ್ಪೂರ್ಣ ಉಪನ್ಯಾಸಗಳು ನೆರವೇರಿದವು.


ವಿಶ್ವದಾದ್ಯಂತ ಭಾರತೀಯ ಮಹಿಳಾ ದಿನಾಚರಣೆ ಆಚರಣೆಯಾಗಲಿ:

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಾ ರಘೋತ್ತಮಾಚಾರ್‌ ಅವರು ಗೋಷ್ಠಿಯನ್ನು ಸಮಾರೋಪಗೊಳಿಸಿ ಮಾತನಾಡಿದರು. "ಅಂಧಕಾರವನ್ನು ಕಳೆದು ಜ್ಞಾನದ ಬೆಳಕನ್ನು ನೀಡಿದ ಈ ದಿನದ ಅಂಗವಾಗಿ ಆಚರಿಸಲಾಗುತ್ತಿರುವ ೨ನೇ ವರ್ಷದ ‘ಭಾರತೀಯ ಮಹಿಳಾ ದಿನಾಚರಣೆ’ಯು ಭಾರತೀಯರು ಎಲ್ಲೆಲ್ಲಿದ್ದಾರೋ ಅಲ್ಲೆಲ್ಲ ವಿಶ್ವದಾದ್ಯಂತ ಆಚರಣೆಯಾಗಬೇಕು" ಎಂಬ ಶುಭಾಶಯ ಹಾಗೂ ಆಶಯವನ್ನು ವ್ಯಕ್ತಪಡಿಸಿದರು. ಅಲ್ಲದೆ, ಇದೇ ಆಶಯದೊಂದಿಗೆ ಟ್ರಸ್ಟ್ ವತಿಯಿಂದ ಇಂದು ರಾಯಚೂರಿನಲ್ಲಿಯೂ ಸಹ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.


ಡಾ. ರಾಘವಿ ಕೃಷ್ಣಾಚಾರ್‌ ಭುಜಂಗ್‌ಗೆ ಜೀವಮಾನ ಸಾಧನೆ ಪ್ರಶಸ್ತಿ:

ಹರಿದಾಸ ಸಾಹಿತ್ಯದ ಪ್ರಸಾರ ಹಾಗೂ ಪ್ರಚಾರದಲ್ಲಿ ಎಲೆಮರೆಯ ಕಾಯಿಯಂತೆ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಡಾ. ರಾಘವಿ ಕೃಷ್ಣಾಚಾರ್‌ ಭುಜಂಗ್‌ ಅವರಿಗೆ ಈ ಸಂದರ್ಭದಲ್ಲಿ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.


ಇದೇ ವೇಳೆಯಲ್ಲಿ 'ಹರಿ ಭಜನೆ ಮಾಡೋ ನಿರಂತರ ಸಮೂಹ'ದ ವತಿಯಿಂದ ವೆಂಕಟೇಶಾಚಾರ್‌ ಅವರ ಪರವಾಗಿ ಕಲ್ಯಾಣ ರಾವ್‌ ಅವರೂ ಸಹ ಡಾ. ರಾಘವಿ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.


ಕಾರ್ಯಕ್ರಮದ ನಿರೂಪಣೆಯನ್ನು ಡಾ. ವೃಂದಾ ಸಂಗಮ್‌ ಅವರು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಮಾರಂಭದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಹಾಗೂ ಮಹಿಳಾ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top