ಮಹಿಳಾ ಸಶಕ್ತೀಕರಣದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ: ರೋಟರಿ ಗವರ್ನರ್ ಸತೀಶ್ ಬೋಳಾರ್

Upayuktha
0




ಸುರತ್ಕಲ್: ಮಹಿಳಾ ಸಶಕ್ತೀಕರಣದಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕಾ ವಲಯ ಹಾಗೂ ಸ್ಥಳೀಯ ವೃತ್ತಿಪರ ಸೇವಾ ಸಂಘಟನೆಗಳೊಂದಿಗೆ ಸೇರಿ ಸ್ತ್ರೀ ಸಬಲೀಕರಣದ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಎಂ.ಆರ್.ಪಿ.ಎಲ್. (MRPL) ಸಂಸ್ಥೆಯ ಸಹಭಾಗಿತ್ವದೊಂದಿಗೆ ಸುರತ್ಕಲ್ ರೋಟರಿ ಕ್ಲಬ್ ಮಾದರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ರೋಟರಿ ಜಿಲ್ಲೆ 3181ರ ಗವರ್ನರ್ ಸತೀಶ್ ಬೋಳಾರ್ ನುಡಿದರು.


ಸುರತ್ಕಲ್ ಕುಲಾಲ ಭವನದಲ್ಲಿ ಸುರತ್ಕಲ್ ರೋಟರಿ ಕ್ಲಬ್, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (KSTA) ಸುರತ್ಕಲ್ ಕ್ಷೇತ್ರ ಸಮಿತಿ ಹಾಗೂ ಎಂ.ಆರ್.ಪಿ.ಎಲ್. ಸಿ.ಎಸ್.ಆರ್. (CSR) ವಿಭಾಗದ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಡ ಮಹಿಳಾ ಸ್ವಉದ್ಯೋಗಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಸಮಾರಂಭದಲ್ಲಿ 70 ಮಂದಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.


ಸ್ವಾವಲಂಬನೆಯಿಂದ ದೇಶದ ಪ್ರಗತಿ:

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಂ.ಆರ್.ಪಿ.ಎಲ್. ಸಿ.ಎಸ್.ಆರ್. ವಿಭಾಗದ ಪ್ರಬಂಧಕರಾದ ಕೇಶವ ಪಾಟಾಳಿ, ಮಹಿಳೆಯರು ಸ್ವಾವಲಂಬಿಗಳಾಗಿ ಮುನ್ನಡೆದಾಗ ದೇಶದ ನಿಜವಾದ ಪ್ರಗತಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಟಿ.ಎನ್. ಮಾತನಾಡಿ, ಮಹಿಳೆಯರು ಸ್ವಉದ್ಯಮ ಹೊಂದುವುದರಿಂದ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವಿದೆ. ಎಂ.ಆರ್.ಪಿ.ಎಲ್. ಸಂಸ್ಥೆಯು ಸ್ಥಳೀಯ ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಪರಿಣಾಮಕಾರಿಯಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು.


ರೋಟರಿ ಜಿಲ್ಲೆ 3181ರ ಸಹಾಯಕ ಗವರ್ನರ್ ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಸುರತ್ಕಲ್ ಕ್ಷೇತ್ರ ಸಮಿತಿಯ ಅಧ್ಯಕ್ಷ ಹೇಮರಾಜ್ ಕಾಂಚನ್ ವಹಿಸಿದ್ದರು.


ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯೆ ಶ್ವೇತಾ ಪೂಜಾರಿ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಐ. ಬಾಬು ಚಂದ್ರ, ಸಮಾಜ ಸೇವಕಿ ಡಾ. ಚಿತ್ರಲೇಖಾ ಸುರತ್ಕಲ್, ಕೆ.ಎಸ್.ಟಿ.ಎ. ರಾಜ್ಯ ಅಧ್ಯಕ್ಷ ಸುರೇಶ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಕೊಡಗು, ರಾಜ್ಯ ಕೋಶಾಧಿಕಾರಿ ಪ್ರಜ್ವಲ್ ಕುಮಾರ್, ಜಿಲ್ಲಾಧ್ಯಕ್ಷ ವಿಜಯ್ ಉರ್ಲಾಂಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


ಚಕ್ರೇಶ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮಿತಿ ಕೋಶಾಧಿಕಾರಿ ಗುಣವತಿ ವಂದಿಸಿದರು. ನಿವೇದಿತ ತುಳಸಿದಾಸ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top