ಡಾ.ಮೈಲಾರಪ್ಪ ಎನ್ ಶಿದ್ದಗಿರಿ ಅವರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಸಾಂಸ್ಕೃತಿಕ ಅಧ್ಯಯನ ಕೃತಿ
ಧಾರ್ಮಿಕ ಕ್ಷೇತ್ರಗಳು ಕೇವಲ ಭಕ್ತಿಯ ಆರಾಧನಾ ಕೇಂದ್ರಗಳಲ್ಲ; ಅವು ನಾಡಿನ ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಸಾಮರಸ್ಯ, ಆಧ್ಯಾತ್ಮಿಕ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಪೋಷಿಸುವ ಜೀವಂತ ನೆಲೆಗಳೂ ಹೌದು. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಳ ಇತಿಹಾಸವನ್ನು ದಾಖಲಿಸುವ ಸಂಶೋಧನಾ ಕೃತಿಗಳು ನಮ್ಮ ಪರಂಪರೆಯ ಅರಿವನ್ನು ವಿಸ್ತರಿಸುವುದರ ಜೊತೆಗೆ ಮುಂದಿನ ತಲೆಮಾರುಗಳಿಗೆ ಅಮೂಲ್ಯ ಆಕರಗಳಾಗುತ್ತವೆ. ಈ ನೆಲೆಯಲ್ಲಿ ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದ ಇತಿಹಾಸ, ಸಂಪ್ರದಾಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಸಮಗ್ರವಾಗಿ ಪರಿಚಯಿಸುವ ಡಾ. ಮೈಲಾರಪ್ಪ ಎನ್. ಶಿದ್ದಗಿರಿ ಅವರ 'ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಸಾಂಸ್ಕೃತಿಕ ಅಧ್ಯಯನ' ಎಂಫಿಲ್ ಕೃತಿ ಗಮನ ಸೆಳೆಯುತ್ತದೆ.
ಉತ್ತಮ ವಾಗ್ಮಿ, ಚಿಂತಕ, ಕ್ರಿಯಾಶೀಲ ಬರಹಗಾರ ಹಾಗೂ ಹಲವು ಮೌಲಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಡಾ. ಶಿದ್ದಗಿರಿ ಪ್ರಸ್ತುತ ರಾಮದುರ್ಗದ ಪ್ರತಿಷ್ಠಿತ ಸಿ ಎಸ್ ಬೆಂಬಳಗಿ ಪದವಿ ಮಹಾವಿದ್ಯಾಲಯದಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು. ಈವರೆಗೂ ಒಟ್ಟು ಏಳು ವಿಶಿಷ್ಟ ಹಾಗೂ ವಿಭಿನ್ನ ಕೃತಿಗಳು ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸುವ ಮೂಲಕ ಓದುಗರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದಿದ್ದಾರೆ. ಸಂಶೋಧನೆ ಹಾಗೂ ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ 15 ಕ್ಕೂ ಹೆಚ್ಚು ಲೇಖನಗಳನ್ನು ರಚಿಸಿದ್ದು ಗಮನೀಯ.
ಪ್ರಸ್ತುತ "ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಸಾಂಸ್ಕೃತಿಕ ಅಧ್ಯಯನ" ಇವರ ಅಕ್ಷರಯಾನದ ಮಹತ್ವದ ಆರಂಭಿಕ ಕೃತಿಯಿದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಎಂ.ಫಿಲ್. ಪದವಿಗಾಗಿ ಸಿದ್ಧಪಡಿಸಿದ ಈ ಸಂಶೋಧನ ಪ್ರಬಂಧವು ಅವರ ಅಧ್ಯಯನಶೀಲತೆ, ಸಂಶೋಧನಾ ಮನೋಭಾವ ಮತ್ತು ಸಾಂಸ್ಕೃತಿಕ ಕಾಳಜಿಗೆ ಉತ್ತಮ ಸಾಕ್ಷಿಯಾಗಿದೆ. ತಮ್ಮ ಹೆತ್ತ ತಂದೆ-ತಾಯಿಯವರಿಗೆ ಈ ಕೃತಿಯನ್ನು ಅರ್ಪಿಸುವ ಮೂಲಕ ಮಾತೃಪಿತೃ ಋಣದ ಕೃತಜ್ಞತೆಯ ಭಾವವನ್ನೂ ಇವರು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ.
ಕೃತಿಯ ಆರಂಭದ ಪುಟಗಳಲ್ಲಿಯೇ ಭಕ್ತರ ಕಾಮಧೇನು, ಪವಾಡ ಪುರುಷರೆಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀ ಸಿದ್ಧಾರೂಢ ಸ್ವಾಮಿಗಳವರ ಹಾಗೂ ಮೌನಯೋಗಿ ಶ್ರೀ ಗುರುನಾಥರೂಢರ ವರ್ಣಮಯ ಭಾವಚಿತ್ರಗಳು ಓದುಗರ ಮನಸ್ಸಿನಲ್ಲಿ ಭಕ್ತಿ ಮತ್ತು ಗೌರವದ ಭಾವವನ್ನು ಮೂಡಿಸುತ್ತವೆ. ಕೃತಿಯ ಬಾಹ್ಯ ಸೌಂದರ್ಯಕ್ಕೆ ಇವು ಕಳೆ ನೀಡುವುದರ ಜೊತೆಗೆ ಅದರ ಅಧ್ಯಯನದ ಆಶಯವನ್ನೂ ಸಾಂಕೇತಿಕವಾಗಿ ಪರಿಚಯಿಸುತ್ತವೆ.
ಕೃತಿಯ ಪರಿವಿಡಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಷಯದ ವ್ಯಾಪ್ತಿ ಮತ್ತು ಅಧ್ಯಯನದ ಕ್ರಮಬದ್ಧತೆ ನಮಗೆ ಮನದಟ್ಟಾಗುತ್ತದೆ. ಕರ್ನಾಟಕದಲ್ಲಿ ಮಠಗಳು ಬೆಳೆದು ಬಂದ ಬಗೆ ಹಾಗೂ ಸಂಸ್ಕೃತಿಯ ಪರಿಚಯದಿಂದ ಅಧ್ಯಯನವನ್ನು ಆರಂಭಿಸಿರುವ ಲೇಖಕರು, ಮೊದಲ ಅಧ್ಯಾಯದಲ್ಲಿಯೇ ಮಠಗಳ ಐತಿಹಾಸಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಮಹತ್ವದತ್ತ ಗಮನ ಹರಿಸಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಶ್ರೀ ಸಿದ್ಧಾರೂಢ ಮಠದ ಇತಿಹಾಸ ಮತ್ತು ಪೀಠ ಪರಂಪರೆಯನ್ನು ಪರಿಚಯಿಸುವ ಮೂಲಕ ಮಠದ ಐತಿಹಾಸಿಕ ಹಿನ್ನೆಲೆಯನ್ನು ಸೊಗಸಾಗಿ ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಮೂರನೆಯ ಅಧ್ಯಾಯದಲ್ಲಿ ಶ್ರೀ ಸಿದ್ಧಾರೂಢ ಮಠದ ಸಂಪ್ರದಾಯಗಳು, ಭಕ್ತರು, ಪೂಜಾ ಪದ್ಧತಿ, ಜಾತ್ರೆ ಮತ್ತು ಉತ್ಸವಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಿರುವುದು ವಿಶೇಷ. ಧಾರ್ಮಿಕ ಸಂಸ್ಥೆಯೊಂದರ ಮಹತ್ವವನ್ನು ಕೇವಲ ಪೂಜಾ ವಿಧಿವಿಧಾನಗಳಿಗೆ ಸೀಮಿತಗೊಳಿಸದೆ, ಅದರ ಸಾಮಾಜಿಕ ಚಟುವಟಿಕೆಗಳು ಮತ್ತು ಜನಜೀವನದೊಂದಿಗಿನ ಸಂಬಂಧದ ನೆಲೆಯಲ್ಲಿ ಪರಿಚಯಿಸುವುದು ಲೇಖಕರ ವಿಶಾಲ ದೃಷ್ಟಿಕೋನವನ್ನು ಸೂಚಿಸುತ್ತದೆ. ನಾಲ್ಕನೆಯ ಅಧ್ಯಾಯದಲ್ಲಿ ಶ್ರೀ ಸಿದ್ಧಾರೂಢ ಮಠದ ಸಾಹಿತ್ಯಿಕ ಆಯಾಮವನ್ನು ಚೆನ್ನಾಗಿ ಪರಿಶೀಲಿಸಲಾಗಿದೆ. ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕುರಿತು ರಚಿತವಾದ ಗ್ರಂಥಗಳು, ಲೇಖನಗಳು ಹಾಗೂ ಶ್ರೀ ಮಠದಿಂದ ಪ್ರಕಟಿತ ಸಾಹಿತ್ಯ ಕೃತಿಗಳ ದಾಖಲಾತಿ ಈ ಅಧ್ಯಯನಕ್ಕೆ ಮತ್ತೊಂದು ವಿಶಿಷ್ಟ ಆಯಾಮವನ್ನು ಒದಗಿಸುತ್ತದೆ. ಸಮಾರೋಪ, ಅನುಬಂಧ ಮತ್ತು ಗ್ರಂಥಋಣಗಳ ಮೂಲಕ ಸಂಶೋಧನೆಯ ಸ್ವರೂಪವನ್ನು ಪೂರ್ಣಗೊಳಿಸಿರುವುದು ಕೃತಿಯ ಶೈಕ್ಷಣಿಕ ಮೌಲ್ಯವನ್ನು ಹೆಚ್ಚಿಸಿದೆ.
ಈ ಕೃತಿಗೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶ್ರೀಮತಿ ಎಸ್. ಎಲ್. ಸಣ್ಣೆಲ್ಲಪ್ಪನವರ ಅವರ ಮಾರ್ಗದರ್ಶನ ದೊರೆತಿರುವುದು ಗಮನಾರ್ಹ. ಹಿರಿಯ ಜಾನಪದ ಸಾಹಿತಿ, ಪ್ರಬುದ್ಧ ಚಿಂತಕರು, "ವಿನಯದ ಒಡೆಯ" ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಆರ್. ಬಿ. ಚಿಲಮಿ ಅವರು ತಮ್ಮ ಮುನ್ನುಡಿಯಲ್ಲಿ ಕೃತಿಯ ಆಶಯ ಮತ್ತು ಲೇಖಕರ ಪ್ರಯತ್ನವನ್ನು ಪ್ರೀತಿಯಿಂದ ಮೆಚ್ಚಿಕೊಂಡಿದ್ದಾರೆ. ಅದೇ ರೀತಿ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿಯ ಮಾಜಿ ಅಧ್ಯಕ್ಷರು ಹಾಗೂ ವಿಶ್ರಾಂತ ಐಪಿಎಸ್ ಅಧಿಕಾರಿಗಳಾದ ಎಸ್. ಎಸ್. ಹಸಬಿ ಅವರು ಬೆನ್ನುಡಿ ಬರೆದು ಲೇಖಕರ ಸಂಶೋಧನಾ ಪ್ರಯತ್ನಕ್ಕೆ ಮೆಚ್ಚುಗೆಯ ಮಾತುಗಳ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಇಂತಹ ಹಿರಿಯರ ಮಾರ್ಗದರ್ಶನ ಮತ್ತು ಮೆಚ್ಚುಗೆ ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
ವಿಶೇಷವಾಗಿ, ಕೃತಿಯ ಕೊನೆಯ ಮೂರು ವರ್ಣಮಯ ಪುಟಗಳಲ್ಲಿ ಶ್ರೀ ಸಿದ್ಧಾರೂಢ ಮಠದ ಚಿತ್ರಗಳು, ಶ್ರೀ ಸಿದ್ಧಾರೂಢಮಹಾಸ್ವಾಮಿಗಳವರ ಹಾಗೂ ಶ್ರೀ ಗುರುನಾಥರೂಢರ ವಿಶೇಷ ಭಾವಚಿತ್ರಗಳು ಮತ್ತು ಮಠಕ್ಕೆ ಸಂಬಂಧಿಸಿದ ವರ್ಣಮಯ ಛಾಯಾಚಿತ್ರಗಳನ್ನು ಅಳವಡಿಸಿರುವುದು ಓದುಗರಿಗೆ ದೃಶ್ಯಾನುಭವದೊಂದಿಗೆ ಭಕ್ತಿಭಾವವನ್ನೂ ಉಂಟುಮಾಡುತ್ತದೆ. ಚಿತ್ರಗಳು ಕೃತಿಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಅಧ್ಯಯನದ ವಿಷಯವನ್ನು ಕಣ್ಣೆದುರಿಗೆ ಕಟ್ಟಿಕೊಡುವ ಪ್ರಯತ್ನವಾಗಿವೆ.
ಒಟ್ಟಾರೆಯಾಗಿ, 'ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಸಾಂಸ್ಕೃತಿಕ ಅಧ್ಯಯನ' ಕೃತಿಯು ಒಂದು ಧಾರ್ಮಿಕ ಕ್ಷೇತ್ರದ ಪರಿಚಯಕ್ಕಷ್ಟೇ ಸೀಮಿತವಾಗದೆ, ಮಠಗಳ ಐತಿಹಾಸಿಕ ಹಿನ್ನೆಲೆ, ಆಧ್ಯಾತ್ಮಿಕ ಪರಂಪರೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಅರಿಯಲು ಪೂರಕವಾಗುವ ಸಂಶೋಧನಾತ್ಮಕ ಪ್ರಯತ್ನವಾಗಿದೆ. ಭಕ್ತಿ ಮತ್ತು ಸಂಸ್ಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಅಧ್ಯಯನದ ನೆಲೆಯಲ್ಲಿ ಗುರುತಿಸುವ ಈ ಕೃತಿ ಸಂಶೋಧನಾಸಕ್ತರು, ಸಾಹಿತ್ಯಾಭಿಮಾನಿಗಳು, ಮಠ-ಮಾನ್ಯಗಳ ಇತಿಹಾಸವನ್ನು ತಿಳಿಯಬಯಸುವವರು ಹಾಗೂ ಸಾಂಸ್ಕೃತಿಕ ಅಧ್ಯಯನದ ವಿದ್ಯಾರ್ಥಿಗಳಿಗೆ ಉಪಯುಕ್ತ ಆಕರವಾಗಬಲ್ಲದು.
ಅಕ್ಷರಗಳ ಮೂಲಕ ಪರಂಪರೆಯನ್ನು ದಾಖಲಿಸುವುದು ಎಂದರೆ ಕೇವಲ ಗತಕಾಲವನ್ನು ನೆನಪಿಸಿಕೊಳ್ಳುವುದಲ್ಲ; ಅದರ ಮೌಲ್ಯಗಳನ್ನು ವರ್ತಮಾನಕ್ಕೆ ಪರಿಚಯಿಸಿ ಭವಿಷ್ಯಕ್ಕೆ ದಾಟಿಸುವ ಸಾರ್ಥಕ ಕಾರ್ಯ. ಆ ದೃಷ್ಟಿಯಿಂದ ಡಾ. ಮೈಲಾರಪ್ಪ ಎನ್. ಶಿದ್ದಗಿರಿ ಅವರ ಈ ಕೃತಿ ಅವರ ಸಂಶೋಧನಾ ಬದ್ಧತೆಯ ಅಭಿವ್ಯಕ್ತಿಯೂ ಹೌದು; ಕನ್ನಡ ಸಾಂಸ್ಕೃತಿಕ ಅಧ್ಯಯನದ ಅಕ್ಷರಲೋಕಕ್ಕೆ ಅವರು ನೀಡಿರುವ ಅರ್ಥಪೂರ್ಣ ಕೊಡುಗೆಯೂ ಹೌದು. ಅವರಿಂದ ಇಂತಹ ಇನ್ನಷ್ಟು ಸೃಜನೇತರ ಮೌಲಿಕ ಕೃತಿಪುಷ್ಪಗಳು ಅವರ ಮಾನಸ ಗರ್ಭದಿಂದ ಬೆಳಕು ಕಾಣಲಿ ಎಂದು ನಾನು ಅಭಿಮಾನದಿಂದ ಆಶಿಸುತ್ತೇನೆ.
- ಡಾ. ಜಯವೀರ ಎ. ಕೆ.
ಕನ್ನಡ ಪ್ರಾಧ್ಯಾಪಕರು
ಖೇಮಲಾಪುರ

