555 ದಿನಗಳ ‘ಬಾಬ್ ಗೋಲ್ಡನ್ ಗೋಲ್’ ಠೇವಣಿ ಯೋಜನೆ: ಬಡ್ಡಿದರ ಶೇ. 7.50ಕ್ಕೆ ಹೆಚ್ಚಳ

Upayuktha
0

ಮಂಗಳೂರು:  ಬ್ಯಾಂಕ್ ಆಫ್ ಬರೋಡಾ ತನ್ನ 555 ದಿನಗಳ ವಿಶೇಷ ಅವಧಿ ಠೇವಣಿ ಯೋಜನೆಯಾದ ‘ಬಾಬ್ ಗೋಲ್ಡನ್ ಗೋಲ್’ ಯೋಜನೆಯ ಬಡ್ಡಿದರವನ್ನು 10 ಮೂಲಾಂಶಗಳಷ್ಟು (10 ಬೇಸಿಸ್ ಪಾಯಿಂಟ್) ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರಗಳು ನವೆಂಬರ್ 12ರಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರಿಗೆ ವಾರ್ಷಿಕ ಗರಿಷ್ಠ ಶೇ. 7.50ರಷ್ಟು ಬಡ್ಡಿ ಪಡೆಯುವ ಅವಕಾಶ ಲಭ್ಯವಾಗಿದೆ.


ರೂ. 3 ಕೋಟಿಗಿಂತ ಕಡಿಮೆ ಮೊತ್ತದ ಚಿಲ್ಲರೆ ಅವಧಿ ಠೇವಣಿಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಸಾಮಾನ್ಯ ಗ್ರಾಹಕರಿಗೆ ಹಿಂಪಡೆಯಬಹುದಾದ ಠೇವಣಿ (ಕಾಲೆಬಲ್) ಮೇಲೆ ಶೇ. 6.85 ಹಾಗೂ ಹಿಂಪಡೆಯಲಾಗದ ಠೇವಣಿ (ನಾನ್-ಕಾಲೆಬಲ್) ಮೇಲೆ ಶೇ. 6.90 ಬಡ್ಡಿ ದೊರೆಯಲಿದೆ. ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ. 7.35 ಮತ್ತು ಶೇ. 7.40 ಬಡ್ಡಿ ಲಭ್ಯವಿದೆ. 80 ವರ್ಷ ಮತ್ತು ಮೇಲ್ಪಟ್ಟ ಸೂಪರ್ ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ. 7.45 ಮತ್ತು ಶೇ. 7.50 ಬಡ್ಡಿದರ ನಿಗದಿಪಡಿಸಲಾಗಿದೆ.


ಬಡ್ಡಿದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಠೇವಣಿದಾರರಿಗೆ ಹೆಚ್ಚಿನ ಆದಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಇತರ ಅವಧಿಗಳ ಸ್ಥಿರ ಠೇವಣಿಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.


ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕಿ ಬೀನಾ ವಾಹೀದ್ ಮಾತನಾಡಿ, ಬೆಳೆಯುತ್ತಿರುವ ಆರ್ಥಿಕತೆಯ ಸಾಲದ ಅಗತ್ಯಗಳನ್ನು ಪೂರೈಸುವುದರ ಜತೆಗೆ ಠೇವಣಿದಾರರಿಗೆ ಸ್ಪರ್ಧಾತ್ಮಕ ಆದಾಯ ಒದಗಿಸುವುದು ಬ್ಯಾಂಕಿನ ಆದ್ಯತೆಯಾಗಿದೆ. ಬಾಬ್ ಗೋಲ್ಡನ್ ಗೋಲ್ ಯೋಜನೆಯ ಬಡ್ಡಿದರ ಹೆಚ್ಚಳವು ಮಧ್ಯಮ ಅವಧಿಗೆ ಸ್ಥಿರ ಹಾಗೂ ಖಚಿತ ಆದಾಯ ಬಯಸುವ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.


ಗ್ರಾಹಕರು ಬ್ಯಾಂಕಿನ bob World ಮೊಬೈಲ್ ಆ್ಯಪ್, bob World Internet ನೆಟ್ ಬ್ಯಾಂಕಿಂಗ್ ಅಥವಾ ದೇಶದ ಯಾವುದೇ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮೂಲಕ ಠೇವಣಿ ತೆರೆಯಬಹುದು. ಹೊಸ ಗ್ರಾಹಕರು ಉಳಿತಾಯ ಖಾತೆ ತೆರೆಯದೆಯೂ ಬ್ಯಾಂಕಿನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸ್ಥಿರ ಠೇವಣಿ ಆರಂಭಿಸಬಹುದು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top