ಬಾಲ್ಯದಿಂದ ಪ್ರೀತಿಯುಣಬಡಿಸಿ
ಕಣ್ಣ ರೆಪ್ಪೆಯಂತೆ ಕಾದು,
ಯೌವನದಲ್ಲಿ ಮಗಳ ಬದುಕಿಗೊಂದು ಅರ್ಥ ಕಲ್ಪಿಸಿ
ಆ ಜೀವನವೇ ನರಕವೆಂದರಿತಾಗ ಓ ಹೆತ್ತ ಕರುಳೇ ನಿನ್ನ ಬೇನೆಯ ಅರಿಯುವವರಾರು...?
ಬಾಲ್ಯದಲ್ಲಿ ಮಗಳ ಗೊಂಬೆಯಾಟ ನೋಡಿ ಸಂತಸಪಟ್ಟು,
ಬದುಕಲ್ಲಿ ಯಾರದೋ ಕೈ ಗೊಂಬೆಯಾಗಿ ಜೀವವೇ ಕಳೆದುಕೊಂಡ
ತನ್ನ ರಕ್ತವನ್ನು ನೋಡಿದ ಓ ಹೆಂಗರುಳೆ ನಿನ್ನ ಒಳ ರೋದನೆ ತಿಳಿದವರಾರು...?
ಕನಸು ಹೊತ್ತು ಕದವ ದಾಟಿದಳು ಅವಳು
ಹೊಸ ಬಾಳ್ವೆ ದೊರೆಯುವುದೆಂಬ ನವ ಬಯಕೆಯೊಳು,
ಕಣ್ಣಂಚಲ್ಲಿ ಜಾರಿದ ಬಾಷ್ಪವ ಮೆಲ್ಲನೆ ಒರೆಸಿಕೊಂಡಳು
ತನ್ನ ಮನದ ಬೇಗೆ ಹೊರ ಅರಿಯಬಾರದೆಂದು
ನಿಮ್ಮ ಮನೆ ಬೆಳಗಲೆಂದು
ಬಂದಿಹಳು ಅವಳು
ಕಣ್ಣೀರ ಧಾರೆಯಿಂದ ಕೈ ತೊಳೆಯುವಂತೆ ಮಾಡದಿರಿ
ಪ್ರತೀ ತವರಿನ ಪ್ರೀತಿಯ ಕಣ್ಮಣಿ ಇವಳು.
- ಸಂಶೀನ ಸೂರ್ಯ

