ಪ್ರಪಂಚ ಒಂದೇಯಾದರೂ ಇಲ್ಲಿ ಪ್ರತಿಯೊಬ್ಬರದ್ದೂ ಪಾತ್ರಗಳು ವಿಭಿನ್ನವಾಗಿರುತ್ತವೆ. ಹೊರ ಜಗತ್ತಿಗೆ ಕಾಣುವ ನಗು, ಸಾಧನೆ ಮತ್ತು ದಿನನಿತ್ಯದ ಚಟುವಟಿಕೆಗಳೇ ನದುಕಿನ ನೈಜತೆಯಾಗಿರುವುದಿಲ್ಲ. “ಅರಿತವರಾರಿಲ್ಲಿ ನನ್ನ ಅಂತರಂಗ, ನನಗಷ್ಟೇ ಗೊತ್ತು ನನ್ನ ಅಂತರಾಳದ ಕಲರವ” ಎಂಬ ಮಾತಿನಂತೆ, ವ್ಯಕ್ತಿಯ ಮನದಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಅವನಿಗೇ ಮಾತ್ರ ಸಾಧ್ಯ.
ಪ್ರತಿಯೊಬ್ಬರ ಮನದಾಳದಲ್ಲೂ ಒಂದು ಪ್ರತ್ಯೇಕ ಜಗತ್ತಿದೆ. ಹೊರನೋಟಕ್ಕೆ ಪ್ರಶಾಂತವಾಗಿ ಕಾಣುವ ವ್ಯಕ್ತಿಯ ಒಳಗಡೆ ಆಸೆ, ಆಕಾಂಕ್ಷೆ, ಕನಸು, ನೋವು, ಹೇಳಲಾಗದ ಭಾವ, ಯಾರಿಗೂ ಕಾಣಿಸದಂತಹ ನೋವು ಅಡಗಿ ಕೂತಿರುತ್ತವೆ. ಕೆಲವೊಮ್ಮೆ ಏಕಾಂತದಲ್ಲಿದ್ದಾಗ ಅವೆಲ್ಲವೂ ಮೈದಡವಿ ಎದ್ದಾಗ ಆಕ್ರೋಶ, ದ್ವೇಷ, ಅಸೂಹೆ, ಅಸಹಾಯಕತೆ ಗಳೆಲ್ಲವೂ ಜನ್ಮ ತಳೆದು ಮನುಷ್ಯ ರಕ್ಕಸನಾಗುತ್ತಾನೆ, ಅನಾಥ ಪ್ರಜ್ಞೆ ಆವರಿಸಿ ಬಿಕ್ಕಿ ಬಿಕ್ಕಿ ಅತ್ತು ಹಗುರಾಗುತ್ತಾನೆ. ಬದುಕಿನ ನಾಳೆಯ ಪುಟ ತಿರುವಿ ಹೆಜ್ಜೆ ಹಾಕುತ್ತಾನೆ ಇದೆಲ್ಲವೂ ಯಾರಿಗೂ ಕಾಣದ ತನ್ನದೇಯಾದ ಏಕಾಂತದ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಎದರುರಾಗುವ ಅಧ್ಯಾಯ.
ಆಧುನಿಕ ಜಗತ್ತಿನಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಬದುಕುವುದು ಮನುಷ್ಯನಿಗೆ ಅನಿವಾರ್ಯವಾಗಿದೆ. ಬದುಕಿನ ಪಲಿತಾಂಶವನ್ಬು ಮುಖಭಾವ ಅಥವಾ ನಗುವಿನ ಆಧಾರದ ಮೇಲೆ ನಿರ್ಣಯಿಸಲಾಗದು. ಬದುಕಿನಲ್ಲಿ ಸ್ನೇಹಿತರು, ಕುಟುಂಬಸ್ಥರು ಹಾಗೂ ಆತ್ಮೀಯರು ಇದ್ದರೂ, ಕೆಲವು ಸಂದರ್ಭಗಳಲ್ಲಿ ನಮ್ಮ ಭಾವನೆಗಳನ್ನು ಏಕಾಂಗಿಯಾಗಿಯೇ ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಒಂಟಿತನ ಆವರಿಸುತ್ತದೆ. ಅಂತಹ ಸಂದರ್ಭದಲ್ಲಿ ಕಣ್ಣೀರು ಒರೆಸುವವರು ಸಿಗಬಹುದು; ಆದರೆ ಆ ಕಣ್ಣೀರಿನ ಹಿಂದಿರುವ ನೋವಿನ ನಿಜವಾದ ಕಾರಣವನ್ನು ತಿಳಿಯಲು ಯಾರು ಪ್ರಯತ್ನಿಸುವುದಿಲ್ಲ. ಹೀಗಾಗಿ ಆ ವೇದನೆಯ ಅಳಲನ್ನು ಅನುಭವಿಸುವುದು ನಮಗೇ ಮಾತ್ರ ಸಾಧ್ಯ .
ಅದೇ ರೀತಿ ಯಶಸ್ಸಿನ ಹಿಂದೆ ಅಡಗಿರುವ ಪರಿಶ್ರಮ, ತ್ಯಾಗ ಮತ್ತು ಹೋರಾಟದ ಕಥೆಯೂ ಅವರಿಗೆ ಮಾತ್ರ ತಿಳಿದಿರುತ್ತದೆ. ಹೊರಗಿನವರು ಸಾಧನೆಯನ್ನು ನೋಡುತ್ತಾರೆ, ಆದರೆ ಅದರ ಹಿಂದಿನ ಪ್ರಯತ್ನ, ಬೆವರು, ಸೋಲು, ಅವಮಾನ ಮತ್ತು ಸಂಘರ್ಷ ಗಳನ್ನು ಅನುಭವಿಸಿದವರು ಮಾತ್ರ ಅವರೊಬ್ಬರೇಯಾಗಿರುತ್ತಾರೆ. ಈ ಬದುಕಿನಲ್ಲಿ ಎಲ್ಲರೂ ನಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಕೆಲವೊಮ್ಮೆ ತಪ್ಪು ಕಲ್ಪನೆಯಾಗಬಹುದು. ಆದ್ದರಿಂದ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವುದು ಅತ್ಯಂತ ಮುಖ್ಯ. ನಮ್ಮ ಅಂತರಾಳದ ಧ್ವನಿಗೆ ಕಿವಿಗೊಟ್ಟಾಗ ಮಾತ್ರ ನಿಜವಾದ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ.
ಇತರರ ಮೆಚ್ಚುಗೆಗಾಗಿ ಬದುಕುವುದನ್ನು ಬಿಟ್ಟು, ನಮ್ಮ ಮನಸ್ಸಿನ ಮಾತಿಗೆ ಅನುಗುಣವಾಗಿ ಜೀವನ ನಡೆಸಿದಾಗ ಬದುಕು ಹೆಚ್ಚು ಅರ್ಥಪೂರ್ಣವಾಗುತ್ತದೆ. ಪ್ರಪಂಚಕ್ಕೆ ನಿಮ್ಮ ಬಹಿರಂಗ ಮಾತ್ರ ಪರಿಚಿತ; ಆದರೆ ನಿಮ್ಮ ಅಂತರಾಳದಲ್ಲಿ ಅಡಗಿರುವ ಅದ್ಭುತ ಭಾವನೆ ನಿಮಗೆ ಮಾತ್ರ ಸ್ವಂತ.


