ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

Shreya Hegde
0

'ಜನತಾ ದರ್ಪಣ' ವಾರ್ಷಿಕ ಸವಿ ಸಂಚಿಕೆ ಬಿಡುಗಡೆ




ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ 2026-27ನೇ ಸಾಲಿನ 'ಜನತಾ ದರ್ಪಣ' ವಾರ್ಷಿಕ ಸವಿ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವು ಅಡ್ಯನಡ್ಕದ ಜನತಾ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನವೆಂಬರ್ 7ರಂದು ನಡೆಯಿತು.


ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಡೆಕಲ್ಲು - ಪುತ್ತೂರು ಇಲ್ಲಿನ ಪ್ರಾಂಶುಪಾಲರಾದ ಪ್ರೊ| ಸುಬ್ಬಪ್ಪ ಕೈಕಂಬ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.


ಜನತಾ ವಿದ್ಯಾಸಂಸ್ಥೆಗಳ 2026-27ನೇ ಸಾಲಿನ 'ಜನತಾ ದರ್ಪಣ' ವಾರ್ಷಿಕ ಸವಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಚಿಕೆಯ ಸಂಪಾದಕರಾದ ಕನ್ನಡ ಅಧ್ಯಾಪಕ ಶಿವಕುಮಾರ್ ಸಾಯ ಅವರು ಸಂಪಾದಕರ ನುಡಿಗಳನ್ನಾಡಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿಗಳಾದ ರಮೇಶ್ ಎಂ. ಬಾಯಾರು, ಕೋಶಾಧಿಕಾರಿಗಳಾದ ಕೇಶವ ಭಟ್ ಚವರ್ಕಾಡು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್ ಮುಳಿಯಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜನತಾ ವಿದ್ಯಾಸಂಸ್ಥೆಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ., ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ., ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಬಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಆರ್. ಎಸ್. ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ. ಕುಂಞ ನಾಯ್ಕ್ ಅವರು ವಾರ್ಷಿಕ ವರದಿಗಳನ್ನು ಮಂಡಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಆರ್.ಎಸ್. ಅವರು ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಕು. ಸುನಿಧಿ ಕಾರ್ಯಕ್ರಮ ನಿರೂಪಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ವಂದಿಸಿದರು.


ವಾರ್ಷಿಕೋತ್ಸವದ ಅಂಗವಾಗಿ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ನಾಟಕ - ನೃತ್ಯ ರೂಪಕಗಳು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಪುಣಿಂಚಿತ್ತಾಯ ಅವರ ನಿರ್ದೇಶನದಲ್ಲಿ 'ದಿಲೀಪ ಚರಿತ್ರೆ' ವಿದ್ಯಾರ್ಥಿಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top