25ರಂದು ಯುವ ಕಲಾವಿದೆ ಎನ್. ಪ್ರಿಯಾ ರಂಗಪ್ರವೇಶ

Shreya Hegde
0

ಗುರು ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ

ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ

‌



ಬೆಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ಹೊಸ ಭರವಸೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಯುವ ಕಲಾವಿದೆ ಎನ್. ಪ್ರಿಯಾ ಅವರು ರಂಗ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯ ಸಂಯೋಗ ಕಲಾ ಶಾಲೆಯ ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ಎನ್. ಪ್ರಿಯಾ ಅವರು ಅಕ್ಟೋಬರ್ 25 ರಂದು ನಗರದ ಎಡಿಎ ರಂಗಮಂದಿರದಲ್ಲಿ ರಂಗಪ್ರವೇಶ ಮಾಡುವ ಶುಭ ಸಂದರ್ಭ ಸಂಪನ್ನಗೊಳ್ಳಲಿದೆ. ಅಂದು ಸಂಜೆ 4:30 ರಿಂದ ನಡೆಯಲಿರುವ ಸಮಾರಂಭಕ್ಕೆ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಸ್ಪಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಟಿ. ಎನ್. ಜವರಾಯಿಗೌಡ, ಚಿತ್ರನಟ ಮನೋಜ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪಾಲಕರಾದ ಮಂಜುಳಾ ಮತ್ತು ನಾರಾಯಣಸ್ವಾಮಿ ಉಪಸ್ಥಿತರಿರಲಿದ್ದಾರೆ.


ಹಿಮ್ಮೇಳ ಕಲಾವಿದರು:  

ನಟುವಾಂಗದಲ್ಲಿ ವಿದುಷಿ ಲತಾ, ಗಾಯನದಲ್ಲಿ ನಂದಕುಮಾರ್, ಮೃದಂಗದಲ್ಲಿ ಜನಾರ್ಧನ, ಕೊಳಲಿನಲ್ಲಿ ಕಾರ್ತಿಕ್, ರಿದಂ ಪ್ಯಾಡ್ ನಲ್ಲಿ ಭಾರ್ಗವ ಹಾಲಂಬಿ ಸಹಕಾರ ನೀಡಲಿದ್ದಾರೆ.


ವಿಶೇಷ ಪ್ರಸ್ತುತಿ:

ಪ್ರಿಯಾ ಅವರು ರಂಗಪ್ರವೇಶದ ನಿಮಿತ್ತ ಕೀರ್ತನೆ, ಅಲರಿಪು, ಭೈರವಾಷ್ಟಕಂ, ವರ್ಣ, ಅಂತಪ್ಪುರ ಗೀತೆ,  ದೇವರ ನಾಮ ಮತ್ತು ತಿಲ್ಲಾನಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮಂಜುಳಾ ಮತ್ತು ನಾರಾಯಣಸ್ವಾಮಿ ಅವರ ಪುತ್ರಿ ಪ್ರಿಯಾಗೆ  ಬಾಲ್ಯದಿಂದಲೇ ನರ್ತನ ಆಸಕ್ತಿ ಇತ್ತು.  ಗುರು ಲತಾ ಲಕ್ಷ್ಮೀಶ ಅವರ ಶಿಷ್ಯತ್ವವನ್ನು ಪಡೆದು ಅವರ ಗರಡಿಯಲ್ಲೇ ಪಳಗಿ ಸೀನಿಯರ್ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸಿದರು. ಈಗ ವಿದ್ವತ್ ಹಂತದ ಪರೀಕ್ಷೆಗೆ ತಯಾರಿಯಲ್ಲಿ ತೊಡಗಿದ್ದಾರೆ. ಎಂ ಎಸ್ಸಿ ಮೈಕ್ರೋ ಬಯಾಲಜಿ ಅಧ್ಯಯನ ಮಾಡುತ್ತಿರುವ ಪ್ರಿಯಾ ಅವರು ಫ್ಯಾಷನ್ ಡಿಸೈನರ್ ಕೂಡ ಆಗಿರುವುದು ಬಹಳ ವಿಶೇಷ.  


ಬಹುವಿಧ ಪ್ರತಿಭೆ:

ಶಿಕ್ಷಣ, ಕಲೆ, ಕ್ರೀಡೆ ಮತ್ತು ವಸ್ತ್ರ ವಿನ್ಯಾಸದಲ್ಲಿ ಬಹುಮುಖ ಪ್ರತಿಭೆಯಾದ ಪ್ರಿಯಾ ಅವರಿಗೆ ಸ್ಕೌಟ್ ಮತ್ತು ಗೈಡ್ ರಾಜ್ಯ ಪುರಸ್ಕಾರವೂ  ಪ್ರಾಪ್ತವಾಗಿದೆ. ಈಕೆ ರಾಜ್ಯಮಟ್ಟದ ವಾಲಿಬಾಲ್ ಪಟುವೂ ಆಗಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ನೃತ್ಯಪಥದಲ್ಲಿ ಈಕೆ ರಂಗ ಪ್ರವೇಶ ಮಾಡುತ್ತಿರುವುದು ಹೊಸ ಮೈಲಿಗಳನ್ನು ಸ್ಥಾಪಿಸಲಿದೆ.


ಗುರುವಿನ ಹೆಗ್ಗಳಿಕೆ:

ಮಲೆನಾಡಿನ ನಡುಮನೆ ಸಾಗರ ತಾಲೂಕಿನ ಭೀಮನಕೋಣೆ ಮೂಲದ ವಿದುಷಿ ಲತಾ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ಸಂಯೋಗ ಕಲಾ ಶಾಲೆಯ ಬ್ಯಾನರ್ ಅಡಿ ಈವರೆಗೆ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ ಗುರುವಾಗಿದ್ದಾರೆ. ಯಶಸ್ವಿಯಾಗಿ 24ನೇ ರಂಗಪ್ರವೇಶ ಕಾರ್ಯಕ್ರಮ ಮಾಡಿಸುತ್ತಿರುವುದು ಅವರ ಸಾಧನೆಗೆ ದೊರೆತ ಹೆಗ್ಗಳಿಕೆಯಾಗಿದೆ. ಇವರ ವೈವಿಧ್ಯಮಯ ಕಲಾ ಚಟುವಟಿಕೆಗೆ ಪತಿ ಲಕ್ಷೀಶ ಅವರೂ ನೀಡುತ್ತಿರುವ ಸಹಕಾರ ಅನನ್ಯವಾಗಿದೆ.

 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top