ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆಯಾದ ಮೇಲೆ ಪರಿಚಯವಾದ ಶಕುಂತಳಾ ಟಿ. ಶೆಟ್ಟಿ ಅವರಿಂದ ಉತ್ತಮ ಕೃತಿಯೊಂದು ಮೂಡಿಬರಬಹುದೆಂಬ ನಿರೀಕ್ಷೆ ಖಂಡಿತಾ ಇತ್ತು. ಸಂಘದ ಕಾರ್ಯಕ್ರಮಗಳಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ವೈಖರಿಯೇ ಆ ನಿರೀಕ್ಷೆಗೆ ಕಾರಣವಾಗಿತ್ತು. "ನಾನು ಲೇಖಕಿಯಲ್ಲ" ಎನ್ನುತ್ತಲೇ, ಅವರು ಹಂಚಿಕೊಳ್ಳುತ್ತಿದ್ದ ಮಾನವೀಯ ಕಾಳಜಿ ಹಾಗೂ ಅನುಭವದ ನುಡಿಗಳು ಕೇಳುಗರ ಮನ ಮುಟ್ಟುತ್ತಿದ್ದವು. ಇದೀಗ ಅವರ 'ಚಿತ್ತ ಭಿತ್ತಿಯ ಪತ್ತಾಯ' ಕೃತಿಯು ಆ ನಿರೀಕ್ಷೆಯನ್ನು ಸಂಪೂರ್ಣವಾಗಿ ಸಾಕಾರಗೊಳಿಸಿದೆ. ಮದುವೆಯ ಅನುಬಂಧದಿಂದ ಆರಂಭವಾಗುವ ಅವರ ನೆನಪಿನ ಬಂಡಾರ, ಬದುಕಿನ ಜಟಕಾ ಬಂಡಿಯ ಪಯಣದವರೆಗೆ ಬಂದು ನಿಲ್ಲುತ್ತದೆ.
"ಕುಟುಂಬದ ಸುರಕ್ಷಿತ ವಾತಾವರಣದಲ್ಲಿ ಮುಚ್ಚಟೆಯಿಂದ ಬೆಳೆದ ಮಗಳೊಬ್ಬಳು ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಳ್ಳುವುದು, ನಿರ್ಭಯವಾಗಿ ಸ್ವತಂತ್ರವಾಗಿ ಓಡಾಡುವುದು ಸುಲಭದ ಮಾತಲ್ಲ. ಅಪ್ಪ-ಅಮ್ಮ ಕಲಿಸಿದ ಸಂಸ್ಕಾರ ಹಾಗೂ ಶಾಲೆಯ ಶಿಕ್ಷಕರು ಕಟ್ಟಿಕೊಟ್ಟ ಬಾಳಿನ ಬುತ್ತಿಯೊಂದಿಗೆ ವೈಯಕ್ತಿಕ ಬದುಕನ್ನು ಹಸನುಗೊಳಿಸಲು ಶ್ರಮಿಸಿ, ಬದುಕಿನ ಧನಾತ್ಮಕ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಸಾಧ್ಯವಾಯಿತು" ಎನ್ನುವ ಶಕುಂತಳಾ ಶೆಟ್ಟಿಯವರು, ಮೊದಲು ಬದುಕನ್ನು ಮತ್ತು ಜನರನ್ನು ಪ್ರೀತಿಸುವುದನ್ನು ಕಲಿತರು. ಜನರೂ ಅವರನ್ನು ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡರು. ಖಾಸಗಿ ಹಾಗೂ ಸಾರ್ವಜನಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಜೀವನದ ಯಶಸ್ಸಿನ ಸೂತ್ರ ಎಂಬುದನ್ನು ಅವರು ಕಂಡುಕೊಂಡಿದ್ದರು.
ಅದರ ಪರಿಣಾಮವಾಗಿಯೇ ಪೇಟೆಯ ಹುಡುಗಿಯೊಬ್ಬಳು ಹಳ್ಳಿಗೆ ಬಂದು ನೆಲೆಯೂರಿದಳು. ಗ್ರಾಮೀಣ ಮಹಿಳೆಯರನ್ನು ಸಂಘಟಿಸಿದಳು. ನಗರವು ಅವರ ಕಾರ್ಯಕ್ಷಮತೆ ಹಾಗೂ ಬದುಕಿನ ಶ್ರಮವನ್ನು ಗುರುತಿಸಿತು. ಪರರ ಹಸಿವು, ನೋವು-ಸಂಕಟಗಳನ್ನು ಹತ್ತಿರದಿಂದ ಕಂಡಾಗ, ತಮ್ಮ ವೈಯಕ್ತಿಕ ನೋವಿಗಿಂತ ಸಮುದಾಯದ ಮಹಿಳೆಯರ ವೇದನೆ ದೊಡ್ಡದೆಂಬ ಸತ್ಯ ಅವರಿಗೆ ಮನವರಿಕೆಯಾಯಿತು. ಇದು ಅವರ ಧ್ವನಿಯಾಗಿ ಹೋರಾಡುವ ಶಕ್ತಿಯನ್ನು ನೀಡಿತು.
ಕುಂತೂರಿಗೆ ಪಾದಾರ್ಪಣೆ ಮಾಡಿ ಗ್ರಾಮೀಣ ಬದುಕನ್ನು ಅರ್ಥೈಸಿಕೊಳ್ಳುತ್ತಲೇ, ಅವರು ಕೃಷಿ ಜೀವನವನ್ನು ಮೈಗೂಡಿಸಿಕೊಂಡರು. ಯುವತಿ ಮಂಡಲ, ಮಹಿಳಾ ಮಂಡಲಗಳು, ಆಕಾಶವಾಣಿ ಕಾರ್ಯಕ್ರಮಗಳು, ಸಹಕಾರ ಸಂಘದ ಚಟುವಟಿಕೆಗಳು ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಮುಖೇನ ದೊರೆತ ಸಾಲು ಸಾಲು ಅವಕಾಶಗಳು ಅವರನ್ನು ರಾಜಕಾರಣದತ್ತ ಕರೆತಂದವು. ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಕಾರಣದಿಂದಾಗಿಯೇ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಗಟ್ಟಿಯಾಗಿ ಹೋರಾಡಲು ಅವರಿಗೆ ಸಾಧ್ಯವಾಯಿತು. ಮುಂದೆ ಶಾಸಕಿಯಾಗಿ ಹಾಗೂ ವಿವಿಧ ಸಮಿತಿಗಳ ಸದಸ್ಯೆಯಾಗಿ ಜನಪರ ವರದಿಗಳನ್ನು ನೀಡುವಲ್ಲಿಯೂ ಅವರು ಯಶಸ್ವಿಯಾದರು. ಈ ಎಲ್ಲಾ ಸಾಧನೆಗಳ ಹಿಂದೆ ಅವರ ಪತಿಯ ಬೆಂಬಲ ಹಾಗೂ ಕುಟುಂಬದ ಪ್ರೋತ್ಸಾಹದ ದೊಡ್ಡ ಬಲವಿತ್ತು. 'ಶಕು ಅಕ್ಕ' ಎಂದೇ ಜನಪ್ರಿಯರಾದ ಇವರಿಗೆ ಸದಾ ಜನರ ಪ್ರೀತಿ-ವಿಶ್ವಾಸ ದೊರೆಯಿತು. ಆದರೆ, ಶಕು ಅಕ್ಕನ ಆ ಮುಗುಳುನಗುವಿನ ಹಿಂದೆ ನೋವಿನ ಕಣ್ಣೀರೂ ಇದೆ ಎಂಬ ಸತ್ಯ 'ಪತ್ತಾಯ'ದ ಬಾಗಿಲು ತೆರೆದಾಗ ಅನುಭವಕ್ಕೆ ಬರುತ್ತದೆ.
ತಮ್ಮನ್ನು ಕೃಷಿಗೆ ತೊಡಗಿಸಿಕೊಂಡ ಬಗೆ, ಮನೆಯನ್ನು ಕಟ್ಟಿದ ಕ್ಷಣಗಳು ಹಾಗೂ ಕೌಟುಂಬಿಕ ಜೀವನದ ವಿವಿಧ ಮಜಲುಗಳನ್ನು ಲೇಖಕಿ ತೆರೆದಿಡುವ ರೀತಿ ಓದುಗರಿಗೆ ಒಂದು ಸುಂದರ ಕಾದಂಬರಿಯನ್ನು ಓದಿದ ಅನುಭವ ನೀಡುತ್ತದೆ. ಪ್ರಕೃತಿ ಹಾಗೂ ಪರಿಸರದ ನಡುವಿನ ರಮ್ಯ ಚಿತ್ರಣಗಳ ಜೊತೆಗೆ, ಬದುಕಿನ ಭಯ ಮತ್ತು ಭೀಕರತೆಯ ವಾತಾವರಣವೂ ಇಲ್ಲಿದೆ ಎಂಬ ಅರಿವು ಮೂಡುತ್ತದೆ. ಅವರ ಈ ಜೀವನ ಪಯಣದಲ್ಲಿ ಅದೆಷ್ಟೋ ಹಿರಿಯರು-ಕಿರಿಯರು ಬಂದು ಹೋಗಿದ್ದಾರೆ. ಮೇಲ್ನೋಟಕ್ಕೆ ಸಾಧಾರಣ ಎನಿಸುವ ಇಂತಹ ವ್ಯಕ್ತಿಗಳಿಂದಲೇ ಬದುಕು ಪರಿಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ. ಪುತ್ತೂರಿನ ಗ್ರಾಮೀಣ ಪ್ರದೇಶದ ಮಹಿಳೆಯರ ಕಥನವು ಇಲ್ಲಿ ಸಮಗ್ರ ಸ್ತ್ರೀ ಕುಲದ ಕಥನವಾಗಿ ನಮಗೆ ಕಾಣಸಿಗುತ್ತದೆ. ಈ ದೃಷ್ಟಿಯಿಂದಲೂ ಈ ಕೃತಿ ಅತ್ಯಂತ ಮುಖ್ಯವಾಗುತ್ತದೆ.
ನಿರೂಪಣೆಯ ದೃಷ್ಟಿಯಿಂದಲೂ ಇದೊಂದು ಹೊಸತನದಿಂದ ಕೂಡಿದ ಕಥನ. ಆತ್ಮಕಥೆಯ ಸಾಂಪ್ರದಾಯಿಕ ಚೌಕಟ್ಟನ್ನು ಮುರಿದು, ಕಥಾನಕವನ್ನು ಕಟ್ಟಿಕೊಡುವ ಶೈಲಿ ಓದುಗರಲ್ಲಿ ಕುತೂಹಲವನ್ನು ಕಾಯ್ದುಕೊಳ್ಳುತ್ತಾ ಸಾಗುತ್ತದೆ. ವಿಶಿಷ್ಟ ಕಾಲಘಟ್ಟವೊಂದರ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕು ಮತ್ತು ಅದರೊಳಗಿನ ಬಿಕ್ಕಟ್ಟುಗಳು, ತಲ್ಲಣಗಳು, ಸ್ಥಿತ್ಯಂತರಗಳು, ಪ್ರತಿರೋಧಗಳು, ಪ್ರೀತಿ-ವಿಶ್ವಾಸ ಹಾಗೂ ನಂಬಿಕೆಗಳನ್ನು ಅರ್ಥೈಸಿಕೊಳ್ಳಲು ಈ ಕೃತಿ ನೆರವಾಗುತ್ತದೆ. ಎಲ್ಲೂ ತಮ್ಮನ್ನು ತಾವು ವೈಭವೀಕರಿಸಿಕೊಳ್ಳದೆ, ಸ್ವ-ಅವಲೋಕನದ ಮೂಲಕ ಅನುಭವಗಳನ್ನು ಹಂಚಿಕೊಳ್ಳುವ ಶಕುಂತಳಾ ಶೆಟ್ಟಿ ಅವರ ಈ ಆತ್ಮಕಥನವು ಓದುಗರ ಮನಸ್ಸಿನಲ್ಲಿ ಆತ್ಮೀಯ ಭಾವನೆಯನ್ನು ಮೂಡಿಸುವಲ್ಲಿ ಪೂರ್ಣವಾಗಿ ಯಶಸ್ವಿಯಾಗಿದೆ.
- ಕೃಷ್ಣಮೂರ್ತಿ

