ಸರಿಗಮ ಭಾರತಿ ಸಂಗೀತ ವಿದ್ಯಾಲಯ: ವಿದ್ಯಾದಶಮಿ ಸಂಗೀತೋತ್ಸವ

Shreya Hegde
0

ಸಾಧಕರಿಗೆ ಸನ್ಮಾನ, ಶಾಸ್ತ್ರೀಯ ಸಂಗೀತ ಕಛೇರಿ,  ಭರತನಾಟ್ಯ, ವಿವಿಧ ಸಾಂಸ್ಕೃತಿಕ ಸಂಭ್ರಮ

‌



ಉಡುಪಿ: ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ ವತಿಯಿಂದ 27ನೇ ವರ್ಷದ ‘ವಿದ್ಯಾದಶಮಿ ಸಂಗೀತೋತ್ಸವ–2026 ಬುಧವಾರ ವಿದ್ಯಾಲಯದಲ್ಲಿ ನೆರವೇರಿತು. ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ ಕಾರ್ಣಿಕ್‌ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸತ್ ಚಿಂತನೆಯಲ್ಲಿ ನಾವು ತೊಡಗಿಕೊಳ್ಳಬೇಕಿದೆ. ಜಗತ್ತಿನ ಮುಂದಿರುವ ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಮಾರ್ಗದರ್ಶನ ನೀಡಬಲ್ಲ ಜ್ಞಾನ ಸಂಪತ್ತು ಭಾರತದಲ್ಲಿದೆ. ಆದರೆ ಒಂದೇ ಮನಸ್ಸಿನಿಂದ ಒಂದೇ ಕಡೆಗೆ ಹೆಜ್ಜೆ ಹಾಕುವ ಪ್ರಯತ್ನ ವಾಗಬೇಕಿದೆ ಎಂದು ಹೇಳಿದರು.


ಜಾತಿ, ಪ್ರಾಂತ್ಯ, ಭಾಷೆ ಎಂದು ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ. ಎಲ್ಲದರಲ್ಲೂ ತಾಯಿ ಸ್ವರೂಪ ಕಂಡವರು ನಾವು. ಹೊಸ ಚಿಗುರು, ಹಳೆ ಬೇರು ಒಂದಾಗಬೇಕಿದೆ ಎಂದರು. ಪ್ರಕೃತಿಯೊಂದಿಗೆ ಹೆಜ್ಜೆ ಹಾಕಿದ ನಮ್ಮ ಹಿರಿಯರ ಚಟುವಟಿಕೆಗಳು ಸಂಸ್ಕೃತಿಯಾಗಿದೆ. ಆದರೆ ನಾವು ಪ್ರಕೃತಿ ವಿರುದ್ಧ ಹೆಜ್ಜೆ ಹಾಕಿರುವುದರ ಪರಿಣಾಮ  ಅಕ್ಟೋಬರ್ ನಲ್ಲಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಸಜ್ಜನರ ನಿಷ್ಕ್ರಿಯತೆ ದುರ್ಜನರ ಕ್ರಿಯಾಶೀಲತೆಗಿಂತ ಅಪಾಯಕಾರಿ. ಇದರ ಪರಿಣಾಮ ದೇಶದಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ ಎಂದರು. 


ಪಂಡಿತ್‌ ರವಿಕಿರಣ್‌ ಮಣಿಪಾಲ ಮಾತನಾಡಿ, ಸಂಗೀತ ಶಿಷ್ಟ ಕಲೆ. ಇಂತಹವುಗಳು ಬದುಕಿಗೆ ರಂಜನೀಯ ಅನುಭೂತಿ ನೀಡುತ್ತವೆ. ಶಿಷ್ಟ  ಕಲೆಗಳು ಭಾರತೀಯ ಅಸ್ಮಿತೆ. ಪ್ರಸ್ತುತ ಇಂತಹ ಕಲೆ ಅವಗಣಿಸಲ್ಪಡುತ್ತಿದೆ. ಪ್ರತಿಯೊಬ್ಬರು ಕಲೆಗಳಿಗೆ‌ ಪ್ರೋತ್ಸಾಹ ನೀಡಬೇಕು.  ಸಂಸ್ಕೃತಿ, ಕಲೆ ಮುಂದಿನ ಪೀಳಿಗೆಗೆ ಪಸರಿಸುವಂತಾಗ ಬೇಕು ಎಂದರು. ಉದ್ಯಮಿ ಪರ್ಕಳ ಮಂಜುನಾಥ ಉಪಾಧ್ಯಾಯ ಶುಭಹಾರೈಸಿದರು. ಸನ್ಮಾನ ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ, ಮಣಿಪಾಲ ಕೆಎಂಸಿ ಪ್ರಾಧ್ಯಾಪಕರಾದ ಡಾ| ಕವಿತಾ ಸರವು, ವಿದುಷಿ ಸಂಗೀತಾ ಬಾಲಚಂದ್ರ, ವಿದುಷಿ ದೀಕ್ಷಾ ರಾಮಕೃಷ್ಣ ಹೆಗಡೆ ಅವರನ್ನು ಸಮ್ಮಾನಿಸಲಾಯಿತು. ತನ್ವಿ ಶಾಸ್ತ್ರಿ ಮೂಡಂಬೈಲು, ಸ್ವಸ್ತಿ ಎಂ. ಭಟ್‌ ಮಣಿಪಾಲ ಅವರನ್ನು ಗುರುತಿಸಿ ಗೌರವಿಸಲಾಯಿತು.


ಗುರುಗಳಾದ ವಿದುಷಿ ಉಮಾಶಂಕರಿ ಟಿ.ಕೆ. ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಾ| ಉದಯಶಂಕರ್‌ ಎಚ್‌.ಎನ್‌. ಪ್ರಸ್ತಾವಿಸಿ, ಸ್ವಾಗತಿಸಿದರು. ಗಣಪತಿ ಜೋಯಿಸರು ವಂದಿಸಿದರು. ಪ್ರತಿಮಾ ನಿರೂಪಿಸಿದರು. ವಿನುತಶ್ರೀ ಸನ್ಮಾನಪತ್ರ ವಾಚಿಸಿದರು.




ಸಂಗೀತ ಕಛೇರಿ

ಬೆಳಗ್ಗೆ ಡಾ| ದಾಮೋದರ ಹೆಗ್ಡೆ ಅವರಿಂದ ಹಿಂದೂಸ್ತಾನಿ ಗಾಯನಕ್ಕೆ, ತಬಲಾದಲ್ಲಿ ಶ್ರೀವತ್ಸ ಶರ್ಮ ಪಡುಬಿದ್ರಿ ಹಾಗೂ ಹಾರ್ಮೋನಿಯಂನಲ್ಲಿ ಶಶಿಕಿರಣ್‌ ಮಣಿಪಾಲ ಸಹಕರಿಸಿದರು. ಬಳಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳ ಗಾಯನ ನಡೆಯಿತು.


ಸಭೆಯ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಹರಿ ಭಟ್‌ ಬೆಂಗಳೂರು ಅವರ ಹಾಡುಗಾರಿಕೆಗೆ, ತನ್ಮಯಿ ಉಪ್ಪಂಗಳ ವಯೋಲಿನ್‌, ಸುನಾದ ಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಿದರು. ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಪ್ರಸ್ತುತಿ ನಡೆಯಿತು. ವಯೋಲಿನ್‌ ನಲ್ಲಿ ವಿದ್ವಾನ್‌ ಮೋಹನ್‌ ಚಿಪ್ಳೂಣ್‌ ಕರ್‌ ಕಾರ್ಕಳ, ಶ್ರೀರಾಗ್‌ ಪಿ. ರಾವ್‌ ಉಡುಪಿ, ಮೃದಂಗದಲ್ಲಿ ತಮನ್‌ ಎಕ್ಕಡ್ಕ ಸಹಕರಿಸಿದರು. ಶ್ರೀ ತ್ಯಾಗರಾಜರ ಘನಪಂಚರತ್ನ ಗೋಷ್ಠಿ ಗಾಯನದ ಬಳಿಕ ವಿದ್ವಾನ್ ಅಮಿತ್‌ ನಾಡಿಗ್‌ ಬೆಂಗಳೂರು ಅವರ ಕೊಳಲು ವಾದನ ಕಛೇರಿ ನಡೆಯಿತು. ತನ್ಮಯಿ ಉಪ್ಪಂಗಳ ವಯೋಲಿನ್‌, ಸುನಾದ ಕೃಷ್ಣ ಅಮೈ ಮೃದಂಗ, ತಂಬೂರದಲ್ಲಿ ವಿದುಷಿ ಸುರೇಖಾ ಭಟ್  ಸಹಕಾರ ನೀಡಿದರು. ರಾತ್ರಿ ವಿದುಷಿ ಪೂರ್ಣಶ್ರೀ ಸಾರಡ್ಕ ಅವರಿಂದ ಹಾಗೂ ಪೂರ್ವೀಕೃಷ್ಣ ಅವರಿಂದ ಭರತನಾಟ್ಯ ಪ್ರದರ್ಶನ ನೆರವೇರಿತು‌.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top