ಪ್ರತಿ ವರುಷ ಅಕ್ಟೋಬರ್ 18 ರಂದು ವಿಶ್ವ ಋತುಬಂಧ (ಮೆನೋಪಾಸ್) ಜಾಗೃತಿ ದಿನ ಎಂದು ಆಚರಿಸಿ ಋತುಬಂಧದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ 45 ರಿಂದ 50ರ ಹರೆಯದಲ್ಲಿ ಮುಟ್ಟಾಗುವ ಪ್ರಕ್ರಿಯೆಗೆ ವಿರಾಮ ದೊರಕುತ್ತದೆ. ಈ ದೈಹಿಕ ಪ್ರಕ್ರಿಯೆಗೆ ಋತುಬಂಧ ಅಥವಾ ಆಂಗ್ಲಭಾಷೆಯಲ್ಲಿ ಮೆನೋಪಾಸ್ ಎಂದು ಕರೆಯಲಾಗುತ್ತದೆ. ಇದೊಂದು ನೈಸರ್ಗಿಕವಾದ ಪ್ರಕ್ರಿಯೆಯಾದರೂ ಹೆಚ್ಚಿನ ಮಹಿಳೆಯರಲ್ಲಿ ಈ ಕುರಿತ ಬಹಳ ಆತಂಕ ಮತ್ತು ಗಾಬರಿ ಇರುತ್ತದೆ. ರಸದೂತಗಳ ಸ್ರವಿಸುವಿಕೆ ಕಡಿಮೆಯಾಗುವುದರಿಂದ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಕಂಡುಬರುತ್ತದೆ. ಅತಿಯಾದ ರಕ್ತಸ್ತ್ರಾವದ ಜೊತೆಗೆ ತೀವ್ರ ಉದ್ವೇಗ, ಆತಂಕ ಮತ್ತು ಗಾಬರಿಯಿಂದ ಮಹಿಳೆಯರು ಬಳಲುತ್ತಾರೆ. ಸಾಮಾನ್ಯವಾಗಿ ೪೦ ವರುಷ ದಾಟಿದ ಬಳಿಕ ಮಹಿಳೆಯರಲ್ಲಿ ಪ್ರಜನನ ಪ್ರಕ್ರಿಯೆಗೆ ಅಗತ್ಯ ಇರುವ ಶಕ್ತಿ ಕುಂದಲಾರಂಭಿಸುತ್ತದೆ. ರಸದೂತಗಳ ಸ್ರವಿಸುವಿಕೆ ಕಡಿಮೆಯಾಗುವುದೇ ಇದಕ್ಕೆಲ್ಲಾ ಮೂಲ ಕಾರಣ. 40 ರಿಂದ ಆರಂಭವಾಗುವ ಈ ಬದಲಾವಣೆಗಳು ೪೫ರಿಂದ ೫೦ರ ವಯಸ್ಸಿನವರೆಗೆ ತೀವ್ರವಾಗಿ ಕಂಡುಬರುತ್ತದೆ. ನಿರ್ದಿಷ್ಟವಾಗಿ ಇದೇ ವಯಸ್ಸಿಗೆ ಋತುಬಂಧವಾಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ ಮುಟ್ಟು ನಿಲ್ಲುವ ಸರಾಸರಿ ವಯಸ್ಸು 45 ಎಂದು ಪರಿಗಣಿಸಬಹುದು ಎಂದು ಪರಿಣತ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ರಸದೂತಗಳು ಮತ್ತು ಅವುಗಳ ಪಾತ್ರಗಳು:
ಮಹಿಳೆ ತನ್ನ ಕಿಬ್ಬೊಟ್ಟೆಯಲ್ಲಿ ಗರ್ಭಕೋಶವನ್ನು ಹೊಂದಿರುತ್ತಾಳೆ. ಅದಕ್ಕೆ ತಾಗಿಕೊಂಡಂತೆ ಎರಡೂ ಬದಿಯಲ್ಲಿ ಒಂದು ಜೊತೆ ಫ್ಯಾಲೋಪಿಯನ್ ಟ್ಯೂಬ್ ಅಥವಾ ಡಿಂಬನಾಳ ಇರುತ್ತದೆ. ಅದರ ತುದಿಯಲ್ಲಿ ಬೆರಳುಗಳಂತಹ ರಚನೆ ಇರುತ್ತದೆ. ಈ ಡಿಂಬನಾಳಗಳ ಕೆಳಗೆ ಎರಡೂ ಬದಿಗಳಲ್ಲಿ ಅಂಡಾಶಯಗಳು ಇವೆ. ಇದನ್ನೇ ಓವರಿ ಎನ್ನಲಾಗುತ್ತದೆ. ಗರ್ಭಕೋಶದ ಕೊರಳು ಅಥವಾ ಸರ್ವಿಕ್ಸ್ ಯೋನಿನಾಳದ ಹೊರತುದಿಯ ಮುಖಾಂತರ ಪರಿಸರಕ್ಕೆ ತೆರೆದುಕೊಂಡಿದೆ. ಈ ಎಲ್ಲಾ ಅಂಗಾಂಗಗಳು ಮಹಿಳೆಯ ಪೆಲ್ವಿಸ್ ಅಥವಾ ಮೂತ್ರಪಿಂಡದ ಕುಳಿ ಭಾಗದಲ್ಲಿ ಅಡಗಿಕೊಂಡಿದೆ.
ಪ್ರಾಜೆಸ್ಟೆರಾನ್: ಈ ರಸದೂತದ ಮಟ್ಟ ರಕ್ತದಲ್ಲಿ ಕಡಿಮೆಯಾದಾಗ ಗರ್ಭಕೋಶದ ಒಳಪದರ ಕಳಚಿ, ಮುಟ್ಟಿನ ರೂಪದಲ್ಲಿ ಹೊರಬರಲು ಕಾರಣವಾಗುತ್ತದೆ. 45ರಿಂದ 50 ಹರೆಯದಲ್ಲಿ ಈ ರಸದೂತಗಳ ಸ್ರವಿಸುವಿಕೆ ಪೂರ್ತಿಯಾಗಿ ಕುಸಿದಾಗ ಋತುಬಂಧಕ್ಕೆ ಕಾರಣವಾಗುತ್ತದೆ. ಇದನ್ನು ಮೆನೋಪಾಸ್ ಎನ್ನಲಾಗುತ್ತದೆ.
ಏನಿದು ಮೆನೋಪಾಸ್?
'ಮೆನೋಪಾಸ್' ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿರುತ್ತದೆ. ಗ್ರೀಕ್ ಭಾಷೆಯಲ್ಲಿ ಮೆನೋ ಎಂದರೆ ಮಂತ್ (ತಿಂಗಳು) ಮತ್ತು ಪಾಸ್ ಎಂದರೆ ನಿಲ್ಲುವುದು. ಈ ಕಾರಣದಿಂದ ಮೆನೋಪಾಸ್ ಎಂಬ ಹೆಸರು ಬಂದಿದೆ. ಸರಳವಾದ ಕನ್ನಡದಲ್ಲಿ ಹೇಳುವುದಾದರೆ ಋತುಬಂಧ ಅಥವಾ ಮುಟ್ಟು ನಿಲ್ಲುವುದು ಎಂದು ಅರ್ಥ. ಒಟ್ಟಿನಲ್ಲಿ ಮಹಿಳೆ ಗರ್ಭಧಾರಣ ಶಕ್ತಿಯನ್ನು ಕಳೆದುಕೊಂಡಿರುವುದನ್ನು ಮೆನೋಪಾಸ್ ಎಂದು ಸಂಭೋಧಿಸಲಾಗುತ್ತದೆ. ಅಂಡಾಶಯಗಳು ಸಾಕಷ್ಟು ಪ್ರಮಾಣದಲ್ಲಿ ಬೆದೆಜನಕ ರಸದೂತಗಳು ಸ್ರವಿಸದಿರುವುದೇ ಇದಕ್ಕೆ ಮುಖ್ಯ ಕಾರಣ.
ಋತುಬಂಧ ಎರಡು ಕಾರಣಗಳಿಂದ ಉಂಟಾಗಬಹುದು
1) ನೈಸರ್ಗಿಕವಾದ ಕಾರಣದಿಂದ
2) ಶಸ್ತ್ರ ಚಿಕಿತ್ಸೆಯ ಕಾರಣದಿಂದ
ಕೆಲವೊಮ್ಮೆ ವಿವಿಧ ಋತುಸ್ರಾವ ಸಂಬಂಧಿ ತೊಂದರೆಗಳು, ಗರ್ಭಕೋಶದ ಒಳಗೆ ಬೆಳೆಯುವ ಗಡ್ಡೆಗಳು ಅಥವಾ ಇನ್ನಾವುದೇ ಕಾರಣದಿಂದ ವೈದ್ಯರು ಗರ್ಭಾಶಯವನ್ನು ಸರ್ಜರಿ ಮುಖಾಂತರ ಕಿತ್ತು ಹಾಕುತ್ತಾರೆ. ಹೀಗೆ ಮಾಡಿದಾಗ ಗರ್ಭಾಶಯ ಜೊತೆಗೆ ಅಂಡಾಶಯಗಳನ್ನು ತೆಗೆದು ಹಾಕಲೇಬೇಕಾದ ಅನಿವಾರ್ಯತೆ ಇರುತ್ತದೆ. ಇದು ಕೃತಕವಾಗಿ ಋತುಬಂಧಕ್ಕೆ ಕಾರಣವಾಗುತ್ತದೆ. ಅಂಡಾಶಯ ತೆಗೆದ ಬಳಿಕ ಅದರಿಂದ ಸ್ರವಿಸಲ್ಪಡುವ ಬೆದೆಜನಕ' ರಸದೂತಗಳ ಕೊರತೆಯೇ ಇದಕ್ಕೆ ಕಾರಣವಾಗುತ್ತದೆ. ಒಟ್ಟಿನಲ್ಲಿ ನೈಸರ್ಗಿಕ ಅಥವಾ ಕೃತಕ ಕಾರಣಗಳಿಂದ ಬೆದೆಜನಕ ರಸದೂತಗಳ ಸ್ರವಿಸುವಿಕೆಗೆ ಅಡ್ಡಿ ಉಂಟಾದಲ್ಲಿ ಋತುಬಂಧಕ್ಕೆ ಕಾರಣವಾಗುತ್ತದೆ ಎನ್ನುವುದಂತೂ ಖಚಿತ.
ಮಹಿಳೆಯಲ್ಲಿರುವ ಈ ಎರಡು ಅಂಡಾಶಯಗಳು ಆಕೆಯ ಪ್ರಜನನ ಕ್ರಿಯೆ, ತಿಂಗಳ ಮುಟ್ಟು, ಗರ್ಭಧಾರಣೆ, ಶಿಶುಜನನ, ಮುಂತಾದ ಪ್ರಕ್ರಿಯೆಗಳಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಹೆಚ್ಚು ಕಡಿಮೆ ಬಾದಾಮಿಯ ಗಾತ್ರ ಹೊಂದಿರುವ ಅಂಡಾಶಯಗಳಿಂದ ಸದಾ ಸ್ತ್ರೀ ರಸದೂತಗಳನ್ನು ಸ್ರವಿಸುತ್ತವೆ. ಇದರ ಜೊತೆಗೆ ಪ್ರತಿ ತಿಂಗಳು ಅಂಡಾಣು ಅಥವಾ ಮೊಟ್ಟೆಯನ್ನು ಬಿಡುಗಡೆ ಮಾಡುತ್ತದೆ. ಸ್ತ್ರೀ ಹಾರ್ಮೋನುಗಳನ್ನು ಮುಖ್ಯವಾಗಿ ಈಸ್ಟೊಜನ್ ಮತ್ತು ಪ್ರೊಜೆಸ್ಟೆರಾನ್ ಎಂದು ಕರೆಯಲಾಗುತ್ತದೆ. ಪ್ರತಿ ತಿಂಗಳು ಋತುಚಕ್ರದ ಸಂದರ್ಭದಲ್ಲಿ ಅಂಡಾಣುಗಳು ಅಂಡಾಶಯದಿಂದ ಬಿಡುಗಡೆಗೊಂಡು ಡಿಂಬನಾಳದ ಬೆರಳು ಆಕಾರದ ರಚನೆಯ ಮುಖಾಂತರ ನಾಳದ ಒಳಗೆ ಸೋರಿ ಗರ್ಭಕೋಶದ ಒಳಗೆ ಪ್ರವೇಶಿಸುತ್ತದೆ. ಅಂಡಾಣುಗಳು ಡಿಂಬನಾಳದಲ್ಲಿರುವಾಗಲೇ ಗರ್ಭಧಾರಣೆ ಪ್ರಕ್ರಿಯೆಗಳಿಗೆ ಸ್ತ್ರೀ ರಸದೂತಗಳ ಬೆಂಬಲ ಇರಬೇಕಾಗುತ್ತದೆ. ಇದರ ಜೊತೆಗೆ ಸ್ತ್ರೀ ಸಹಜವಾದ ಸ್ತನಗಳ ಬೆಳವಣೆಗೆಗೆ, ತ್ವಚೆಗಳ ಕಾಂತಿ, ದೇಹದ ಬೆಳವಣಿಗೆ, ಚರ್ಮಗಳ ಕಾಂತಿಗೆ ಬೇಕಾದ ಮತ್ತು ಸ್ತ್ರೀ ಸಹಜ ಲಕ್ಷಣಗಳಿಗೆ ಪೂರಕವಾದ ವಾತಾವರಣ ಕಲ್ಪಿಸಲು ಈ ರಸದೂತಗಳು ಅತೀ ಅಗತ್ಯವಾಗಿರುತ್ತದೆ.
ಈಸ್ಟೊಜೆನ್: ಬೆದೆಜನಕ ಎಂದು ಶುದ್ಧ ಕನ್ನಡದಲ್ಲಿ ಕರೆಯಲ್ಪಡುವ ಈ ರಸದೂತ ಸ್ರನಗಳ ಬೆಳವಣೆಗೆಗೆ, ಯೋನಿಯ ಬೆಳವಣೆಗೆಗೆ ಮತ್ತು ಗರ್ಭಕೋಶದ ಹಿಗ್ಗುವಿಕೆಗೆ ಅತೀ ಅಗತ್ಯ. ಗರ್ಭಕೋಶದ ಬೆಳವಣಿಗೆ ಜೊತೆಗೆ, ಗರ್ಭಕೋಶದ ಬಿಳಿ ಪದರವನ್ನು ಗರ್ಭಧಾರಣೆಗೆ ಯೋಗ್ಯವಾಗುವಂತೆ ಮೃದುವಾಗಿ, ದಪ್ಪನಾಗಿ ಬೆಳೆಯಲು ಸಹಕರಿಸುತ್ತದೆ. ಇದಲ್ಲದೆ, ದೇಹದ ಬೆಳವಣೆಗೆಗೆ ಅಗತ್ಯ ಇರುವ ಕ್ಯಾಲ್ಸಿಯಂ ಲವಣಗಳನ್ನು ಆಹಾರದಿಂದ ಹೀರಿಕೊಳ್ಳಲು ಸಹಕರಿಸಿ, ಮೂಳೆಗಳು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ. 2026ರ ವಿಶ್ವ ಋತುಬಂಧ ದಿನ ಆಚರಣೆಯ ಧ್ಯೇಯವಾಕ್ಯ,"ನಡು ವಯಸ್ಸಿನಲ್ಲಿ ನಿರಂತರ ನೋವು" ಎಂಬುದಾಗಿದೆ.
- ಡಾ ಮುರಲೀ ಮೋಹನ್ ಚೂಂತಾರು, ಮಂಗಳೂರು
9845135787

