ಇಂದಿನ ಆಧುನಿಕ ಹಾಗೂ ಜಾಗತೀಕರಣದ ಯುಗದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ನಡುವೆ ಒಂದು ರೀತಿಯ ಸ್ಪರ್ಧೆ ಹಾಗೂ ಸಹಬಾಳ್ವೆಯ ವಾತಾವರಣ ನಿರ್ಮಾಣವಾಗಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣಕ್ಕೆ ಇಂಗ್ಲೀಷ್ ಅನಿವಾರ್ಯವಾಗಿದ್ದರೆ, ವ್ಯಕ್ತಿಯ ಮೂಲ ಅಸ್ಮಿತೆ, ಭಾವನೆ ಮತ್ತು ಸಾಂಸ್ಕೃತಿಕ ಬೇರುಗಳಿಗೆ ಮಾತೃಭಾಷೆಯಾದ ಕನ್ನಡವೇ ಪ್ರಾಣ. ಈ ಎರಡು ಭಾಷೆಗಳ ನಡುವಿನ ನಂಟು ಕನ್ನಡಿಗರ ದೈನಂದಿನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಇಂಗ್ಲೀಷ್ ಭಾಷೆಯು ಜಾಗತಿಕ ಸಂಪರ್ಕದ ಕಿಟಕಿಯಾಗಿರುವುದರಿಂದ ಅದನ್ನು ಕಲಿಯುವುದು ಮತ್ತು ಬಳಸುವುದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸಲು, ವೈಜ್ಞಾನಿಕ ಆವಿಷ್ಕಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಲು ಇಂಗ್ಲೀಷ್ ಭಾಷೆಯ ನೆರವು ಬೇಕೇಬೇಕು. ಆದರೆ, ಈ ಅನಿವಾರ್ಯತೆಯು ನಮ್ಮ ಮಾತೃಭಾಷೆಯ ಮೇಲಿನ ನಿರ್ಲಕ್ಷ್ಯಕ್ಕೆ ಕಾರಣವಾಗಬಾರದು. ಇಂದು ಅನೇಕ ಕಡೆಗಳಲ್ಲಿ ಇಂಗ್ಲೀಷ್ ವ್ಯಾಮೋಹದಿಂದಾಗಿ ಕನ್ನಡವನ್ನು ಕೇವಲ ಕೀಳಾಗಿ ಕಾಣುವ ಅಥವಾ ಕಡೆಗಣಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಮನೆಯಿಂದ ಹಿಡಿದು ಶಾಲಾ-ಕಾಲೇಜುಗಳವರೆಗೆ ಇಂಗ್ಲೀಷ್ ಮಾಧ್ಯಮದ ಅಬ್ಬರ ಹೆಚ್ಚಾಗಿರುವುದರಿಂದ ಇಂದಿನ ಯುವ ಪೀಳಿಗೆಗೆ ಕನ್ನಡದ ಶ್ರೀಮಂತ ಸಾಹಿತ್ಯ, ವ್ಯಾಕರಣ ಮತ್ತು ಶಬ್ದಕೋಶದ ಪರಿಚಯ ಕ್ರಮೇಣ ಕಡಿಮೆಯಾಗುತ್ತಿದೆ. ಮಾತನಾಡುವಾಗ ಅಥವಾ ಬರೆಯುವಾಗ ಕನ್ನಡದೊಂದಿಗೆ ಇಂಗ್ಲೀಷ್ ಪದಗಳನ್ನು ಹೆಚ್ಚು ಬೆರೆಸಿ ಮಾತನಾಡುವುದು ರೂಢಿಗೆ ಬಂದಿದೆ. ಇದು ಭಾಷೆಯ ಶುದ್ಧತೆಯನ್ನು ಕಳೆಯುವುದಲ್ಲದೆ, ಮುಂದಿನ ದಿನಗಳಲ್ಲಿ ಕನ್ನಡದ ಅಸ್ತಿತ್ವಕ್ಕೇ ಧಕ್ಕೆ ತರಬಹುದು. ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಜೀವನಾಡಿ. ಇಂಗ್ಲೀಷ್ ಭಾಷೆಗೆ ಸಿಗುವ ಮನ್ನಣೆ ಮತ್ತು ಪ್ರಾಮುಖ್ಯತೆಯು ನಮ್ಮದೇ ನೆಲದಲ್ಲಿ ಕನ್ನಡಕ್ಕೂ ಸಿಗಬೇಕಾದದ್ದು ಅತ್ಯಂತ ಅಗತ್ಯ.
ಈ ಎರಡು ಭಾಷೆಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಜಾಗತಿಕ ಮಟ್ಟದಲ್ಲಿ ಯಶಸ್ಸು ಸಾಧಿಸಲು ಇಂಗ್ಲೀಷ್ ಅನ್ನು ಒಂದು ಕೌಶಲವಾಗಿ ಕಲಿಯಬೇಕೆ ಹೊರತು, ನಮ್ಮ ಮಾತೃಭಾಷೆಯನ್ನು ಮರೆತು ಅದಕ್ಕೆ ದಾಸರಾಗಬಾರದು. ತಂತ್ರಜ್ಞಾನ ಮತ್ತು ಡಿಜಿಟಲ್ ಯುಗದಲ್ಲಿ ಕನ್ನಡವನ್ನು ಬಳಸುವ ಮೂಲಕ ಅದನ್ನು ವಿಸ್ತರಿಸಬೇಕು. ಕಚೇರಿಗಳಲ್ಲಿ, ಆಡಳಿತದಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಮುಖ ಸ್ಥಾನ ನೀಡಬೇಕು. ಇಂಗ್ಲೀಷ್ ಭಾಷೆಯ ಅರಿವು ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಲಿ, ಆದರೆ ಕನ್ನಡ ಭಾಷೆಯು ನಮ್ಮ ಹೃದಯದ ಬಡಿತವಾಗಿ ಎಂದೆಂದಿಗೂ ಉಳಿಯಲಿ.
- ಅನನ್ಯ ಎಚ್ ಸುಬ್ರಹ್ಮಣ್ಯ
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ
ಕನ್ನಡ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ


