ಕೃಷಿ ಮಾತು: ನಾವೇಕೆ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಗಳಲ್ಲಿ ಭಾಗವಹಿಸಬೇಕು?

Upayuktha
0


ಮೊನ್ನೆ 24.10.2026 ರಂದು ಪಂಜದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯ ಬಳೆಗಾರರ ಸಮಾವೇಶ. ಉದ್ದೇಶ ಬೆಳೆಗಾರರ ಅಭಿಪ್ರಾಯ ಸಂಗ್ರಹಣೆ ಮತ್ತು ಸಂಸ್ಥೆಯ ಬಗ್ಗೆ ಮಾಹಿತಿ ನೀಡುವುದು.


ಕೇವಲ ಅಷ್ಟಕ್ಕೇ ಸೀಮಿತವಾಗದೆ ಒಂದಷ್ಟು ಕೃಷಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಹಿರಿಯ ಸಾಧಕ ಕೃಷಿಕರಾದ ಟಿ.ಆರ್.ಸುರೇಶ್ಚಂದ್ರರನ್ನು ಸಮ್ಮಿಶ್ರ ಕೃಷಿಯ ಬಗ್ಗೆ ಮತ್ತು ಗೋವಾಧಾರಿತ ಸಾವಯುವ ಕೃಷಿಗಾಗಿ ನನ್ನನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದರು. ಆ ನೆಲೆಯಲ್ಲಿ ನನಗೂ ಆ ಸಭೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.


ಸಾಂಪ್ರದಾಯಿಕವಾಗಿ ಸಭಾ ನಡವಳಿಗಳೆಲ್ಲ ಪೂರೈಸಿಕೊಂಡು  ನಮ್ಮಿಬ್ಬರು ಕೃಷಿ ಮಿತ್ರರುಗಳ ಮಾತುಗಳ ನಂತರ ಅಧ್ಯಕ್ಷರೊಂದಿಗೆ ಕೃಷಿ ಸದಸ್ಯರುಗಳ ಸಂವಹನ ಕಾರ್ಯಕ್ರಮ ಬಲು ಸುಂದರವಾಗಿ ನಡೆಯಿತು.


ಹೆಚ್ಚಿನ ಸದಸ್ಯರುಗಳ ಬೇಡಿಕೆ ಅಡಿಕೆ ಕ್ರಯದ ಬಗ್ಗೆ ಮತ್ತು ಕೊಕ್ಕೋ ಕ್ರಯದ ಬಗ್ಗೆ. ಅದೂ ಅಲ್ಲದೆ ಹೊರ ಮಾರುಕಟ್ಟೆಗೂ ಕ್ಯಾಂಪ್ಕೋ ಸಂಸ್ಥೆಗೂ  ಇರುವ ದರದ ವ್ಯತ್ಯಾಸದ ಬಗ್ಗೆ  ಅಧ್ಯಕ್ಷರ ಉತ್ತರ ನನಗಂತೂ ತುಂಬಾ ಸಮಂಜಸ ಅಂತ ಅನಿಸಿತು.


ಯಾವುದೇ ಕೃಷಿ ಉತ್ಪನ್ನಗಳಿಗೆ ಇಲ್ಲದ ವ್ಯವಸ್ಥಿತ ಮಾರುಕಟ್ಟೆಯನ್ನು ಮತ್ತು ಯಾವಾಗ ಯಾವ ಹೊತ್ತಲ್ಲಿ ಎಷ್ಟು ಪ್ರಮಾಣದಲ್ಲಿ  ಬಂದರೂ ಖರೀದಿಸಿ ಸಂಪೂರ್ಣ ಮೊತ್ತವನ್ನು ಕೂಡಲೇ  ನೀಡುವ ಸಂಸ್ಥೆಯೊಂದಿದ್ದರೆ ಅದು ಕ್ಯಾಂಪ್ಕೋ. ನೂರಕ್ಕೆ ನೂರು ನೇರಾ ನೇರ ವ್ಯವಹಾರ ಮಾಡಿ ವಾರ್ಷಿಕ ನೂರು ಕೋಟಿಗಿಂತ ಹೆಚ್ಚು ಸರಕಾರಕ್ಕೆ ಕರ (ಜಿ ಎಸ್ ಟಿ) ನೀಡುವ ಸಂಸ್ಥೆ ಇದ್ದರೆ ಅದು ಕ್ಯಾಂಪ್ಕೋ. ಎಷ್ಟೇ ಮಾರುಕಟ್ಟೆ ಹಿನ್ನಡೆ ಇದ್ದರೂ ಅಡಿಕೆಯನ್ನು ಬೇಡ ಎನ್ನದೆ ಖರೀದಿಸುವ ಸಂಸ್ಥೆ ಇದ್ದರೆ ಅದು ಕ್ಯಾಂಪ್ಕೋ. ಒಂದು ವೇಳೆ ಕ್ಯಾಂಪ್ಕೋ ಇಲ್ಲದಿದ್ದರೆ ಕೊರೋನಾ ಸಮಯದಲ್ಲಿ ಕೃಷಿಕರ ಪರಿಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಊಹಿಸಿಕೊಳ್ಳಿ. 


ಇಂದು ಕ್ಯಾಂಪ್ಕೋ ಸಂಸ್ಥೆ ಎರಡು ಸಾವಿರಕ್ಕಿಂತ ಹೆಚ್ಚು ಸ್ಥಳೀಯ ಮಂದಿಗೆ ಉದ್ಯೋಗ ನೀಡಿದೆ. ಸ್ಥಳೀಯವಾಗಿ ಯಾವುದೇ ಸಂಸ್ಥೆ ನೀಡುವುದಕ್ಕಿಂತ ಹೆಚ್ಚು ವೇತನವನ್ನು ಮತ್ತು ಅನುಕೂಲಗಳನ್ನು ನೀಡುತ್ತಿದೆ. ಕೃಷಿ ಸದಸ್ಯರುಗಳ ಕಷ್ಟಗಳಲ್ಲಿ  ಅನೇಕ ಸಂದರ್ಭಗಳಲ್ಲಿ ಭಾಗಿಯಾಗುತ್ತಿದೆ. ಸದಸ್ಯರಿಗೆ ಡಿವಿಡೆಂಡು ಮತ್ತು ಲಾಭ ಬಂದಲ್ಲಿ ಅಡಿಕೆಗೆ ಲಾಭದ ಪಾಲು ಇದೆಲ್ಲ ನೀಡುವ ಸಂಸ್ಥೆ ಇದ್ದರೆ ಅದು ಕ್ಯಾಂಪ್ಕೋ.


ಈ ಸಂದರ್ಭದಲ್ಲಿ ಬೇರೆ ಎಲ್ಲಿಯೋ ನಡೆದ ಸದಸ್ಯ ಬೆಳಗಾರರ ಸಮಾವೇಶದಲ್ಲಿ ಕೃಷಿಕರೊಬ್ಬರ ಮಾತನ್ನು ನೆನಪಿಸಿಕೊಂಡರು. ಕ್ಯಾಂಪ್ಕೋಕ್ಕೆ ಲಾಭ ಬಂದಲ್ಲಿ  ಸರಕಾರಕ್ಕೆ ಲಾಭ, ಕೃಷಿಕರಿಗೆ ಡಿವಿಡೆಂಡು ಇನ್ಸೆಂಟಿವ್ ಮೂಲಕ ಲಾಭ, ಮಾರುಕಟ್ಟೆಯ ಸ್ಥಿರತೆಯ ಲಾಭ, ಸ್ಥಳೀಯರಿಗೆ ಉದ್ಯೋಗದ ಲಾಭ ಇದೆಲ್ಲವೂ ದೊರೆಯಬಹುದು. ಆದರೆ ಖಾಸಗಿಗೆ ಲಾಭ ಬಂದಲ್ಲಿ ವ್ಯಕ್ತಿಗೆ ಉತ್ತಮ ಮನೆಯಾದೀತು, ದೊಡ್ಡ ಮಟ್ಟದ ಕಾರು ಬಂದೀತು. ಆದರೆ ಕೃಷಿಕರಿಗೆ ಲಾಭ ಬಂದೀತೆ? ಅಂತ ಹೇಳಿದ್ದರಂತೆ. 


ಹೌದಲ್ಲವೇ? ಈ ಮಾತು ಎಷ್ಟೊಂದು ಸತ್ಯ. 

ಮಾರುಕಟ್ಟೆ ಸ್ಥಿರತೆ ಇರಬೇಕಾದರೆ ಕ್ಯಾಂಪ್ಕೋಕೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಅಡಿಕೆ ಬರಬೇಕು. ಹೆಚ್ಚು ಲಾಭ ಹೊಂದಬೇಕು ಎಂಬುದಂತೂ ಸತ್ಯ. ಸರಕಾರಕ್ಕೆ ಸೂಕ್ತ ಪ್ರಮಾಣದ ಆದಾಯ ಬಂದಲ್ಲಿ ಸರಕಾರದ ಸವಲತ್ತುಗಳನ್ನು ನಿರೀಕ್ಷಿಸಲೂ ಸಾಧ್ಯ.

ನಾವು ಕೃಷಿಕರು ಖಾಸಗಿಯವರಿಗೆ ಅಡಿಕೆ ಕೊಡುವಾಗ ಸೂಕ್ತ ಪ್ರಮಾಣದ ಖರ ರಶೀದಿಯನ್ನು ನೀಡುವಂತೆ ಹಕ್ಕೊತ್ತಾಯ ಸಲ್ಲಿಸಬೇಕು ಅಲ್ಲದಿದ್ದರೆ ಅಡಿಕೆ ನೀಡುವುದಿಲ್ಲ ಅಂತ ಒಂದೇ ಒಂದು ಮಾತು ಹೇಳಿದರೆ ಸಾಕು. ಆ ಸಂದರ್ಭದಲ್ಲಿ ಖಾಸಗಿಯವರು ಕ್ಯಾಂಪ್ಕೋಕ್ಕಿಂತ ಹೆಚ್ಚಿನ ದರದಲ್ಲಿ ಅಡಿಕೆ ಖರೀದಿಸಿಯಾರೇ? ಎಂಬ ಪ್ರಶ್ನೆ ನನ್ನಲ್ಲಂತೂ ಬಂತು. ಕ್ಯಾಂಪ್ಕೋವನ್ನೇ ಯಾವಾಗಲೂ ಪ್ರಶ್ನಿಸುವ ಬದಲು ಈ ಕಡೆಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಂಡು ಗಮನ ಕೊಡಬಾರದೇಕೇ? ಎಂಬ ಉತ್ತರ ನನಗೆ ಸಿಕ್ಕಿತು.

ಭಾರಿ ಸಂಖ್ಯೆಯಲ್ಲಿ ಸದಸ್ಯ ಬೆಳೆಗಾರರು ಸೇರಿದ್ದರು. ಕ್ಯಾಂಪ್ಕೋದ ಬಗ್ಗೆ ಬಹಳ ಮೆಚ್ಚು ನುಡಿಗಳನ್ನೇ ಆಡಿದ್ದರು. ಕ್ಯಾಂಪ್ಕೋ  ಸಿಬ್ಬಂದಿಗಳ ಸೌಹಾರ್ದದ ನಡವಳಿಕೆಗಳ ಬಗ್ಗೆ ದೊಡ್ಡ ಮಟ್ಟದ ಮೆಚ್ಚುಗೆ ಬಂದಿತ್ತು. ಬೆಳೆಗಾರರು ಕೃಷಿ ಮಾಹಿತಿಗಳನ್ನು ಬಹಳ ಕುತೂಹಲದಿಂದ ಕೇಳಿದ್ದರು. ಸಂಸ್ಥೆಯ ಬೆಳವಣಿಗೆಯನ್ನು ನೋಡಬೇಕಾದರೆ, ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಬೇಕಾದರೆ ಇಂತಹ ಸಭೆಗಳಿಗೆ ಹೆಚ್ಚು ಹೆಚ್ಚು ಭಾಗವಹಿಸಬೇಕು. ಒಟ್ಟಿನಲ್ಲಿ ತುಂಬಾ ತುಂಬಾ ಸಂತೋಷ ಕೊಟ್ಟ ಸಭೆ.


- ಎ.ಪಿ. ಸದಾಶಿವ ಮರಿಕೆ



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top