ಶಕ್ತಿ ಯೋಜನೆ, ಬಸ್ ದರ ಏರಿಕೆ ಮತ್ತು ರಾಜ್ಯದ ಹಣಕಾಸಿನ ಹೊಣೆಗಾರಿಕೆ
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದು ಸಾಮಾಜಿಕ ಕಲ್ಯಾಣದ ದೃಷ್ಟಿಯಿಂದ ಮಹತ್ವದ ಕ್ರಮ. ಮಹಿಳೆಯರ ಚಲನವಲನದ ಸ್ವಾತಂತ್ರ್ಯ, ಉದ್ಯೋಗಾವಕಾಶ, ಶಿಕ್ಷಣ ಮತ್ತು ಕುಟುಂಬದ ಆರ್ಥಿಕ ನಿರ್ವಹಣೆಗೆ ಇದು ನೆರವಾಗಬಹುದು. ಆದರೆ ಈಗ ಬಸ್ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಿಸುವ ಚಿಂತನೆ ಮುನ್ನೆಲೆಗೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಕೈಯಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಿ, ಮತ್ತೊಂದು ಕೈಯಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ? ಉಚಿತ ಯೋಜನೆಗಳ ವೆಚ್ಚವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಭರಿಸುತ್ತಿದೆಯೇ? ಇದರ ಹೊರೆ ಸಾಮಾನ್ಯವಾಗಿ ಟಿಕೆಟ್ ಖರೀದಿಸುವ ಪುರುಷರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆಯೇ ಬೀಳಬೇಕೇ? ಈ ಪ್ರಶ್ನೆಗಳು ಮಹಿಳೆಯರಿಗೆ ನೀಡುವ ಸೌಲಭ್ಯವನ್ನು ವಿರೋಧಿಸುವುದಕ್ಕಲ್ಲ; ಜನಕಲ್ಯಾಣದ ಉದ್ದೇಶ ಮತ್ತು ಹಣಕಾಸಿನ ವಾಸ್ತವದ ನಡುವೆ ಸಮತೋಲನ ಸಾಧಿಸುವ ಅಗತ್ಯವನ್ನು ಎತ್ತಿಹಿಡಿಯುವುದಕ್ಕಾಗಿ.
ಕಲ್ಯಾಣ ಯೋಜನೆಗಳಿಗೂ ಆರ್ಥಿಕ ಮಿತಿಗಳಿವೆ:
ಅರ್ಥಶಾಸ್ತ್ರದ ಕಲ್ಯಾಣ ಸಿದ್ಧಾಂತದ ಪ್ರಕಾರ, ಸರ್ಕಾರದ ನೀತಿಗಳು ಸಮಾಜದ ದುರ್ಬಲ ವರ್ಗಗಳ ಜೀವನಮಟ್ಟ ಸುಧಾರಿಸಲು, ಅವಕಾಶಗಳ ಅಸಮಾನತೆ ಕಡಿಮೆ ಮಾಡಲು ಮತ್ತು ಸಾಮಾಜಿಕ ನ್ಯಾಯ ಸಾಧಿಸಲು ನೆರವಾಗಬೇಕು. ಆದ್ದರಿಂದ ಉಚಿತ ಅಥವಾ ರಿಯಾಯಿತಿ ಸೇವೆಗಳೆಲ್ಲವೂ ಅನಗತ್ಯವೆಂದು ಹೇಳಲಾಗದು. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಮೂಲಭೂತ ಸಾರಿಗೆಗೆ ಸಾರ್ವಜನಿಕ ನೆರವು ನೀಡುವುದರಿಂದ ವ್ಯಕ್ತಿಗೂ ಸಮಾಜಕ್ಕೂ ದೀರ್ಘಕಾಲೀನ ಲಾಭ ಉಂಟಾಗಬಹುದು.
ಆದರೆ ಕಲ್ಯಾಣ ಯೋಜನೆಗಳ ಯಶಸ್ಸು ಅವುಗಳ ಘೋಷಣೆಯಲ್ಲಿ ಮಾತ್ರವಲ್ಲ; ಅವುಗಳಿಗೆ ಹಣಕಾಸು ಒದಗಿಸುವ ವಿಧಾನದಲ್ಲಿಯೂ ಅಡಗಿದೆ. ಸರ್ಕಾರದ ಆದಾಯಕ್ಕೆ ಮಿತಿ ಇದೆ; ಖರ್ಚುಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಶಿಕ್ಷಣ, ಆರೋಗ್ಯ, ನೀರಾವರಿ, ಉದ್ಯೋಗ ಸೃಷ್ಟಿ, ಗ್ರಾಮೀಣ ರಸ್ತೆ, ಸಾರ್ವಜನಿಕ ಸಾರಿಗೆ ಮತ್ತು ಸಾಮಾಜಿಕ ಭದ್ರತೆ—ಎಲ್ಲ ಕ್ಷೇತ್ರಗಳಿಗೂ ಸಂಪನ್ಮೂಲ ಬೇಕು. ಇಲ್ಲಿ ಅರ್ಥಶಾಸ್ತ್ರದ ‘ಅವಕಾಶ ವೆಚ್ಚ’ (Opportunity Cost) ಎಂಬ ಪರಿಕಲ್ಪನೆ ಪ್ರಸ್ತುತವಾಗುತ್ತದೆ. ಒಂದು ಯೋಜನೆಗೆ ಹೆಚ್ಚುವರಿ ಹಣ ವಿನಿಯೋಗಿಸಿದಾಗ, ಅದೇ ಹಣವನ್ನು ಬೇರೆ ಯಾವ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಿತ್ತು ಎಂಬುದನ್ನೂ ಪರಿಗಣಿಸಬೇಕು. ಜನಪ್ರಿಯ ಯೋಜನೆಗೆ ವೆಚ್ಚ ಮಾಡುವುದರಿಂದ ಅದರ ಪರ್ಯಾಯ ಬಳಕೆಯಿಂದ ದೊರೆಯಬಹುದಾದ ಲಾಭವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಾರದು.
ಶಕ್ತಿ ಯೋಜನೆಯ ವೆಚ್ಚ ಮತ್ತು ಹೊಣೆಗಾರಿಕೆ:
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವುದರಿಂದ ಸಾರಿಗೆ ನಿಗಮಗಳು ಟಿಕೆಟ್ ಆದಾಯದ ಒಂದು ಭಾಗವನ್ನು ನೇರವಾಗಿ ಪಡೆಯುವುದಿಲ್ಲ. ಆ ಮೊತ್ತವನ್ನು ಸರ್ಕಾರ ಮರುಪಾವತಿಸಬೇಕು. ಸರ್ಕಾರದಿಂದ ಮರುಪಾವತಿ ವಿಳಂಬವಾದರೆ, ಸಾರಿಗೆ ನಿಗಮಗಳ ಕಾರ್ಯಾಚರಣೆಯ ಹಣಕಾಸಿನ ಮೇಲೆ ಒತ್ತಡ ಉಂಟಾಗಬಹುದು. ಇಂಧನ, ಸಿಬ್ಬಂದಿಯ ವೇತನ, ಬಸ್ಗಳ ನಿರ್ವಹಣೆ ಮತ್ತು ಹೊಸ ವಾಹನಗಳ ಖರೀದಿಗೆ ಹಣ ಬೇಕಾಗುತ್ತದೆ. ಹೀಗಾಗಿ ಸರ್ಕಾರವು ಯೋಜನೆಯ ಲಾಭವನ್ನು ಪ್ರಕಟಿಸುವಷ್ಟೇ ಪ್ರಾಮಾಣಿಕವಾಗಿ ಅದರ ವೆಚ್ಚ, ಬಾಕಿ ಮರುಪಾವತಿ ಮತ್ತು ದೀರ್ಘಕಾಲೀನ ಹಣಕಾಸಿನ ಪರಿಣಾಮಗಳನ್ನೂ ಜನರ ಮುಂದಿಡಬೇಕು. ಸಾರಿಗೆ ನಿಗಮಗಳ ಹಣಕಾಸಿನ ಸಮಸ್ಯೆಗೆ ಶಕ್ತಿ ಯೋಜನೆಯೇ ಏಕೈಕ ಕಾರಣವೆಂದು ಹೇಳುವುದು ಸರಿಯಲ್ಲ; ಇಂಧನದ ಬೆಲೆ, ವೇತನ, ಕಾರ್ಯಾಚರಣೆಯ ದಕ್ಷತೆ ಮತ್ತು ಇತರ ವೆಚ್ಚಗಳನ್ನೂ ಪರಿಶೀಲಿಸಬೇಕು.
‘ಬಿಟ್ಟಿ ಯೋಜನೆ’ ಮತ್ತು ಹಣಕಾಸಿನ ಭ್ರಮೆ:
ಜನಪ್ರಿಯವಾಗಿ ‘ಬಿಟ್ಟಿ ಯೋಜನೆ’ ಎಂದು ಕರೆಯಲಾಗುವ ಉಚಿತ ಸೌಲಭ್ಯಗಳನ್ನು ಅರ್ಥಶಾಸ್ತ್ರದ ದೃಷ್ಟಿಯಿಂದ ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಿಜವಾದ ಅರ್ಥದಲ್ಲಿ ಉಚಿತವೆನಿಸುವ ಸೇವೆಗೂ ಉತ್ಪಾದನಾ ವೆಚ್ಚವಿರುತ್ತದೆ. ಬಸ್ ಪ್ರಯಾಣಕ್ಕೆ ಇಂಧನ, ಸಿಬ್ಬಂದಿ, ವಾಹನ ಮತ್ತು ನಿರ್ವಹಣೆಯ ವೆಚ್ಚ ಇದೆ. ಬಳಕೆದಾರರಿಂದ ಹಣ ಪಡೆಯದಿದ್ದರೆ ಆ ವೆಚ್ಚವನ್ನು ಸರ್ಕಾರದ ತೆರಿಗೆ ಆದಾಯದಿಂದಲೋ, ಬೇರೆ ಆದಾಯದಿಂದಲೋ ಅಥವಾ ಸಾಲದ ಮೂಲಕವೋ ಭರಿಸಬೇಕಾಗುತ್ತದೆ. ಇಲ್ಲಿ ‘ಹಣಕಾಸಿನ ಭ್ರಮೆ’ (Fiscal Illusion) ಎಂಬ ಪರಿಕಲ್ಪನೆ ನೆನಪಾಗುತ್ತದೆ. ಜನರಿಗೆ ಒಂದು ಸೇವೆ ಉಚಿತವಾಗಿ ದೊರೆಯುವಾಗ, ಅದರ ನಿಜವಾದ ವೆಚ್ಚ ಮತ್ತು ಅದನ್ನು ಭರಿಸುವವರ ಬಗ್ಗೆ ಸ್ಪಷ್ಟ ಅರಿವು ಇರದೇ ಇರಬಹುದು. ಆದರೆ ಸಾರ್ವಜನಿಕ ವೆಚ್ಚಕ್ಕೆ ಅಂತಿಮವಾಗಿ ಹಣಕಾಸಿನ ಮೂಲ ಬೇಕೇ ಬೇಕು. ಇಂದಿನ ಸೌಲಭ್ಯಕ್ಕೆ ಬೇಕಾದ ಹಣವನ್ನು ಸಾಲದ ಮೂಲಕ ಒದಗಿಸಿದರೆ, ಅದರ ಮರುಪಾವತಿಯ ಹೊರೆ ಭವಿಷ್ಯದ ತೆರಿಗೆದಾರರ ಮೇಲೂ ಬೀಳಬಹುದು.
ಆದರೆ ಉಚಿತ ಸೇವೆಗಳೆಲ್ಲವೂ ಆರ್ಥಿಕವಾಗಿ ವ್ಯರ್ಥವೆಂದರ್ಥವಲ್ಲ. ಸಾರ್ವಜನಿಕ ಸಾರಿಗೆಯಿಂದ ವಾಹನ ದಟ್ಟಣೆ, ಮಾಲಿನ್ಯ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು. ಮಹಿಳೆಯರ ಉದ್ಯೋಗಾವಕಾಶ ಮತ್ತು ಆರ್ಥಿಕ ಸ್ವಾತಂತ್ರ್ಯ ಹೆಚ್ಚಾದರೆ ಕುಟುಂಬದ ಆದಾಯಕ್ಕೂ ಪ್ರಯೋಜನವಾಗಬಹುದು. ಆದ್ದರಿಂದ ಯೋಜನೆಯ ವೆಚ್ಚವನ್ನಷ್ಟೇ ಅಲ್ಲ, ಅದರಿಂದ ದೊರೆಯುವ ಸಾಮಾಜಿಕ ಮತ್ತು ಆರ್ಥಿಕ ಲಾಭವನ್ನೂ ಅಳೆಯಬೇಕು. ಪ್ರಶ್ನೆ ಉಚಿತ ಯೋಜನೆ ಬೇಕೇ ಬೇಡವೇ ಎಂಬುದಲ್ಲ; ಯಾವ ಯೋಜನೆಗೆ, ಯಾರಿಗೆ, ಎಷ್ಟು ನೆರವು, ಯಾವ ಹಣಕಾಸಿನ ಮೂಲದಿಂದ ಮತ್ತು ಎಷ್ಟು ಕಾಲ ನೆರವು ನೀಡಬೇಕು ಎಂಬುದಾಗಿದೆ.
ಪುರುಷ ಪ್ರಯಾಣಿಕರಿಗೇಕೆ ಹೆಚ್ಚುವರಿ ಹೊರೆ?
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಪ್ರಯಾಣದ ನೇರ ವೆಚ್ಚ ಕಡಿಮೆಯಾಗುತ್ತದೆ. ಆದರೆ ಟಿಕೆಟ್ ಖರೀದಿಸುವ ಪುರುಷರು, ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ದರ ಏರಿಕೆಗೆ ಒಳಗಾಗಬಹುದು. ಒಂದು ವರ್ಗಕ್ಕೆ ನೀಡುವ ನೆರವಿನ ವೆಚ್ಚವನ್ನು ಮತ್ತೊಂದು ವರ್ಗದ ಪ್ರಯಾಣಿಕರ ಮೇಲೆ ಪರೋಕ್ಷವಾಗಿ ವರ್ಗಾಯಿಸುವ ಪರಿಸ್ಥಿತಿ ಉಂಟಾದರೆ, ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವುದು ಸಹಜ. ಉದಾಹರಣೆಗೆ, ಪ್ರಸ್ತುತ ಟಿಕೆಟ್ ದರ ₹40 ಇದ್ದು, ಅದು ಶೇ. 25ರಷ್ಟು ಹೆಚ್ಚಾದರೆ ₹50 ಆಗುತ್ತದೆ. ದಿನಕ್ಕೆ ಎರಡು ಬಾರಿ ಪ್ರಯಾಣಿಸುವವರು ತಿಂಗಳಿಗೆ 25 ದಿನ ಪ್ರಯಾಣಿಸಿದರೆ, ಅವರ ಹೆಚ್ಚುವರಿ ವೆಚ್ಚ ₹500 ಆಗಬಹುದು. ಇದು ಕೇವಲ ವಿವರಣಾತ್ಮಕ ಉದಾಹರಣೆ; ನಿಜವಾದ ದರ ಮತ್ತು ಪ್ರಯಾಣದ ದೂರಕ್ಕೆ ಅನುಗುಣವಾಗಿ ವೆಚ್ಚ ಬದಲಾಗುತ್ತದೆ.
ಇಲ್ಲಿ ‘ತೆರೆಯ ಹೊರೆ ವರ್ಗಾವಣೆ’ (Tax Incidence) ಎಂಬ ಅರ್ಥಶಾಸ್ತ್ರದ ಪರಿಕಲ್ಪನೆ ಪ್ರಸ್ತುತವಾಗುತ್ತದೆ. ಸರ್ಕಾರದ ಒಂದು ನೀತಿಯ ವೆಚ್ಚವನ್ನು ಕಾನೂನಿನ ಪ್ರಕಾರ ಯಾರು ಪಾವತಿಸುತ್ತಾರೆ ಎಂಬುದಕ್ಕಿಂತ, ಅದರ ನಿಜವಾದ ಆರ್ಥಿಕ ಹೊರೆ ಅಂತಿಮವಾಗಿ ಯಾರ ಮೇಲೆ ಬೀಳುತ್ತದೆ ಎಂಬುದು ಮುಖ್ಯ. ದರ ಏರಿಕೆಯ ಹೊರೆ ಕಡಿಮೆ ಆದಾಯದ ಪ್ರಯಾಣಿಕರ ಮೇಲೆ ಹೆಚ್ಚು ಬಿದ್ದರೆ, ಅದು ಅವರ ಕುಟುಂಬದ ಆಹಾರ, ಶಿಕ್ಷಣ ಮತ್ತು ಆರೋಗ್ಯದ ಖರ್ಚನ್ನು ಕುಗ್ಗಿಸಬಹುದು. ಹೀಗಾಗಿ ಮಹಿಳೆಯರಿಗೆ ನೀಡುವ ಸೌಲಭ್ಯವನ್ನು ಮುಂದುವರಿಸುತ್ತಲೇ, ಆರ್ಥಿಕವಾಗಿ ದುರ್ಬಲ ಪುರುಷರು, ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೂ ಅಗತ್ಯ ನೆರವು ನೀಡುವ ವ್ಯವಸ್ಥೆ ಇರಬೇಕು. ಸಾಮಾಜಿಕ ನ್ಯಾಯವೆಂದರೆ ಒಂದು ವರ್ಗಕ್ಕೆ ನೆರವು ನೀಡುವುದಷ್ಟೇ ಅಲ್ಲ; ಆ ನೆರವಿನ ವೆಚ್ಚದಿಂದ ಮತ್ತೊಂದು ದುರ್ಬಲ ವರ್ಗ ಅನ್ಯಾಯವಾಗಿ ಬಾಧಿತವಾಗದಂತೆ ನೋಡಿಕೊಳ್ಳುವುದೂ ಹೌದು.
ಗುರಿನಿರ್ದಿಷ್ಟ ನೆರವು: ಇತರ ದೇಶಗಳಿಂದ ಪಾಠ
ಸಾರ್ವಜನಿಕ ಸಾರಿಗೆಗೆ ನೆರವು ನೀಡುವಾಗ ಸೌಲಭ್ಯ ಮತ್ತು ಹಣಕಾಸಿನ ಸುಸ್ಥಿರತೆಯ ನಡುವೆ ಸಮತೋಲನ ಸಾಧಿಸಲು ಕೆಲವು ದೇಶಗಳು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿವೆ. ಸಿಂಗಪುರದಲ್ಲಿ ಸಾರ್ವಜನಿಕ ಸಾರಿಗೆಯ ದರಗಳನ್ನು ವಾರ್ಷಿಕವಾಗಿ ಪರಿಶೀಲಿಸಲಾಗುತ್ತದೆ. ಕಾರ್ಯಾಚರಣೆಯ ವೆಚ್ಚ, ಪ್ರಯಾಣಿಕರ ಕೈಗೆಟುಕುವ ಸಾಮರ್ಥ್ಯ ಮತ್ತು ಸಾರಿಗೆ ವ್ಯವಸ್ಥೆಯ ಹಣಕಾಸಿನ ಸ್ಥಿರತೆಯನ್ನು ಪರಿಗಣಿಸಿ ದರ ಪರಿಷ್ಕರಣೆ ಮಾಡಲಾಗುತ್ತದೆ. 2026ರ ದರ ಪರಿಶೀಲನೆಯಲ್ಲಿ ಸೂತ್ರದ ಪ್ರಕಾರ ಅನುಮತಿಸಬಹುದಾದ ಗರಿಷ್ಠ ಏರಿಕೆ ಶೇ. 14.7ರಷ್ಟಿದ್ದರೂ, ಅನುಮೋದಿಸಿದ ಏರಿಕೆ ಶೇ. 7ರಷ್ಟಿತ್ತು. ಕಡಿಮೆ ಆದಾಯದ ಕುಟುಂಬಗಳಿಗೆ ಸಾರ್ವಜನಿಕ ಸಾರಿಗೆ ವೌಚರ್ಗಳನ್ನೂ ಹೆಚ್ಚಿಸಲಾಯಿತು. ಸರ್ಕಾರವು ಸಾರಿಗೆ ವ್ಯವಸ್ಥೆಗೆ ವಾರ್ಷಿಕವಾಗಿ ಎರಡು ಬಿಲಿಯನ್ ಸಿಂಗಪುರ ಡಾಲರ್ಗಿಂತ ಹೆಚ್ಚಿನ ಕಾರ್ಯಾಚರಣಾ ಸಬ್ಸಿಡಿ ಒದಗಿಸುತ್ತಿದೆ.
ಸಿಂಗಪುರದ ಮಾದರಿಯ ಮುಖ್ಯ ಪಾಠವೆಂದರೆ, ದರ ಏರಿಕೆಯನ್ನು ಸಂಪೂರ್ಣವಾಗಿ ತಡೆಯುವುದಾಗಲಿ, ಎಲ್ಲ ವೆಚ್ಚವನ್ನೂ ಪ್ರಯಾಣಿಕರ ಮೇಲೆ ಹಾಕುವುದಾಗಲಿ ಅಲ್ಲ; ವೆಚ್ಚ, ಕೈಗೆಟುಕುವ ಸಾಮರ್ಥ್ಯ ಮತ್ತು ದುರ್ಬಲ ವರ್ಗಗಳಿಗೆ ನೀಡುವ ನೆರವಿನ ನಡುವೆ ಸಮತೋಲನ ಸಾಧಿಸುವುದು. ಕರ್ನಾಟಕವೂ ಇಂತಹ ಪಾರದರ್ಶಕ ದರ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಬಹುದು. ಇಂಗ್ಲೆಂಡಿನಲ್ಲಿ ಅರ್ಹ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸ್ಥಳೀಯ ಬಸ್ ಪ್ರಯಾಣದಲ್ಲಿ ಉಚಿತ ಸೌಲಭ್ಯವಿದೆ. ಇದು ಎಲ್ಲರಿಗೂ ಅನಿಯಂತ್ರಿತ ಉಚಿತ ಪ್ರಯಾಣ ನೀಡುವ ಮಾದರಿಯಲ್ಲ; ನಿರ್ದಿಷ್ಟ ಸಾಮಾಜಿಕ ಅಗತ್ಯವಿರುವ ವರ್ಗಗಳಿಗೆ ಅರ್ಹತೆಯ ಆಧಾರದ ಮೇಲೆ ಸೌಲಭ್ಯ ಒದಗಿಸುವ ವ್ಯವಸ್ಥೆ. ಈ ಉದಾಹರಣೆಗಳಿಂದ ಕರ್ನಾಟಕವು ಕಲಿಯಬಹುದಾದ ಅಂಶವೆಂದರೆ, ಸಾಮಾಜಿಕ ನೆರವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದಕ್ಕಿಂತ, ಅದರ ಗುರಿ ಮತ್ತು ಅರ್ಹತೆಯನ್ನು ಸ್ಪಷ್ಟಪಡಿಸುವುದು ಹಾಗೂ ಅದಕ್ಕೆ ಅಗತ್ಯವಾದ ಹಣಕಾಸನ್ನು ನಿಗದಿಪಡಿಸುವುದು.
ಕರ್ನಾಟಕಕ್ಕೆ ಸೂಕ್ತವಾದ ಮಾರ್ಗ ಯಾವುದು?
ಕರ್ನಾಟಕವು ಉಚಿತ ಯೋಜನೆಗಳನ್ನು ಸಂಪೂರ್ಣವಾಗಿ ವಿರೋಧಿಸದೆ, ಅವುಗಳ ಹಣಕಾಸಿನ ಪರಿಣಾಮಗಳನ್ನೂ ನಿರ್ಲಕ್ಷಿಸಬಾರದು. ಗ್ಯಾರಂಟಿ ಯೋಜನೆಗಳ ವೆಚ್ಚ, ಫಲಾನುಭವಿಗಳು ಮತ್ತು ಸಾಮಾಜಿಕ ಲಾಭಗಳ ಬಗ್ಗೆ ಪಾರದರ್ಶಕತೆ ಕಾಪಾಡಬೇಕು. ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಸಕಾಲದಲ್ಲಿ ಹಣ ಪಾವತಿಸಿ, ದರ ಏರಿಕೆಯ ಸಂದರ್ಭದಲ್ಲಿ ದುರ್ಬಲ ವರ್ಗಗಳಿಗೆ ರಿಯಾಯಿತಿ ನೀಡಬೇಕು. ಬಸ್ಗಳ ಸಮರ್ಪಕ ಬಳಕೆ, ಇಂಧನ ಉಳಿತಾಯ ಮತ್ತು ಅನಗತ್ಯ ವೆಚ್ಚಗಳ ನಿಯಂತ್ರಣದ ಮೂಲಕ ನಷ್ಟ ಕಡಿಮೆ ಮಾಡಬೇಕು. ಜೊತೆಗೆ, ಯೋಜನೆಗಳ ಸಾಮಾಜಿಕ ಪರಿಣಾಮವನ್ನು ಮೌಲ್ಯಮಾಪನ ಮಾಡಿ, ದೀರ್ಘಕಾಲೀನ ಹಣಕಾಸಿನ ಸ್ಥಿರತೆಯನ್ನು ಕಾಪಾಡುವಂತೆ ಹೆಚ್ಚು ಜನರಿಗೆ ಪ್ರಯೋಜನ ನೀಡುವ ಯೋಜನೆಗಳಿಗೆ ಆದ್ಯತೆ ನೀಡಬೇಕು.
ಜನಪರತೆ ಎಂದರೆ ಹಣಕಾಸಿನ ಹೊಣೆಗಾರಿಕೆಯೂ ಹೌದು:
ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಯಶಸ್ಸನ್ನು ಜನರಿಗೆ ನೀಡಿದ ಉಚಿತ ಸೌಲಭ್ಯಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗದು. ಜನರ ಜೀವನಮಟ್ಟ ಸುಧಾರಿಸಿದೆಯೇ, ಉದ್ಯೋಗಾವಕಾಶಗಳು ಹೆಚ್ಚಿದೆಯೇ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಉತ್ತಮಗೊಂಡಿವೆಯೇ, ಸಾರ್ವಜನಿಕ ಸಾರಿಗೆ ಹೆಚ್ಚು ವಿಶ್ವಾಸಾರ್ಹವಾಗಿದೆಯೇ ಮತ್ತು ಭವಿಷ್ಯದ ಪೀಳಿಗೆಗೆ ಅನಗತ್ಯ ಸಾಲದ ಹೊರೆ ಉಳಿಯದಂತೆ ನೋಡಿಕೊಳ್ಳಲಾಗಿದೆಯೇ ಎಂಬುದೂ ಅಷ್ಟೇ ಮುಖ್ಯ. ಶಕ್ತಿ ಯೋಜನೆಯ ಸಾಮಾಜಿಕ ಉದ್ದೇಶವನ್ನು ಗೌರವಿಸುವುದರ ಜೊತೆಗೆ, ಅದರ ವೆಚ್ಚವನ್ನು ಸಮರ್ಥವಾಗಿ ನಿರ್ವಹಿಸುವುದು ಸರ್ಕಾರದ ಜವಾಬ್ದಾರಿ. ಸಾರಿಗೆ ನಿಗಮಗಳ ಹಣಕಾಸಿನ ಸಮಸ್ಯೆಯನ್ನು ಸರಿಪಡಿಸುವ ಹೆಸರಿನಲ್ಲಿ ಎಲ್ಲ ಪ್ರಯಾಣಿಕರ ಮೇಲೂ ಏಕಾಏಕಿ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ. ಅದೇ ರೀತಿ, ಜನಪ್ರಿಯತೆಯ ಕಾರಣಕ್ಕೆ ವೆಚ್ಚದ ಲೆಕ್ಕಾಚಾರವಿಲ್ಲದೆ ಸೌಲಭ್ಯಗಳನ್ನು ವಿಸ್ತರಿಸುವುದೂ ದೀರ್ಘಕಾಲೀನ ಪರಿಹಾರವಲ್ಲ.
ಉಚಿತ ಯೋಜನೆಗಳು ಸಾಮಾಜಿಕವಾಗಿ ಅಗತ್ಯವಿರುವವರಿಗೆ ನೆಮ್ಮದಿ ನೀಡುವಂತಿರಲಿ; ಆರ್ಥಿಕವಾಗಿ ರಾಜ್ಯಕ್ಕೆ ಹೊರೆಯಾಗದಂತಿರಲಿ; ಅವುಗಳ ವೆಚ್ಚವನ್ನು ಭರಿಸುವ ಹೊರೆ ಯಾವುದೇ ಒಂದು ವರ್ಗದ ಜನರ ಮೇಲೆ ಅನ್ಯಾಯವಾಗಿ ಬೀಳದಂತಿರಲಿ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ವಸೂಲಿ ಮಾಡುವ ನೀತಿಯ ಬದಲು, ನ್ಯಾಯಯುತ ಆದಾಯ ಹಂಚಿಕೆ, ಪಾರದರ್ಶಕ ವೆಚ್ಚ ನಿರ್ವಹಣೆ ಮತ್ತು ಗುರಿನಿರ್ದಿಷ್ಟ ನೆರವಿನ ಮೂಲಕ ಜನಕಲ್ಯಾಣವನ್ನು ಸಾಧಿಸುವುದು ಉತ್ತಮ ಆಡಳಿತದ ಲಕ್ಷಣ. ಜನರಿಗೆ ಸೌಲಭ್ಯ ನೀಡುವುದು ಜನಪರತೆ; ಆ ಸೌಲಭ್ಯವನ್ನು ಸುಸ್ಥಿರವಾಗಿ ಮುಂದುವರಿಸುವುದು ಆರ್ಥಿಕ ವಿವೇಕ. ಈ ಎರಡೂ ಕೈಜೋಡಿಸಿದಾಗಲೇ ಸಾಮಾಜಿಕ ನ್ಯಾಯ ಮತ್ತು ಹಣಕಾಸಿನ ಶಿಸ್ತು ಒಂದೇ ದಾರಿಯಲ್ಲಿ ಸಾಗಲು ಸಾಧ್ಯ.
- ಡಾ. ಎ. ಜಯಕುಮಾರ ಶೆಟ್ಟಿ, ಉಜಿರೆ

