ವಿವೇಕಾನಂದ ಕಾಲೇಜಿನಲ್ಲಿ ‘ವಾಲ್ಮೀಕಿ ರಾಮಾಯಣ-ಲಕ್ಷ್ಮಣ ಅಂತರಂಗದ ಪ್ರಸ್ತುತಿ’

Shreya Hegde
0



ಪುತ್ತೂರು, ಅ.27: ರಾಮಾಯಣದಲ್ಲಿ ರಾಮ ಧರ್ಮದ ಪ್ರತೀಕವಾದರೆ, ಲಕ್ಷ್ಮಣ ತ್ಯಾಗದ ಪ್ರತೀಕ. ಲಕ್ಷ್ಮಣನ ಅಂತರಂಗ ಶುದ್ಧವಾಗಿರುತ್ತದೆ. ಅವನಲ್ಲಿ ಯಾವುದೇ ಕಲ್ಮಶವಿಲ್ಲ. ಅರಮನೆಯ ಸುಖವನ್ನು ತ್ಯಜಿಸಿ ಸಹೋದರನಿಗಾಗಿ 14 ವರ್ಷ ವನವಾಸಕ್ಕೆ ಹೊರಡುವ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ, ಇದಕ್ಕೆ ಶುದ್ಧ ಮನಸ್ಸಿನ ಜೊತೆಗೆ ನಮ್ಮ ಮನಸ್ಸು ಜ್ಞಾನದತ್ತ ಸಾಗಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.


ಇವರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತಕಲಾ ಸಂಘ, ಕನ್ನಡ ವಿಭಾಗ - ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ‘ವಾಲ್ಮೀಕಿ ರಾಮಾಯಣದ ಪಾತ್ರದ  ಅಂತರಂಗ ನಿರೂಪಣೆ-ಲಕ್ಷ್ಮಣನ ಅಂತರಂಗ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಅಂತರಂಗ ಪ್ರಸ್ತುತಿ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಲಕ್ಷ್ಮಣನ ಆದರ್ಶ ಗುಣಗಳು, ಕರ್ತವ್ಯನಿಷ್ಠೆ, ಸಹೋದರ ಪ್ರೀತಿ ಹಾಗೂ ತ್ಯಾಗ ಮನೋಭಾವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಪಾತ್ರಗಳು ಸಾರುವ ಮೌಲ್ಯಗಳು ಮತ್ತು ಸಂದೇಶಗಳು ನಮ್ಮ ಜೀವನಕ್ಕೆ ಸದಾ ಮಾರ್ಗದರ್ಶನ ನೀಡುವಂತಿರಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್, ಸಂಶೋಧನಾ ಕೇಂದ್ರದ ನಿರ್ದೇಶಕಿ ಹಾಗು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯಸರಸ್ವತಿ ಬಿ. ಹಾಗೂ ಕಾಲೇಜಿನ ವಿಶೇಷ ಅಧಿಕಾರಿ (ಆಡಳಿತ ವಿಭಾಗ) ಹಾಗು ಕನ್ನಡ ವಿಭಾಗದ ಮುಖ್ಯಸ್ಥ ಡಾ ಮನಮೋಹನ್ ಎಂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಹರ್ಷ ಶೆಟ್ಟಿ ಸ್ವಾಗತಿಸಿ, ರಮ್ಯಶ್ರೀ ಶಂಕರಿ ವಂದಿಸಿ, ಸುಮ ಭಟ್ ಸಿ.ಎಚ್. ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top