ಮಂಗಳೂರು: ನಗರದ ಸಾಂಸ್ಕೃತಿಕ ರಂಗಕ್ಕೆ ಮತ್ತೊಂದು ವೈಭವದ ಮೆರುಗು ನೀಡಲು ಭರತನಾಟ್ಯ ಕಲಾಪ್ರದರ್ಶನ ಸಿದ್ಧಗೊಂಡಿದೆ. ಕುಮಾರಿ ಶ್ರಾವಣಿ ಕೆ. ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅಕ್ಟೋಬರ್ 31, 2026ರ ಶನಿವಾರದಂದು ಜರುಗಲಿದೆ.
ನಗರದ ಪ್ರತಿಷ್ಠಿತ ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಸಂಜೆ 5:15ಕ್ಕೆ ಈ ಕಲಾತ್ಮಕ ಸಮಾರಂಭವು ಚಾಲನೆ ಪಡೆಯಲಿದೆ. ಭರತನಾಟ್ಯದ ಸೊಬಗು, ಭಾವ-ರಸ, ಲಯ ಹಾಗೂ ತಾಳದ ನೃತ್ಯ ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಕಲಾಪ್ರಪಂಚಕ್ಕೆ ಕರೆದೊಯ್ಯಲು ಯುವ ನರ್ತಕಿ ಶ್ರಾವಣಿ ಭಟ್ ಸಿದ್ಧರಾಗಿದ್ದಾರೆ.
ಸಾಂಪ್ರದಾಯಿಕ ಹಾಗೂ ರಂಗಭೂಮಿಯ ವಿಶಿಷ್ಟ ಶೈಲಿಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮದ ನಂತರ ಆಗಮಿಸಿದ ಸರ್ವ ಅಭ್ಯಾಗತರಿಗಾಗಿ ಸ್ನೇಹಭೋಜನಕೂಟವನ್ನು ಏರ್ಪಡಿಸಲಾಗಿದೆ. ಕಲಾಭಿಮಾನಿಗಳು, ಬಂಧು-ಮಿತ್ರರು ಹಾಗೂ ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯುವ ಕಲಾವಿದೆಯನ್ನು ಹಾರೈಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.
ಕುಮಾರಿ ಶ್ರಾವಣಿ ಕೆ. ಭಟ್ ಪರಿಚಯ:
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಕುಟುಂಬದ ದಂಪತಿಗಳಾದ ಶ್ರೀ ಕೆ. ಅನಂತಭಟ್ಟ ಹಾಗೂ ಸರಸ್ವತಿ ಇವರ ಮೊಮ್ಮಗಳಾಗಿ ಶ್ರೀ ಕೆ. ಕೃಷ್ಣ ಭಟ್ ಹಾಗೂ ಪ್ರೀತಿ ಇವರ ಪುತ್ರಿಯಾಗಿ ಗುಜರಾತ್ನ ವಾಪಿಯಲ್ಲಿ 11 ಫೆಬ್ರವರಿ 2006ರಂದು ಜನಿಸಿದ ಕುಮಾರಿ ಶ್ರಾವಣಿ ಕೆ. ಭಟ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಪ್ರಿಯದರ್ಶಿನಿ ಮೋಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಹಾಗೂ ಮಣಿಪಾಲ್ ಸ್ಕೂಲ್ ಇದರಲ್ಲಿ ಮುಗಿಸಿ ನಂತರ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ನಲ್ಲಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಬಿ.ಎ. ಪದವಿಯ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ತಮ್ಮ ಆರನೇ ವಯಸ್ಸಿನಲ್ಲೇ ಭರತನಾಟ್ಯದ ಕಳಾಭ್ಯಾಸವನ್ನು ಆರಂಭಿಸಿದ ಶ್ರಾವಣಿ ಅವರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ನೃತ್ಯ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಗುರುಗಳ ತಂಡದ GNAಯ ಭಾಗವಾಗಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ನೂರಕ್ಕೂ ಅಧಿಕ ಏಕವ್ಯಕ್ತಿ ಹಾಗೂ ಸಮೂಹ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.
ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಗಳನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಅವರು, ಪ್ರಸ್ತುತ ಅಂತಿಮ ವಿದ್ವತ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಅವರು, ವಿದ್ವಾನ್ ಕೃಷ್ಣಾಚಾರ್ಯ ಬಂಟವಾಳ ಹಾಗೂ ವಿದುಷಿ ಶ್ರೀಮತಿ ರಜತ ಕೃಷ್ಣಾಚಾರ್ಯ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತ - ಗಾಯನದ ಜೂನಿಯರ್ ಗ್ರೇಡ್ ಪರೀಕ್ಷೆಯನ್ನೂ ಪೂರ್ಣಗೊಳಿಸಿದ್ದಾರೆ. ಭರತನಾಟ್ಯದ ಕ್ಷೇತ್ರದ ಖ್ಯಾತ ಕಲಾವಿದರಾದ ವೈಭವ್ ಅರೇಕರ್, ಪ್ರವೀಣ್ ಕುಮಾರ್, ರಮಾ ವೈದ್ಯನಾಥನ್, ಮೀರಾ ಶ್ರೀನಾರಾಯಣನ್, ಹರಿಣಿ ಜೀವಿತಾ ಹಾಗೂ ದಿವ್ಯಾ ನಾಯರ್ ಸೇರಿದಂತೆ ಹಲವು ಗಣ್ಯ ಕಲಾವಿದರ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಕಲಾ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.
ನೃತ್ಯ ಸಾಧನೆಯ ಗೌರವ:
ಚಿಕ್ಕವಯಸ್ಸಿನಿಂದಲೇ ಭರತನಾಟ್ಯದ ಮೇಲೆ ಅಪಾರ ಆಸಕ್ತಿ, ಶಿಸ್ತು ಮತ್ತು ಸಮರ್ಪಣಾಭಾವವನ್ನು ಬೆಳೆಸಿಕೊಂಡು, ನಿರಂತರ ಅಭ್ಯಾಸದ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡಿರುವ ಕುಮಾರಿ ಶ್ರಾವಣಿ ಕೆ. ಭಟ್, ಯುವ ಪೀಳಿಗೆಗೆ ಭಾರತೀಯ ಶಾಸ್ತ್ರೀಯ ಕಲೆಯ ಮಹತ್ವವನ್ನು ಪರಿಚಯಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

