ವಿಡಂಬನೆ: ಬಂಡೆ ಗುಮ್ಮೇತಿ ಟಗರಿಗೆ

Shreya Hegde
0



'ಅಲ್ಲಾ ಇವು ಸ್ಟಿಂಗ್ ಪಂಗ್ ಎಲ್ಲಾ ಬಂದು ಏನಾಗೇತಿ ಗೊತ್ತತೇನು?' ದುಬಲ್ಯಾ ಕೇಳಿದ. 'ಏನಾಗೇತಲೇ ಏನೂ ಆಗಿಲ್ಲ?' ಎಂದ ಶೌರಿ 

'ಏನs ಮಳ್ಳ ಮಕಾಸಿ ಆದಾನಲೇ ಇಂವಾ, ಅಲ್ಲಿ ಹೊತ್ತಿ ಉರಿಯಾಕ ಹತ್ತೇತಿ, ಏನೂ ಇಲ್ಲ ಅಂತತೆಲೆ ಇದು' ಎಂದ ಗುಡುಮ್ಯಾ

'ಯಾರು ಯಾರಿಗೆ ಮಾಡ್ಯಾರು ಹೇಳು?' ಕೇಳಿದ ಕಾಳ್ಯಾ. 'ಅದು ತನಿಖೆ ಪ್ರಗತಿಯಲ್ಲಿದೆ ಅಂತ 'ಹೋಂ' ಹೇಳ್ಯಾರಲ್ಲ?' ಎಂದ ಜಬರದಸ್ತ

'ಅಲ್ಲಾ ಅದು 'ಪ್ರಗತಿ' ದಾಟಿ ಮುಂದ್ಕs ಯಾವಾಗ ಹೊಕ್ಕೈತಿ?' ನಕ್ಕೋತ ಕೇಳಿದ ಕಾಳ್ಯಾ.


'ಅದು ಹೇಳಕ್ಕ ಬರಂಗಿಲ್ಲ ನೋಡು, ಬೇಕಂದ್ರss ಜಲ್ದಿ ಆಕೈತಿ ಬ್ಯಾಡಂದ್ರsss .......' ರಾಗಾ ಎಳದ ದುಬಲ್ಯಾ. 'ಅಲ್ಲಾ, ಈಗ 'ಬಂಡೆನೇ ಗುಮ್ಮೇತಿ ಟಗರಿಗೆ' ಅಂತ ಸಿನೇಮಾ ತಗೆಕಂತಾರಂತ ಹೌಂದಾ?' ಕೇಳಿದ ಜಬರದಸ್ತ. 'ಅದು ಸೆಟ್ ಎಂದೋ ಏರೇತಿ, ಆದ್ರs ರಿಲೀಜ್ ಆಗೂದು 2028ಕ್ಕೆ' ಎಂದ ನಗುತ್ತ ಗುಡುಮ್ಯಾ. 'ಅಸೆಂಬ್ಲಿ ಎಲೆಕ್ಷನ್ ಟೈಮ್ಕೇ ಅನ್ನೂ' ಎಂದು ನಕ್ಕಳು ರಾಣಿ. 'ಒಟ್ಟ ಎಲ್ಲಾ ಗಬ್ಬ ನಾರಕತ್ತೇತಿ, ಇರಲಿ ಹೊಸಾದ ಹೇಳು' ಎಂದ ದುಬಲ್ಯಾ.


'ಮಳಿ ಹೋಗೇತಿ... ಬೆಳಿ ಎಲ್ಲಿ ಬರತೈತಿ? ಈ ಸಲ ಬೆಂಕಿ ಬ್ಯಾಸಗಿ ಆಕೈತಿ' ಎಂದ ಜಬರದಸ್ತ. 'ಎನ್ ಹೇಳಕಿ ಹೇಳಾಕತ್ತಿದ್ಯಾ ಹ್ಯಾಂಗ?' ಕೇಳಿದ ಶೌರಿ. 'ಹೌಂದಪಾ,ಮಳಿ ಬೆಳಿ ಹೋದ್ರು ಸ್ಟಿಂಗ್ ನಡದತೆಲೆ, ಜನರು ಹೈರಾಣಾದ್ರೂ ಏನೂ ಫರಕ್ ಬಿದ್ದಿಲ್ಲ ಸಮಾಜ ಸೇವಕರಿಗೆ ಪರಾಕ್' ಎಂದ ಗುಡುಮ್ಯಾ.


'ಅಂದ್ರs ಅವರಿಗೆ ಕುರ್ಚಿನೇ ಮುಖ್ಯ ಆತಲ್ಲ' ಎಂದ ದುಬಲ್ಯಾ. 'ಅವರವರಿಗೆ ಅವರದ ಚಿಂತಿ ಇರ್ತತೆಪಾ, ಊರ ಚಿಂತಿ ಮಾಡಿ ಏನ ಬರತೈತಿ ಬೋಲಬಾ?' ಎಂದ ಕಾಳ್ಯಾ. 'ಈಗ ಮಳಿ ಚಳಿ ಬೇಸಿಗೆ ಎಲ್ಲಾ ಹೋಗಿ, ಬರೇ ಭಯಂಕರ ಬ್ಯಾಸಿಗಿದ ಹಾವಳಿ ಹಿಡಿದತಿ ನೋಡು' ಎಂದ ದುಬಲ್ಯಾ. 'ಏ ರಾಯಚೂರ ಕಲಬುರಗಿ ಯಾದಗಿರಿ.... ಬಿಸಿಲು ನೋಡಬೇಕ ನೀನು' ಎಂದ ಜಬರದಸ್ತ.


'ಹ್ಯಾಂಗತಿ?' ಕೇಳಿದ ದುಬಲ್ಯಾ. 'ಆ ಬಿಸಿಲಿಗಿ ಈ ಸ್ಟಿಂಗ್ ಗ್ಯಾಂಗ್ ಎಲ್ಲಾ ಸುಟ್ಟು ಕರಕಲಾಗ್ತೈತಿ' ಎಂದ ಜಬರದಸ್ತ. 'ಏನ್ ಮಳ್ಳ ಇದ್ದಾನಲೇ ತಮ್ಮಾ ಇಂವಾ? ಈ ಸ್ಟಿಂಗ್ ದ ಮುಂದ ಸೂರ್ಯಾನೇ ಮಂಕ ಆಕ್ಕಾನು, ಬೇಕಾದ್ರs ನೀ ನೈಸಾಗಿ ರಂಬಿಸಿ ಕುಮ್ಮಿಗಿ ಕೇಳು' ಎಂದು ನಕ್ಕ ದುಬಲ್ಯಾ. 'ಹೊಡಿ ಒಂಭತ್ತs.... ಎಲ್ಲಾ ಗದ್ಲ ಹಿಡದೈತಿ, ಮೊನ್ನೆ ಶಿವಮೊಗ್ಗದಾಗ ಬೆಳ್ಳಿ ಅಂಬಾರಿ ಬೀಳಿಸಿ ಆನೆ ಓಡಿ ಹೋದಂಗಾಗೇತಿ' ಎಂದ ಶೌರಿ.


'ಅಂತೂ ಝಡ್ಪಿ ಟಿಪಿ ಎಲೆಕ್ಷನ್ ಬಂದೂ ನೋಡು ಛೋಲೋ ಆತು' ಎಂದ ಜಬರದಸ್ತ. 'ಅದೂ ಇನ್ನಾ ಕುಂಟ್ಯಾಡಕತ್ತೇತಿ ತಗೋ' ಎಂದಳು ರಾಣಿ. 'ಯಾಕ ಅಲ್ಲಿನೂ ಸ್ಟಿಂಗ್ ಆಪರೇಷನ್ ಮಾಡೂದೈತ್ಯಾ ಹ್ಯಾಂಗ?' ಕೇಳಿದ ಕಾಳ್ಯಾ. 'ಏs ಅಲ್ಲಿ ಸ್ಟಿಂಗ್ ಪಂಗ್ ಎಲ್ಲಾ ಏನೂ ನಡೆಂಗಿಲ್ಲ, ಏನಿದ್ರೂ ಡೈರೆಕ್ಟ್ ಫೈಟ್ ಅಂದ್ರ ನೇರಾನೇರ ಗುದ್ದಾಟ' ಎಂದ ದುಬಲ್ಯಾ.


'ಅದೇ ಬೇಸಿ ಬಿಡು, ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂದು ನಕ್ಕ ಕಾಳ್ಯಾ. 'ನಡ್ರಿ ಹಂಗಾದ್ರs ಎಲ್ಲಾರೂ, ರಾಜ್ಯೋತ್ಸವ ಬಂತಲಾ, ಜೈ ಕನ್ನಡ ತಾಯಿಗೆ ಅಂತ ಒಂದು ಕವಿಗೋಷ್ಠಿ ಮಾಡಾಣು' ಎಂದ ಗುಡುಮ್ಯಾನ ಮಾತಿಗೆ ಎಲ್ಲಾರೂ ಜೈ ಅಂತ ಹೊಂಟ್ರು.


'ಆದ್ರs... ಭಾಳ ಕೋರಿಬ್ಯಾಡ್ರೇಪೋ.....' ಅಂತ ಕಾಳ್ಯಾ ಗೊಣಗಿದ್ದು ಕೇಳಿ ಎಲ್ಲಾರೂ ಅವ್ನ ಕೆಕ್ಕರಿಸಿ ನೋಡಿದ್ರು.


- ಶ್ರೀನಿವಾಸ ಜಾಲವಾದಿ, ಸುರಪುರ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top