ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ....!ಸರಣಿ
ಕಾಸರಗೋಡು: ಅಕ್ಟೋಬರ್ ತಿಂಗಳ 25ನೇ ತಾರೀಕಿನಂದು ಭಾನುವಾರ ಬೆಳಗ್ಗೆ 9.30 ರಿಂದ ಇಡೀ ದಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ....! ಎಂಬ ಶೀರ್ಷಿಕೆಯಲ್ಲಿ ಯಕ್ಷಗಾನ ಹೆಮ್ಮೇಳ ಕಲಾವಿದರ ಶಿಬಿರವು ನಡೆಯಲಿದೆ. ಸಿರಿಬಾಗಿಲು ಪ್ರತಿಷ್ಠಾನದ ಸಹಸಂಸ್ಥೆಯಾದ "ಯಕ್ಷಾನುಗ್ರಹ ವಾಟ್ಸಾಪ್ ಬಳಗ" ಈ ಕಾರ್ಯಕ್ರಮಕ್ಕೆ ಸಹಯೋಗ -ಆರ್ಥಿಕ ಸಹಕಾರ ನೀಡಲಿದೆ.
ಯಕ್ಷಗಾನ ಹಿಮ್ಮೇಳದ ಲಯಬ್ರಹ್ಮ ಕೀರ್ತಿ ಶೇಷ ದಿವಾಣ ಭೀಮ ಭಟ್ ಅವರ ಸ್ಮರಣೆಯೊಂದಿಗೆ ಹಲವಾರು ಹಿಮ್ಮೇಳ ಕಲಾವಿದರ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಮೆರಗುಗೊಳ್ಳಲಿದೆ. ದಿವಾಣ ಭೀಮ ಭಟ್ ರವರ ಸಂಸ್ಮರಣೆಯನ್ನು ತಾಳಮದ್ದಳೆ ಅರ್ಥದಾರಿ ರಾಧಾಕೃಷ್ಣ ಕಲ್ಚರ್ ವಿಟ್ಲ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಹಿಮ್ಮೇಳ ಗುರುಗಳಾದ ಹರಿ ನಾರಾಯಣ ಬೈಪಡಿತ್ತಾಯ ಅವರು ವಹಿಸಿದರೆ, ಸಭಾಧ್ಯಕ್ಷತೆಯನ್ನು ಅನನ್ಯ ಫೀಡ್ಸ್ ಹುಬ್ಬಳ್ಳಿ ಸಂಸ್ಥೆಯ ನಿರ್ದೇಶಕರಾದ ದಿವಾಣ ಗೋವಿಂದ ಭಟ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪದ್ಯಾಣ ಶಂಕರನಾರಾಯಣ ಭಟ್ , ಕರ್ಗಲ್ಲು ವಿಶ್ವೇಶ್ವರ ಭಟ್ ಭಾಗವಹಿಸಲಿದ್ದಾರೆ. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸುಬ್ರಾಯ ಸಂಪಾಜೆ, ಕೃಷ್ಣ ಪ್ರಸಾದ್ ಉಳಿತ್ತಾಯ, ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಅಂಡಾಲ ದೇವಿ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ನೂರಕ್ಕೂ ಹೆಚ್ಚು ಕಲಾವಿದರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಸಂಜೆ 4:30ಕ್ಕೆ ವಿಶೇಷ ಅತಿಥಿಗಳಾಗಿ ಸಮಾರೋಪ ಭಾಷಣವನ್ನು ವಿದ್ವಾನ್ ಹರಿನಾರಾಯಣ ದಾಸ ಆಸ್ರಣ್ಣ, ಅನುವಂಶಿಕ ಅರ್ಚಕರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ದ. ಕ. ಇವರು ನೆರವೇರಿಸಲಿದ್ದಾರೆ, ಆಸಕ್ತ ಕಲಾವಿದರು ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನ ಹಾಗೂ ಯಕ್ಷಾನುಗ್ರಹ ವಾಟ್ಸಪ್ ಬಳಗವು ಪ್ರಕಟಣೆಯ ಮೂಲಕ ತಿಳಿಸಿದೆ.

