ಸಿದ್ಧಕಟ್ಟೆ ಕಾಲೇಜಿನಲ್ಲಿ ದ.ಕ ಜಿಲ್ಲಾ ಕಸಾಪ ವತಿಯಿಂದ ದತ್ತಿನಿಧಿ ಉಪನ್ಯಾಸ
ಬಂಟ್ವಾಳ: ಶಂಕರ ಭಗವತ್ಪಾದರು ಜ್ಞಾನಕ್ಕೆ ಒತ್ತು ನೀಡಿ ಜಗತ್ತಿಗೆ ಹೊಸ ದರ್ಶನವನ್ನು ನೀಡಿದ ದಾರ್ಶನಿಕರು ಎಂದು ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು. ಸಿದ್ಧಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಡೆದ ಪುತ್ತೂರು ಕೊಯಿಲ ಶ್ರೀನಿವಾಸ ರಾವ್ ತಾರಾ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.
“ತಮ್ಮ ಕಾಲದಲ್ಲಿ ಕರ್ಮಕಾಂಡಕ್ಕೆ ಇದ್ದ ಒತ್ತನ್ನು ಕಂಡು ಜ್ಞಾನಕಾಂಡದ ಮಹತ್ವವನ್ನು ತಿಳಿಹೇಳಿದವರು ಶಂಕರ ಭಗವತ್ಪಾದರು. ಸಾವಿರಾರು ವರ್ಷಗಳ ಹಿಂದಿನ ಉಪನಿಷತ್ತುಗಳಲ್ಲಿ ಇರುವ ತತ್ವವನ್ನೇ ಅದ್ವೆöÊತ ದರ್ಶನವಾಗಿ ಪ್ರಚುರಪಡಿಸಿದ ಶಂಕರರು ತಾವು ಹೇಳಿದ ತತ್ವದಂತೆಯೇ ಬದುಕಿದವರು. ಜೀವಾತ್ಮ- ಪರಮಾತ್ಮರ ನಡುವೆ ಭೇದವನ್ನು ಕಾಣದೆ ಸಕಲಜೀವಿಗಳಲ್ಲೂ ‘ಬ್ರಹ್ಮ’ವನ್ನು ಕಾಣುವ ತತ್ವದೊಂದಿಗೆ ಅವರು ಭಾರತಾದ್ಯಂತ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು. ಕೇವಲ ಮೂವತ್ತೆರಡು ವರ್ಷಗಳ ಕಾಲ ಬದುಕಿದ ಅವರು ಪವಾಡಸದೃಶವೆಂಬಂತೆ ಅಧ್ಯಾತ್ಮದ ಸಾಧನೆಯನ್ನು ಮಾಡಿ ಜಗತ್ತಿಗೆ ಹೊಸ ಬೆಳಕನ್ನು ನೀಡಿದರು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು ಮಾತನಾಡಿ “ಸಾಹಿತ್ಯವು ನಮ್ಮ ಸಂವೇದನೆಯನ್ನು ಸೂಕ್ಷ್ಮಗೊಳಿಸುತ್ತದೆ. ದತ್ತಿ ಉಪನ್ಯಾಸಗಳ ಮೂಲಕ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗೆಗೆ ಯುವ ಮನಸ್ಸುಗಳಲ್ಲಿ ಪ್ರೀತಿಯನ್ನು ಮೂಡಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಂಡು ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಿರೀಶ ಭಟ್ ಅಜಕ್ಕಳ “ಶಂಕರಾಚಾರ್ಯರು ಕಲ್ಪನೆಯನ್ನಾಧರಿಸಿದ ಕಾವ್ಯ, ಸ್ತೋತ್ರಗಳನ್ನು ರಚಿಸಿದರು. ಹಾಗೆಯೇ ಚಿಂತನೆ, ವೈಚಾರಿಕ ತರ್ಕ ಮತ್ತು ಆಧ್ಯಾತ್ಮಿಕ ಅನುಭವದ ಹಿನ್ನೆಲೆಯಲ್ಲಿ ದಾರ್ಶನಿಕ ಸಾಹಿತ್ಯವನ್ನೂ ರಚಿಸಿದರು. ವೇದೋಪನಿಷತ್ತುಗಳಲ್ಲಿರುವ ಮೌಲ್ಯಗಳನ್ನು ಜನರಿಗೆ ಅರ್ಥ ಮಾಡಿಸಲು ಭಾಷ್ಯಗಳನ್ನು ಬರೆದರು. ಸಂಸ್ಕೃತ ಸಾಹಿತ್ಯ ಜಗತ್ತಿನಲ್ಲಿ ಶಂಕರ ಭಗವತ್ಪಾದರ ರಚನೆಗಳು ನಿತ್ಯ ನೂತನವಾಗಿವೆ” ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಬಿ ಶೆಟ್ಟಿ ಮತ್ತು ಕನ್ನಡ ಬಳಗದ ಸಂಚಾಲಕಿ ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಕ್ಷಿತಾ ಕಾರ್ಯಕ್ರಮವನ್ನು ನಿರ್ವಹಿಸಿದರು.

