ಶಿರಸಿ: ಆಧುನಿಕ ಪ್ರಜ್ಞೆ ಮತ್ತು ಜೀವನಶೈಲಿಯ ಪ್ರಭಾವದಿಂದ ಭಾರತೀಯತೆಯ ಮೂಲ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ಕಾದಂಬರಿಕಾರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷ ಗಂಗಾಧರ ಕೊಳಗಿ ಆತಂಕಿಸಿದರು.
ತಾಲೂಕಿನ ಯಡಹಳ್ಳಿಯಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಮಕ್ಕಳ ಪ್ರಕಾರ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತ, ಭಗವದ್ಗೀತೆ ಭಾರತೀಯ ಪರಂಪರೆಯ ಜ್ಞಾನದ ನೆಲೆಗಳು. ಈ ಮಹಾಗ್ರಂಥಗಳ ಬಳಿಕ ಬಂದ ಸಾಹಿತ್ಯದ ವಿವಿಧ ಪ್ರಕಾರಗಳು ಅವುಗಳಲ್ಲಿನ ಮೌಲ್ಯಗಳನ್ನು ತಮ್ಮದೇ ರೀತಿಯಲ್ಲಿ ಪ್ರತಿಪಾದಿಸುತ್ತ ಬಂದಿವೆ. ವಚನ ಮತ್ತು ದಾಸ ಸಾಹಿತ್ಯ ಓದಲು ಸರಳವಾಗಿ ಕಂಡರೂ, ಅವುಗಳಲ್ಲಿನ ಜೀವನದರ್ಶನ ಹಾಗೂ ಮೌಲ್ಯಗಳು ಅತ್ಯಂತ ಅರ್ಥಗರ್ಭಿತವಾಗಿವೆ. ಇಂತಹ ಸಾಹಿತ್ಯವನ್ನು ಅರಿಯುವ ಮೂಲಕ ನಮ್ಮ ಪರಂಪರೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಬಾಲ್ಯದ ಅನುಭವಗಳು ವ್ಯಕ್ತಿಯ ಆಸಕ್ತಿ, ಚಿಂತನೆ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಎಳೆಯ ಮನಸ್ಸುಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಅರಿವು ಮೂಡಿಸಲು ಇಂತಹ ಮಕ್ಕಳ ಗೋಷ್ಠಿಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು. ಪರಿಷದ್ನ ರಾಜ್ಯಾಧ್ಯಕ್ಷ ಎಸ್.ಜಿ.ಕೋಟಿ ಶಿಸ್ತು ಮತ್ತು ಸಮಯಪಾಲನೆಯ ಮಹತ್ವವನ್ನು ಪ್ರತಿಪಾದಿಸಿ, ಅವು ಬದುಕಿಗೆ ಶಿಸ್ತುಬದ್ಧ ಚೌಕಟ್ಟು ಒದಗಿಸುತ್ತವೆ. ಮಕ್ಕಳಲ್ಲಿ ಭಾರತೀಯ ಪರಂಪರೆಯ ಕುರಿತು ಚಿಂತನೆ ಮತ್ತು ವಿಚಾರಮಂಥನ ನಡೆಸಲು ಇಂತಹ ಕಾರ್ಯಕ್ರಮಗಳು ಪ್ರಸ್ತುತವಾಗಿವೆ ಎಂದರು. ದಿಕ್ಸೂಚಿ ಭಾಷಣ ಮಾಡಿದ ಮಕ್ಕಳ ಪ್ರಕಾರದ ಮುಖ್ಯಸ್ಥೆ ಸುಜಾತ ಹೆಗಡೆ, ಭಾರತಕ್ಕೆ ಸೋಲುವ ಭಯವಿಲ್ಲ; ಎದ್ದೇಳುವ ಭರವಸೆಯಿದೆ. ಹೊಸ ತಲೆಮಾರಿಗೆ ವೇದಜ್ಞಾನವನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದ್ದು, ಭಾರತದ ಜ್ಞಾನಪರಂಪರೆಯೇ ನಮ್ಮ ಬದುಕಿನ ಬೆನ್ನೆಲುಬು ಎಂಬ ಅರಿವು ಮೂಡಿಸುವಲ್ಲಿ ಇಂತಹ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಪರಿಷದ್ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿತ್ಯ ಹೆಗಡೆ ಯಡಹಳ್ಳಿ ಉಪಸ್ಥಿತರಿದ್ದರು. ನಾಗಶ್ರೀ ಹೆಗಡೆ ಪ್ರಾರ್ಥಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಸಂಧ್ಯಾ ಶಾಸ್ತ್ರಿ ಸ್ವಾಗತಿಸಿದರು. ಪುಷ್ಪಾ ಭಟ್ಟ ಮಾಳಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಕ್ಕಳು ದಾಸ ಸಾಹಿತ್ಯದಲ್ಲಿನ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು, ವಚನ ಸಾಹಿತ್ಯ ಸಾರುವ ಸಾಮರಸ್ಯ ಹಾಗೂ ಸನ್ನಡತೆ, ಕಬೀರರ ಜೀವನದೃಷ್ಟಿ ಮೊದಲಾದ ವಿಷಯಗಳ ಕುರಿತು ವಿಚಾರ ಮಂಡಿಸಿದರು.

