ಪಿತೃಪಕ್ಷಾಚರಣೆಯಿಂದ ಪುಣ್ಯಪ್ರಾಪ್ತಿ: ಫಲಿಮಾರು ಶ್ರೀ

Shreya Hegde
0


ಕಲಬುರಗಿ: ದೇವತಾರಾಧನೆಯಂತೆ ಭಕ್ತಿ ಶ್ರದ್ದೆಯಿಂದ ಪಿತೃಪಕ್ಷವನ್ನು ಶ್ರದ್ಧಾಪೂರ್ವಕವಾಗಿ ಆಚರಣೆ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಫಲಿಮಾರು ಮಠಾಧೀಶರಾದ ಪೂಜ್ಯಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.


ಕಲಬುರಗಿಯ ರಾಮಮಂದಿರದಲ್ಲಿ ಶುಕ್ರವಾರ ಸಾಮೂಹಿಕ ಸಂಸ್ಥಾನ ಪೂಜೆ ನೆರವೇರಿಸಿದ ನಂತರ ಸೇರಿದ ಭಕ್ತರನ್ನುದೇಶಿಸಿ ಆಶೀರ್ವಚನ ನೀಡುತ್ತಾ ಪಿತೃ ಪಕ್ಷವನ್ನು ತಮ್ಮ ತಮ್ಮ ಮನೆಯಲ್ಲಿ ಆಚರಣೆ ಮಾಡುವ ಮೂಲಕ ಹಿರಿಯರ ಸ್ಮರಣೆ ಹಾಗೂ ಅವರ ಮೇಲಿನ ಭಕ್ತಿಯ ಸಂಪ್ರದಾಯವನ್ನು ಮುಂದುವರಿಕೆ ಮಾಡಿದರೆ ಪುಣ್ಯಾರ್ಜನೆ ಮಾಡುವ ಸದವಕಾಶ ಲಭ್ಯವಾಗುತ್ತದೆ. ಸನಾತನ ಹಿಂದೂ ಸಂಪ್ರದಾಯದಲ್ಲಿ ದಿನಕ್ಕೊಂದು ದೇವರ ಆರಾಧನೆ ಮಾಡಿ ಒಂದು ದಿನಕ್ಕೆ ಪುಣ್ಯ ಗಳಿಸಿಕೊಳ್ಳುವ ಅವಕಾಶವಿದೆ.


ಆದರೆ ಪಿತೃ ಪಕ್ಷಚಾರಣೆಯ ಮೂಲಕ ಏಕಾದಶಿ ಹೊರತುಪಡಿಸಿ 14ದಿನಗಳ ಕಾಲ ಆರಾಧನೆಯ ಪುಣ್ಯ ಒದಗುತ್ತದೆ. ಪಿತೃ ಪಕ್ಷ ಆಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತಗೊಳ್ಳದೆ ಭಕ್ತಿಯ ಪಿಂಡ ಪ್ರದಾನದಿಂದ ದೇವತೆಗಳು ಕೂಡ ಒಲಿದು ಹಿರಿಯರ ಆತ್ಮಕ್ಕೆ ಚಿರ ಶಾಂತಿ ದೊರಕುತ್ತದೆ. ಧಾರ್ಮಿಕ ವಿಧಿ ವಿಧಾನಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿ ನಂಬಿಕೆ ಶ್ರದ್ದೆಯನ್ನು ಹಂಚಿಕೆ ಮಾಡಿ ಭಕ್ತಿಯ ವಾತಾವರಣ ಸೃಷ್ಟಿಸುವ ಅಗತ್ಯ ಇದೆ ಎಂದು ಸ್ವಾಮೀಜಿ ಹೇಳಿದರು.


ಮುಂಬೈಯಲ್ಲಿ ನಡೆಯುವ ಶರನ್ನವರಾತ್ರಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರು ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಮಂದಿರದ ವಕ್ತಾರರಾದ ಕಿಶೋರ ದೇಶಪಾಂಡೆ ಮ್ಯಾನೇಜರ್ ನಿರಂಜನ ರಾವ್, ಅರ್ಚಕರಾದ ನಾಗರಾಜ್ ಮತ್ತಿತರರು ಯತಿದ್ವಯರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top