ಚೆರ್ಕಳ: ಕಾಸರಗೋಡು ಚೆರ್ಕಳದ ಬೇವಿಂಜೆ ಮಯಂಗರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಂಬರುವ ಡಿಸೆಂಬರ್ 18 ರಿಂದ 27ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರಗಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಿದ್ಧತೆಗಳ ಕುರಿತು ಪ್ರಮುಖ ಕಾರ್ಯಕಾರೀ ಸಮಿತಿಯ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಗಿರಿಧರನ್ ಅವರು ದಿಕ್ಸೂಚಿ ಮಾತುಗಳನ್ನಾಡಿ, ಬ್ರಹ್ಮಕಲಶೋತ್ಸವದ ಸಮಗ್ರ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಸಮಿತಿಯ ಅಧ್ಯಕ್ಷರಾದ ಗೋವಿಂದಬಳ್ಳಮೂಲೆ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಉತ್ಸವದ ಯಶಸ್ಸಿಗಾಗಿ ರಚಿಸಲಾಗಿರುವ ವಿವಿಧ ಉಪಸಮಿತಿಗಳ ಜವಾಬ್ದಾರಿಗಳು ಮತ್ತು ಕಾರ್ಯಾಚರಣೆಯ ಬಗ್ಗೆ ವಿಸ್ತೃತ ವಿವರಣೆ ನೀಡಿದರು. ನವೀಕರಣ ಸಮಿತಿ ಅಧ್ಯಕ್ಷರಾದ ಬಿ.ವಿ. ಕಕ್ಕಿಲ್ಲಾಯ ಅವರು ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಹಾಗೂ ನವೀಕರಣ ಯೋಜನೆಗಳ ಪ್ರಗತಿ ವರದಿಯನ್ನು ಮಂಡಿಸಿದರು.
ಸ್ಥಳೀಯ ವಾರ್ಡ್ ಸದಸ್ಯೆ ಜಯಕುಮಾರಿ, ಪ್ರಮುಖರಾದ ಕೃಷ್ಣಪ್ರಸಾದ್ ಕೋಟೆಕಣಿ ಹಾಗೂ ಬಿ.ಕೆ. ವಿಜಯನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದರು. ಆಡಳಿತಾಧಿಕಾರಿಗಳಾದ ವಿಷ್ಣುಮೂರ್ತಿ ಕಕ್ಕಿಲ್ಲಾಯ, ಗೋಪಾಲಕೃಷ್ಣ ಕಕ್ಕಿಲ್ಲಾಯ ಮತ್ತು ಡಾ. ಶ್ರೀಕಾಂತ್ ಕಕ್ಕಿಲ್ಲಾಯ ಅವರು ಸಭೆಗೆ ಮಾರ್ಗದರ್ಶನ ನೀಡಿದರು. ವಿವಿಧ ಉಪಸಮಿತಿಗಳ ಸಂಚಾಲಕರು ತಮ್ಮ ತಮ್ಮ ವಿಭಾಗಗಳ ಕಾರ್ಯವಿಧಾನಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯ ಕೊನೆಯಲ್ಲಿ ಕಾರ್ಯದರ್ಶಿ ರವಿ ಬೇವಿಂಜೆ ಅವರು ವಂದನಾರ್ಪಣೆಗೈದರು.


