ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ನಿವಾಸಿಗಳ ಆಕ್ರೋಶ

Upayuktha
0


ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವಯೋಗಿ ನಗರದ ಮೂಲಕ ಹಾದುಹೋಗುವ ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಜೀವಭಯದಲ್ಲೇ ಕಾಲಕಳೆಯುವಂತಾಗಿದೆ. ಈ ಕುರಿತು ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾದ ಮಹೇಶ್ ಎಮ್. ಶರ್ಮಾ ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಾಧ್ಯಮಗಳಲ್ಲಿ ಸತತವಾಗಿ ವರದಿಗಳು ಬಿತ್ತರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಶಿವಯೋಗಿ ನಗರದ ಬಳಿ ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು, ಇಲ್ಲಿರುವ ಮೋಟಗಿ ತೋಟ ಶಾಲೆಯ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ದಾಟಲು ಹರಸಾಹಸಪಡಬೇಕಿದೆ. ಯಾವುದೇ ವೇಗ ನಿಯಂತ್ರಕಗಳಿಲ್ಲದ ಕಾರಣ ಈಗಾಗಲೇ ಹಲವು ಅಪಘಾತಗಳು ಸಂಭವಿಸಿ, ಸಾರ್ವಜನಿಕರು ಹಾಗೂ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿಯಮಗಳ ನೆಪವೊಡ್ಡಿ ಅಧಿಕಾರಿಗಳು ಸ್ಪೀಡ್ ಬ್ರೇಕರ್ ಹಾಕಲು ನಿರಾಕರಿಸುತ್ತಿರುವುದು ಸರಿಯಲ್ಲ. ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಜೀವ ರಕ್ಷಣೆಗಾಗಿ ಇಲ್ಲಿ ಕೂಡಲೇ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಇಲ್ಲಿ ಏನಾದರೂ ದೊಡ್ಡ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗಿದೆ.


ಇದರೊಂದಿಗೆ, ಶಿವಯೋಗಿ ನಗರ ಹಾಗೂ ಸುತ್ತಮುತ್ತಲಿನ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಅನುಕೂಲಕ್ಕಾಗಿ ಪ್ರಸ್ತುತ ಇರುವ ಮೋಟಗಿ ತೋಟ ಶಾಲೆಯನ್ನು 9 ಮತ್ತು 10ನೇ ತರಗತಿವರೆಗೆ ಮೇಲ್ದರ್ಜೆಗೇರಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ಇದರಿಂದ ದೂರದ ಶಾಲೆಗಳಿಗೆ ತೆರಳಲು ಕಷ್ಟಪಡುವ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ತಮ್ಮದೇ ಬಡಾವಣೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಮತ್ತೊಂದೆಡೆ, ಬಡಾವಣೆಯಲ್ಲಿ ಶಾಶ್ವತ ಚರಂಡಿ ವ್ಯವಸ್ಥೆ ಇಲ್ಲದೆ, ಗಟಾರನ್ನು ರಸ್ತೆಯ ಒಂದು ಬದಿಯಲ್ಲಿ ಮಾತ್ರ ನಿರ್ಮಿಸಲಾಗಿದೆ. ಪರಿಣಾಮವಾಗಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿದು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದಾರೆ. ಹಾಗೆಯೇ ಬಡಾವಣೆಯ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಬಹುಪಾಲು ಭಾಗದಲ್ಲಿ ಕತ್ತಲು ಆವರಿಸಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸಲು ಸಾರ್ವಜನಿಕರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.


ಚುನಾವಣೆ ಬಂದಾಗ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡುವ ರಾಜಕೀಯ ನಾಯಕರು, ಚುನಾವಣೆ ಮುಗಿದ ಬಳಿಕ ಈ ಕಡೆ ತಲೆಹಾಕಿಯೂ ಮಲಗುವುದಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ಮೈಬೂಬ್ ಭಗವಾನ್ ಮತ್ತು ಇರ್ಷಾದ್ ಮುಕ್ಕೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ತಾಲೂಕಾಡಳಿತ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಶಿವಯೋಗಿ ನಗರದ ಈ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.


​ವರದಿ: ಮಹೇಶ್ ಶರ್ಮಾ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top