ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರ ಮಹಾನ್ ತತ್ತ್ವಸಿದ್ಧಾಂತಗಳು, ಸಾಧನೆಗಳು ಹಾಗೂ ಅವರು ಜಗತ್ತಿಗೆ ನೀಡಿದ ಅಮೂಲ್ಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ, ಪ್ರತಿವರ್ಷ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಆಚರಿಸಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕವಾಗಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸಂತಸ ವ್ಯಕ್ತವಾಗಿದೆ. 2026ರ ಅಕ್ಟೋಬರ್ 14ರಂದು ಹೊರಡಿಸಲಾದ ಈ ಸರ್ಕಾರಿ ಆದೇಶವನ್ನು ಪ್ರಸ್ತುತ ವಿಶ್ವಸಂಚಾರದಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.
ಶ್ರೀ ಪುತ್ತಿಗೆ ಶ್ರೀಗಳ ಅಭಿನಂದನಾ ಸಂದೇಶ:
ಕರ್ನಾಟಕ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಸರ್ಕಾರಕ್ಕೆ ತಮ್ಮ ವಿಶೇಷ ಅಭಿನಂದನೆಗಳು ಹಾಗೂ ಅನುಗ್ರಹ ಸಂದೇಶವನ್ನು ತಿಳಿಸಿದ್ದಾರೆ. ಶ್ರೀ ಮಧ್ವಾಚಾರ್ಯರ ತತ್ತ್ವಚಿಂತನೆಗಳು ಸಮೂಹ ಸಮಾಜಕ್ಕೆ ತಲುಪಲು ಸರ್ಕಾರದ ಈ ಕ್ರಮವು ಪೂರಕವಾಗಲಿದೆ ಎಂದು ಪೂಜ್ಯ ಶ್ರೀಗಳು ತಮ್ಮ ವಿಡಿಯೋ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದೈವಿಕ ಚಿಂತನೆ ಹಾಗೂ ಮಧ್ವ ಸಿದ್ಧಾಂತದ ಪ್ರಚಾರಕ್ಕೆ ಸರ್ಕಾರದ ಈ ನಿರ್ಧಾರವು ಮತ್ತಷ್ಟು ಬಲ ತಂದಿದ್ದು, ರಾಜ್ಯಾದ್ಯಂತ ಮಧ್ವ ಅನುಯಾಯಿಗಳು ಹಾಗೂ ಭಕ್ತಾದಿಗಳು ಸರ್ಕಾರದ ಈ ಕ್ರಮವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ.

