ನಂಗೂ ಒಬ್ಳು ಗರ್ಲ್-ಫ್ರೆಂಡ್ ಬೇಕು

Shreya Hegde
0



ಮೊನ್ನೆ ಗೆಳೆಯರೊಡನೆ ಊರು ಸುತ್ತಲು ಹೋದಾಗ, ನಮ್ಮೆದುರಿಗೆರಡು ಪ್ರೇಮ ಪಕ್ಷಿಗಳು ಹಾದುಹೋದವು,  ಹಾ....... ಹುಡುಗ ನಮ್ಮ ಹಾಸ್ಟೆಲಿನವನೇ, ಅವಳು ಬಹುಶಃ ಅವನ ಕ್ಲಾಸ್-ಮೇಟ್. ಅವರನ್ನು ನೋಡಿದೊಡನೆ ನಮ್ಮ ಕಣ್ಣುಗಳು ಅವಾಕ್ಕಾಗಿ ಅರಳಿದವು. ನೋಡ್ರೋ ಡಿಗ್ರಿ ಹುಡುಗನಿಗೆ ಗರ್ಲ್ ಫ್ರೆಂಡು ಎಂದು ಒಬ್ಬ ಈರ್ಷೆಯ ಮಾತಾಡಿದರೆ, ಇನ್ನೊಬ್ಬ ಹೇ... ಹಂಗೆ ಯಾಕ್ ಅನ್ಕೋತಿಯಾ ಅಣ್ಣ-ತಂಗಿನೂ ಇರಬೋದಪ್ಪಾ ಎಂದು ಇನ್ನೊಬ್ಬ ವ್ಯಂಗ್ಯ ಮಾಡಿದ, ಇಪ್ಪತ್ತೆರಡಾದ್ರು ಇನ್ನೂ ನಾವು ಸಿಂಗಲ್ ಆಗಿದ್ದೀವಿ, ಇವನಿನ್ನೂ ಡಿಗ್ರಿನೇ ದಾಟಿಲ್ಲ ಈಗಲೇ ಶುರು ಹಚ್ಕೊಂಡವ್ನೆ ಎಂದು ಮೂರನೇಯವ ಉದ್ಘಾರ ತೆಗೆದ. ಹೌದಲ್ವಾ? ಅನ್ನೋ ಯಕ್ಷಪ್ರಶ್ನೆ ನನ್ನ ಕಣ್ಮುಂದೆ ಹಾದುಹೋಯಿತು.


ರಾತ್ರಿ ದಿಂಬಿಗೆ ತಲೆ ಕೊಟ್ಟಾಗ ಮತ್ತದೇ ಪ್ರಶ್ನೆ! ನನಗೂ ಸಖ್ಯ ಬೆಳೆಸಲು ಒಬ್ಬಳು ಸಾಥಿ ಇದ್ದಿದ್ರೆ ಎಷ್ಟು ಚೆಂದ ಇರ್ತಿತ್ತು. ಅವರಿಬ್ಬರೂ ಪರಸ್ಪರ ಒಬ್ಬರ ಕೈಯನ್ನು ಒಬ್ಬರು ಹಿಡಿದು ಎಷ್ಟು ಚೆನ್ನಾಗಿ ರಸ್ತೆ ದಾಟುತ್ತಿದ್ದರು. ಸದಾ ಮೌನಕ್ಕೆ ಶರಣಾದ ಹುಡುಗ, ಆಕೆಯ ಜೊತೆ ಎಗ್ಗಿಲ್ಲದೆ ಹರಟುತ್ತಿದ್ದ, ರಸ್ತೆ ದಾಟುವ ಪ್ರಜ್ಞೆ ಅವಳಿಗಿತ್ತಾದರೂ, ಆಕೆ ಅವನ ತೋಳನ್ನ ಬಿಗಿ ಹಿಡಿದು ಭದ್ರತೆಯ ಭಾವ ಪಡೆದಿದ್ದಳು, ತನ್ನ ಕೊಡೆಯನ್ನ ತುಸು ಹೆಚ್ಚಾಗಿಯೇ ಅವಳಡೆಗೆ ವಾಲಿಸಿದ ಅವನು, ಶಾಖವೋ-ಶೋಕವೋ ನಿನ್ನೊಡನೆ ಸದಾ ನಾನಿದ್ದೇನೆ ಎಂಬ ಸದ್ದಿಲ್ಲದ ಸಂದೇಶ ಸಾರಿದ್ದ. ಅಲ್ಲಿ ಕಾಮ-ತೃಷೆಗೆ ಜಾಗವಿರಲಿಲ್ಲ, ನನಗಲ್ಲಿ ಕಂಡದ್ದು ನಿಷ್ಕಲ್ಮಶ ಪ್ರೇಮ. 


ಆಗಲೇ ನನಗನಿಸಿದ್ದು, ನಂಗೂ ಒಬ್ಳು ಗರ್ಲ್ ಫ್ರೆಂಡ್ ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅಂತಾ, ನಂಗ್ ನೀನಂದ್ರೆ ಇಷ್ಟ ಕಣೇ, ಐ ಥಿಂಕ್ ಐ ಲವ್ ಯು ಅನ್ನೋ ಆ ಮಾತನ್ನ ಕನ್ನಡಿ ಮುಂದೆ ನಿಂತು ಸಾವಿರ ಸಲ ರಿಹರ್ಸಲ್ ಮಾಡಿ, ಆಗಷ್ಟೇ ಕಿತ್ತ ಗುಲಾಬಿ ಹೂವಿನೊಡನೆ-ಚೆಂದದ ಕಿವಿಯೋಲೆಯೊಂದನ್ನು ಗಿಫ್ಟ್ ನೀಡಿ ಮನಸಿನ ಮಾತನ್ನು ಹೇಳಿಕೊಳ್ಳಬಹುದಿತ್ತು. ಅವಳು ಹೂಂ... ಅಂದಿದ್ರೆ ಗಾಡಿಯ ಹಿಂದಿನ ಸೀಟಿನಲ್ಲಿ ಕೂರಿಸಿ ಐಸ್ ಕ್ರೀಮ್ ಪಾರ್ಲರ್, ಶಾಪಿಂಗ್ ಮಾಲ್, ಸಿನಿಮಾ ಥೀಯೇಟರ್, ಸಂಜೀವಿನಿ ಪಾರ್ಕು ಅಂತೆಲ್ಲ ಊರು ಸುತ್ತಿಸಿ, ನಮಿಗ್ರಿವಿಲ್ಲದ ಎಷ್ಟೋ ವಿಷಯಗಳ ಬಗ್ಗೆ ಹರಟಿ, ನಾಲ್ಕು ಪ್ರೀತಿಯ ಮಾತನಾಡಿ, ರಾತ್ರಿ ಹೊತ್ತಿಗೆ ಮತ್ತೆ ಐ ಎಮ್ ಮಿಸ್ಸಿಂಗ್ ಯು ವೆರಿ ಮಚ್! ಒಂದು ವಾಕ್ ಹೋಗಿ ಬರೋಣವಾ? ಅಂತ ಕೇಳಬಹುದಿತ್ತು, ಅದೇ ನೆಪದಲ್ಲೇ ಇನ್ನೊಂದಿಷ್ಟು ಹೊತ್ತು ಅವಳ ಜೊತೆ ಕಳೆದಂಗೂ ಆಗ್ತಿತ್ತು. 


ಅಕಸ್ಮಾತ್ ಆಕೆ ಒಪ್ಪದಿದ್ದರೆ....? ಸಾಲು ಸಾಲು ಪದ್ಯಗಳ ಗೀಚಿ ಆಕೆಯ ಪಾದಕ್ಕೆ ಅರ್ಪಿಸಬಹುದಿತ್ತು, ಕಿಲ್ಲಾದ ದುರ್ಗಾ ದೇವಿಗೆ ಹರಕೆ ಹೇಳಬಹುದಿತ್ತು, ಶಾಲ್ಮಲೆ ತೀರದ ಸೋಮೇಶ್ವರನ ಎದುರು ನಿಂತು "ತಂದೆ ದಯವಿಟ್ಟು ಇವಳು ನಂಗೆ ಸಿಗಲಪ್ಪ" ಅಂತ ಮಂಡಿ ಊರಿ ಬೇಡಬಹುದಿತ್ತು, ಇಷ್ಟಾದರೂ ಸಿಗದೇ ಹೋದರೆ ಛೆ... ಅಷ್ಟು ಪ್ರೀತಿಸಿದ ಹುಡುಗಿ ಸಿಗಲಿಲ್ವಲ್ಲ ಅಂತ ಅಟ್ಲೀಸ್ಟ್ ಕೊರಗಬಹುದಿತ್ತು. ಆದರೆ ನಾನೆಂದು ಪ್ರೀತಿ ಮಾಡುವ ಸಾಹಸಕ್ಕೆ ಇಳಿಯಲಿಲ್ಲ. ಈಗೇನು ನಿಂಗೆ ಪ್ರೀತಿ ಕೊರತೆನಾ? ಅಂದ್ರೆ ನೋ, ಇಲ್ಲ,  ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಪ್ಪ-ಅಮ್ಮ-ಗೆಳೆಯರು ಎಲ್ಲರೂ ಇದ್ದಾರೆ ಆದ್ರೆ ಅವರ ತರ ಕೈಹಿಡಿದು ವಾಕ್ ಹೋಗೋಕೆ, ಜಗಳವಾಡಿ ರಾಜಿ ಮಾಡಿಕೊಳ್ಳೋಕೆ, ನಾ ಕಂಡ ಕನಸನ್ನ ಹಂಚಿಕೊಳ್ಳೋಕೆ, ಯಾರಿಗೂ ಹೇಳದ ದುಗುಡುಗಳನ್ನ ಅವಳ ಕಿವಿಯಲ್ಲಿ ಪಿಸುಗುಟ್ಟೋಕೆ, ನಂಗೆ ಬೇಜಾರಾದಾಗ ಅವಳ ಭುಜದ ಮೇಲೆ ತಲೆ ಇಡೋಕಾದ್ರು ಒಂದು ಸಾಥು ಬೇಕಿತ್ತಾ ಅಂತ ನನಗೆ ಅನ್ನಿಸೋ ಹೊತ್ತಿಗೆ ಗಂಟೆ ಎರಡಾಗಿತ್ತು.


- ಹರ್ಷ.ಮಹಾಂತೇಶ್ 

ಧಾರವಾಡ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top