ಹಾಸನ: ಅ. 11ರಂದು “ಮಾಣಿಕ್ಯ ಸಂಭ್ರಮ 2026” ಸಾಹಿತ್ಯ ಸಡಗರ

Shreya Hegde
0


ಹಾಸನ: ಕನ್ನಡ ಸಾಹಿತ್ಯ ಪರಂಪರೆ ಮತ್ತು ವಿವಿಧ ಪ್ರಕಾರಗಳನ್ನು ಗೌರವಿಸುವ ಹಾಗೂ ರಾಜ್ಯ-ಹೊರರಾಜ್ಯಗಳ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮಾಣಿಕ್ಯ ಪ್ರಕಾಶನ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಅಕ್ಟೋಬರ್ 11, 2026ರ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಬೆಳಗ್ಗೆ 10 ಗಂಟೆಗೆ 11ನೇ ವರ್ಷದ “ಮಾಣಿಕ್ಯ ಸಂಭ್ರಮ 2026” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಲಾಗಿದ್ದು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ. ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಆದಿಕವಿಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಬಿ.ಪಿ. ಕೃಷ್ಣೇಗೌಡ, ರವಿ ನಾಕಲಗೂಡು, ಕೆ.ಆರ್. ಲಕ್ಷ್ಮೀಕಾಂತ್, ಟಿ. ಸತೀಶ್ ಜವರೇಗೌಡ, ನಾಗರಾಜ್ ಹೆತ್ತೂರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.


2026ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದ 350ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದು, ಪರಿಶೀಲನೆಯ ನಂತರ 13 ದತ್ತಿಗಳಿಗೆ ಆಯ್ದ 28 ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದತ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಸಾಧಕರಿಗೆ ಮತ್ತು ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪ್ರಶಸ್ತಿ ವಿಜೇತರಿಗೆ ಈ ವೇಳೆ ಪುರಸ್ಕಾರ ನೀಡಲಾಗುವುದು.


ಮಧ್ಯಾಹ್ನದ ಅವಧಿಯಲ್ಲಿ ಜಯಂತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸಾಹಿತಿಗಳ 5 ನೂತನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಇದೇ ವೇಳೆ ಕರ್ನಾಟಕ ಸೇರಿದಂತೆ ಆಂಧ್ರ, ಚೆನ್ನೈ, ಮಹಾರಾಷ್ಟ್ರದಿಂದ ಆಗಮಿಸುವ 150ಕ್ಕೂ ಹೆಚ್ಚು ಕವಿಗಳು ಅಂತರರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top