ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ
ಬಸವನಗುಡಿ (ಬೆಂಗಳೂರು): "ದೊಡ್ಡ ಕನಸು ಕಾಣಿ! ನಿಮ್ಮ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ ನಿಮ್ಮನ್ನು ಯಾರೂ ನಿರುತ್ಸಾಹಗೊಳಿಸಲು ಬಿಡಬೇಡಿ" ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರಾದ ಎಚ್.ಪಿ. ಸುಧಾಮ ದಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ (ಅಕ್ಟೋಬರ್ 5) ನಡೆದ 2023-26ನೇ ಸಾಲಿನ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬದಲಾವಣೆಗೆ ಒಗ್ಗಿಕೊಳ್ಳಿ, ಶಾರ್ಟ್‌ಕಟ್ ಹಾದಿ ಬೇಡ:
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪದವಿ ಎಂಬುದು ಕಲಿಕೆಯ ಅಂತ್ಯವಲ್ಲ, ಅದು ಹೊಸ ವಿಷಯಗಳನ್ನು ಕಲಿಯುವ ಮತ್ತು ಭವಿಷ್ಯದ ಅವಕಾಶಗಳಿಗಾಗಿ ಹೊಸ ಬಾಗಿಲು ತೆರೆಯುವ ಹಂತ ಎಂದರು. ಇಂದಿನ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣದಿಂದಾಗಿ ವೃತ್ತಿಗಳು ಅತಿ ವೇಗವಾಗಿ ಬದಲಾಗುತ್ತಿದ್ದು, ನಾವೆಲ್ಲರೂ ಈ ಬದಲಾವಣೆಗೆ ಹೊಂದಿಕೊಳ್ಳಲೇಬೇಕು ಎಂದು ಸಲಹೆ ಮಾಡಿದರು. ಜೀವನದಲ್ಲಿ ಎಂದಿಗೂ ಶಾರ್ಟ್‌ಕಟ್ ಹಾದಿಯನ್ನು ಹುಡುಕದೆ, ಕಠಿಣ ಪರಿಶ್ರಮ, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕುಟುಂಬದ ಬಾಂಧವ್ಯ ಮತ್ತು ಸಾಮಾಜಿಕ ನ್ಯಾಯದ ಮಹತ್ವ:
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ. ರಮೇಶ್ ಬಿ. ಮಾತನಾಡಿ, ಪದವೀಧರರು ಸಮಾಜದ ವೈವಿಧ್ಯತೆಯನ್ನು ಗೌರವಿಸಬೇಕು ಮತ್ತು ಸಾಮಾಜಿಕ ನ್ಯಾಯದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶ್ರಮಿಸಬೇಕು ಎಂದರು. ಆಧುನಿಕ ಕಾಲದಲ್ಲಿ ಕುಟುಂಬಗಳ ಒಳಗೆ ಸೃಷ್ಟಿಯಾಗುತ್ತಿರುವ ಅಂತರಗಳ ನಡುವೆಯೂ ಪೋಷಕರು ಮಕ್ಕಳ ಸಾಧನೆಯನ್ನು ಪ್ರೋತ್ಸಾಹಿಸುತ್ತಿರುವುದು ಸಂತೋಷದ ವಿಷಯ. ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಬಲವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಮತ್ತು ಎಐ ಕೌಶಲ್ಯಗಳ ಅವಶ್ಯಕತೆ:
ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ನಿರೀಕ್ಷಿಸುತ್ತಿದ್ದು, ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕ್ರಾಂತಿಕಾರಿ ಮಹಿಳೆ ಸಾವಿತ್ರಿಬಾಯಿ ಫುಲೆ ಅವರಂತೆ ಪದವೀಧರರು ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೊಡುಗೆ ನೀಡುವ ಮೂಲಕ ದೇಶಕ್ಕೆ ನಿಜವಾದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಮಾರಂಭದಲ್ಲಿ 2023-26ನೇ ಸಾಲಿನಲ್ಲಿ ತೇರ್ಗಡೆಯಾದ 800ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಪದವಿ ಪ್ರಮಾಣ ಪತ್ರಗಳನ್ನು ಹಾಗೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಬಿ.ಎಂ.ಎಸ್.ಇ.ಟಿ.ಯ ಟ್ರಸ್ಟಿ ಶ್ರೀ ಅವಿರಾಮ್ ಶರ್ಮ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ.ಎಸ್.ಇ.ಟಿ.ಯ ನಿರ್ದೇಶಕರಾದ ವಿಂಗ್ ಕಮಾಂಡರ್ ಆರ್.ಎ. ರಾಘವನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘುಕುಮಾರ ಎನ್. ಅವರು ಉಪಸ್ಥಿತರಿದ್ದರು.

