ಮಾಣಿಲ: ಮಾಣಿಲ ಗ್ರಾಮ ಪಂಚಾಯತ್ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ಮಾಣಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ (ದೇಲಂತಮಜಲು) ಆಡಳಿತ ಸಮಿತಿ ಅಧ್ಯಕ್ಷ ಗಣೇಶ ಭಟ್ ದೇಲಂತಮಜಲು, ಮಾಣಿಲ ಬೀಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಯರಾಮ ಬಲ್ಲಾಳ, ಕೆಳಗಿನ ಮಾಣಿಲ ಜುಮ್ಮಾ ಮಸೀದಿಯ ಉಸ್ತಾದ್ ಉಮ್ಮರ್ ಹನೀಫ್, ನಿಟ್ಟೆ ಸಂಸ್ಥೆಯ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಪ್ರೊಫೆಸರ್ ಡಾ. ಮಾಕ್ವಿನ್ ಡಿಮೆಲ್ಲೊ, ಕನ್ಸಲ್ಟೆಂಟ್ ಡಾ. ಶೆರ್ಲಿ ಡಿ. ಅಲ್ಮೆಡಾ ಹಾಗೂ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡಾ. ಸಹನಾ ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ. ಶೆರ್ಲಿ ಡಿ. ಅಲ್ಮೆಡಾ ಅವರು ಸ್ಲೈಡ್ ಶೋ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ 'ಮರೆಗುಳಿತನ' ಕಾಯಿಲೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಎ.ಬಿ. ಶೆಟ್ಟಿ ದಂತ ವೈದ್ಯಕೀಯ ತಂಡದವರಿಂದ ಹಲ್ಲುಗಳ ತಪಾಸಣೆ ನಡೆಸಿ, ಹಲ್ಲು ಸ್ವಚ್ಛಗೊಳಿಸುವುದು ಮತ್ತು ಅಗತ್ಯವಿದ್ದವರಿಗೆ ಹಲ್ಲು ಕೀಳುವ ಚಿಕಿತ್ಸೆಯನ್ನು ನಡೆಸಿಕೊಡಲಾಯಿತು. ಹಾಗೆಯೇ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಸೈನ್ಸಸ್‌ನ ಪಬ್ಲಿಕ್ ಹೆಲ್ತ್ ವಿಭಾಗದ ವೈದ್ಯಕೀಯ ತಂಡದವರು ಶಿಬಿರದಲ್ಲಿ ಪಾಲ್ಗೊಂಡಿದ್ದವರ ದೇಹದ ಎತ್ತರ, ತೂಕದ ಅಳತೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.
ಮಾಯಾ ಮತ್ತು ತಂಡದವರು ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಕುಮಾರ ಕಮ್ಮಜೆ ಸ್ವಾಗತಿಸಿದರು. ನಿಟ್ಟೆ ಸಂಸ್ಥೆಯ ಡಾ. ಶರಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶರತ್ ಕೆ. ವಂದನಾರ್ಪಣೆಗೈದರು. ಗ್ರಾಮಾಂತರ ಭಾಗದ ನೂರಾರು ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
