* ಡಾ.ಕಜೆ 12 ನೆಯ ಬಾರಿ ಅಧ್ಯಕ್ಷರಾಗಿ ಪುನರಾಯ್ಕೆ; 83ನೆಯ ವರ್ಷದ ವಾರ್ಷಿಕ ಮಹಾಸಭೆ
* ಸಂಘಸಂಸ್ಥೆಗಳು ಸಕ್ರಿಯವಾಗಿದ್ದಾಗ ಸಮಾಜದ ಸಹಜ ಬೆಂಬಲ
* ಡಿಸೆಂಬರ್ 20ಕ್ಕೆ ಬೃಹತ್ ಹವ್ಯಕ ಮಹಿಳಾ ಸಮಾವೇಶ
ಬೆಂಗಳೂರು: ಸಂಘಸಂಸ್ಥೆಗಳು ಸಕ್ರಿಯವಾಗಿದ್ದಾಗ ಸಮಾಜದಿಂದ ಸಹಜವಾಗಿ ಬೆಂಬಲ ವ್ಯಕ್ತವಾಗುತ್ತದೆ ಎಂದು ಡಾ.ಗಿರಿಧರ ಕಜೆ ಹೇಳಿದರು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ (ಅ.2) ನಡೆದ ಶ್ರೀ ಅಖಿಲ ಹವ್ಯಕ ಮಹಾಸಭೆಯ 83ನೆಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಕಜೆಯವರು, ಕಾರ್ಯಕ್ರಮಗಳು ಹೆಚ್ಚಾಗಿ ನಡೆದಾಗ ಸಮಾಜವು ನಮ್ಮನ್ನು ಗುರುತಿಸುತ್ತದೆ ಹಾಗೂ ನಾವು ಹೆಚ್ಚು ಜನರನ್ನು ತಲುಪಲು ಸಾಧ್ಯ. ಹವ್ಯಕ ಮಹಾಸಭೆಯು ಈ ದಿಶೆಯಲ್ಲಿ ಪ್ರಾದೇಶಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜಾತಿಯನ್ನೂ ಮೀರಿ ಸಮಷ್ಟಿ ಸಮಾಜಕ್ಕೆ ಉಪಕಾರಿಯಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ಮಹಿಳೆಯರು ಸಕ್ರಿಯರಾದಾಗ ಮಾತ್ರ ಸಮಗ್ರ ಸಮಾಜದ ಜಾಗೃತಿ ಸಾಧ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಯನ್ನು ಬಲಗೊಳಿಸಲಾಗುತ್ತಿದ್ದು, ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿರುವ 83 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಡಿಸೆಂಬರ್ 20 ರಂದು ಬೃಹತ್ ಹವ್ಯಕ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಮುಂದಿನ ವರ್ಷ ಯುವಕರ ಸಂಘಟನೆಗೆ ಯೋಜಿಸಲಾಗಿದ್ದು, ದೇಶ - ಹೊರದೇಶಗಳ 84 ಪ್ರಾಂತ್ಯಗಳಲ್ಲಿ ಹವ್ಯಕ ಯುವ ವೇದಿಕೆ ಕಾರ್ಯಾರಂಭ ಮಾಡಲಿದೆ. ಮಹಿಳೆಯರು ಹಾಗೂ ಯುವಕರು ಸಂಘಟಿತರಾದಾಗ ಬಲಿಷ್ಠ ಸಂಘಟನೆ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೈವಾಹಿಕ ಸಮಸ್ಯೆಗಳು ಸೇರಿದಂತೆ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಘಟನೆಯೇ ಪರಿಹಾರವಾಗಿದ್ದು, ಸಂಘಟನೆ ಬಲಿಷ್ಠವಾದಾಗ ಸಮಾಜ ಸುಭಿಕ್ಷೆಯಿಂದ ಇರಲು ಸಾಧ್ಯ ಎಂದರು. ನಮ್ಮ ಮೂಲ ನೆಲೆಗಳು ನದಿ ತಿರುವು ಯೋಜನೆ, ಪರಿಸರ ಹಾನಿ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಕ್ಟೋಬರ್ 10 ರಂದು ಈ ಕುರಿತಾಗಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆನೀಡಿದರು. ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು - ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.
ಡಾ.ಕಜೆ 12ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆ
ಡಾ.ಗಿರಿಧರ ಕಜೆಯವರು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ 12 ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು.
ನೂತನ ಆಡಳಿತ ಮಂಡಳಿ:
ನಿರ್ದೇಶಕರ ಸಭೆಯಲ್ಲಿ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ಆಡಳಿತ ಮಂಡಳಿ
ಡಾ. ಗಿರಿಧರ ಕಜೆ- ಅಧ್ಯಕ್ಷರು
ಆರ್ ಎಂ ಹೆಗಡೆ ಬಾಳೆಸರ - ಉಪಾಧ್ಯಕ್ಷರು
ಶ್ರೀಧರ ಜೆ ಭಟ್ಟ ಕೆಕ್ಕಾರು - ಉಪಾಧ್ಯಕ್ಷರು
ಸಿಎ. ವೇಣುವಿಘ್ನೇಶ ಸಂಪ - ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಕುಮಾರ ಭಟ್ಟ ಮಲವಳ್ಳಿ - ಕಾರ್ಯದರ್ಶಿ
ಆದಿತ್ಯ ಹೆಗಡೆ ಕಲಗಾರು - ಕಾರ್ಯದರ್ಶಿ
ಕೃಷ್ಣಮೂರ್ತಿ ಎಸ್. ಭಟ್ ಯಲಹಂಕ- ಕೋಶಾಧಿಕಾರಿ
