ಡಾ. ಶಿವರಾಮ ಕಾರಂತ ಜನ್ಮದಿನಾಚರಣೆ: ಉಡುಪಿಯಲ್ಲಿ ವಿವಿಧ ಸ್ಪರ್ಧೆಗಳು

Shreya Hegde
0


ಉಡುಪಿ: ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.


ಕುಂದಾಪುರದ ಎಚ್.ಎಂ.ಎನ್ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ ಅವರು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಮಕ್ಕಳಲ್ಲಿ ಅಪಾರ ಪ್ರತಿಭೆಯಿದ್ದು, ಚಿತ್ರಕಲೆ, ಪ್ರಬಂಧ, ಭಾಷಣ ಹಾಗೂ ಇತರೆ ಸೃಜನಾತ್ಮಕ ಸ್ಪರ್ಧೆಗಳು ಆ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗಿದೆ ಎಂದರು. ಇಂತಹ ಸ್ಪರ್ಧೆಗಳು ಕೇವಲ ಬಹುಮಾನಕ್ಕಾಗಿ ಮಾತ್ರವಲ್ಲದೆ, ಮಕ್ಕಳ ಕಲ್ಪನಾಶಕ್ತಿ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿವೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಸ್ಪರ್ಧೆಗಳ ಮೂಲಕ ಕಾರಂತರ ಬದುಕು ಮತ್ತು ಬರಹಗಳ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸತ್ಪ್ರಯತ್ನ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಖ್ಯಾತ ರಂಗವಲ್ಲಿ ತಜ್ಞೆ ಡಾ. ಭಾರತಿ ಮರವಂತೆ, ಟ್ರಸ್ಟಿನ ಸದಸ್ಯರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಮತ್ತು ಸತೀಶ್ ಕೊಡವೂರು ಉಪಸ್ಥಿತರಿದ್ದರು. ಕಾರಂತ ಬಾಲ ಪ್ರಪಂಚ ಹಾಗೂ ವಿಜ್ಞಾನ ಪ್ರಪಂಚ ಕೃತಿಗಳ ಚಿತ್ರಗಳ ಆಧಾರದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಂಗೋಲಿ ಬಿಡಿಸುವ ಸ್ಪರ್ಧೆಗಳು ಉತ್ಸಾಹದಿಂದ ಜರುಗಿದವು.


ಸ್ಪರ್ಧೆಯ ವಿಜೇತರ ವಿವರಗಳು ಇಂತಿವೆ: ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕುಂದಾಪುರದ ಎಚ್.ಎಂ.ಎನ್ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆತ್ಮಿಕಾ ಪ್ರಥಮ ಸ್ಥಾನ ಪಡೆದಿದ್ದಾರೆ. ಉಡುಪಿಯ ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಪಾವನಿ ಜಿ. ರಾವ್ ದ್ವಿತೀಯ ಸ್ಥಾನ ಹಾಗೂ ಹೆಸಕುತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ಎ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಿರಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೇವಿ ದರ್ಶನ್, ಕುಂದಾಪುರದ ಎಚ್.ಎಂ.ಎನ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್‌ನ ವಿಹಾನಿ ಎ. ಶೆಟ್ಟಿಗಾರ್ ಹಾಗೂ ಶಿರಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಶ್ವಿತಾ ಆರ್. ಪೂಜಾರಿ ಅವರು ಸಮಾಧಾನಕರ ಬಹುಮಾನಗಳನ್ನು ಗಳಿಸಿದ್ದಾರೆ.


ಅದೇ ರೀತಿ, ಸ್ಥಳದಲ್ಲೇ ರಂಗವಲ್ಲಿ (ರಂಗೋಲಿ) ಬಿಡಿಸುವ ಸ್ಪರ್ಧೆಯಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಕನಿಷ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಂದಾಪುರದ ವಿ.ಕೆ.ಆರ್ ಸ್ಕೂಲ್‌ನ ಪವಿತ್ರಾ ಎ. ಶೇಟ್ ದ್ವಿತೀಯ ಸ್ಥಾನ ಮತ್ತು ಅದೇ ಶಾಲೆಯ ಅವನಿ ಎ. ಶೆಟ್ಟಿಗಾರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಡಾ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಅಕ್ಟೋಬರ್ 09 ರಂದು ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮಗಿರಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top