ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಬಳಕೆಗೆ ಒತ್ತು: ಕೃತಕ ಬುದ್ಧಿಮತ್ತೆಯ ಪಾತ್ರ ಕುರಿತು ವಿಶೇಷ ಉಪನ್ಯಾಸ

Shreya Hegde
0


ಮಂಗಳೂರು: "ಕನ್ನಡ ಭಾಷಿಕರ ಸಂಖ್ಯೆ ದೊಡ್ಡದಿದ್ದರೂ ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಬಳಕೆ ಸೀಮಿತವಾಗಿದೆ. ಸವಾಲುಗಳನ್ನು ಅವಕಾಶಗಳನ್ನಾಗಿಸಿಕೊಂಡು ಕೃತಕ ಬುದ್ಧಿಮತ್ತೆಯ (AI) ಜ್ಞಾನಶಾಖೆಯಲ್ಲಿ ಕನ್ನಡದ ಬಳಕೆಯನ್ನು ಮಾಡಬೇಕಾಗಿದೆ. ವಿದ್ಯಾರ್ಥಿಗಳು ಕುತೂಹಲದಿಂದ ಪ್ರಶ್ನಿಸಿ, ಅನುಕೂಲಕರವಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳುವ ಅಗತ್ಯವಿದೆ. ಅಪಾರವಾದ ಕನ್ನಡ ಜ್ಞಾನ ವಿಚಾರಗಳನ್ನು ಕೃತಕ ಬುದ್ಧಿಮತ್ತೆಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ" ಎಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭ ಬಿ. ಅಭಿಪ್ರಾಯಪಟ್ಟಿದ್ದಾರೆ.


ನಗರದ ಡಾ. ಪಿ. ದಯಾನಂದ ಪೈ - ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ, ಮಂಗಳೂರು ವಿ.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು ಸಂಸ್ಥೆ ಹಮ್ಮಿಕೊಂಡಿರುವ ‘ಗಿಳಿವಿಂಡು ಬಾರಿಸು ಕನ್ನಡ ಡಿಂಡಿಮವ.. ಮರಳಿ ಮನೆಗೆ.. ಅರಿವಿನ ಯಾನ..’ ಉಪನ್ಯಾಸ ಸರಣಿಯ 'ನುಡಿ 13' ರಡಿ ‘ಕನ್ನಡ ಭಾಷೆಯ ಬಳಕೆ ಮತ್ತು ಕೃತಕ ಬುದ್ಧಿಮತ್ತೆಯ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಿಳಿವಿಂಡಿನ ಅಧ್ಯಕ್ಷ ಡಾ. ಬಿ. ಶಿವರಾಮ ಶೆಟ್ಟಿ, "ಕ್ಷಿಪ್ರವಾಗಿ ಬದಲಾವಣೆಗೊಳ್ಳುತ್ತಿರುವ ತಂತ್ರಜ್ಞಾನದ ಅವಶ್ಯಕತೆಗಳಿಗೆ ಸ್ಪಂದಿಸಿ ಕನ್ನಡ ಭಾಷಾ ಜ್ಞಾನಧಾರೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಕನ್ನಡ ಜ್ಞಾನ ವಿಚಾರದ ಸೃಷ್ಟಿ ಹಾಗೂ ಅಳವಡಿಕೆಯ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ವಿಪುಲ ಅವಕಾಶಗಳಿವೆ" ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಜಯಕರ ಭಂಡಾರಿ ಮಾತನಾಡಿ, ಕೃತಕ ಬುದ್ಧಿಮತ್ತೆಯ ಜ್ಞಾನವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗಿದೆ ಎಂದು  ಕಿವಿಮಾತು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಪ್ರಿಯಾ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಉಷಾ ಸ್ವಾಗತಿಸಿದರು, ಗಿಳಿವಿಂಡು ಸದಸ್ಯ ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ವಿನೋದಾ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top