ನವದೆಹಲಿ: ದೇಶೀಯ ಕಂಟೇನರ್ ಉತ್ಪಾದನಾ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸಿ, ಭಾರತದ ಸಾಗರ ಸಾರಿಗೆ ಪೂರೈಕೆ ಸರಣಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ₹10,000 ಕೋಟಿ ವೆಚ್ಚದ ‘ಕಂಟೇನರ್ ಉತ್ಪಾದನಾ ಉತ್ತೇಜನ ಯೋಜನೆ’ಗೆ (ಸಿಎಮ್‌ಪಿಎಸ್) ಬುಧವಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಆಯವ್ಯಯ 2026-27ರಲ್ಲಿ ಘೋಷಿಸಲಾಗಿದ್ದ ಈ ಯೋಜನೆಯು 2027-28ರ ಹಣಕಾಸು ವರ್ಷದಿಂದ 2039-40ರವರೆಗೆ ಜಾರಿಯಲ್ಲಿರಲಿದೆ. ಆರಂಭಿಕ ಮೂರು ವರ್ಷಗಳನ್ನು ಕೈಗಾರಿಕಾ ಸೌಲಭ್ಯ ಹಾಗೂ ಮೂಲಸೌಕರ್ಯ ಸ್ಥಾಪನೆಗೆ ವಿನಿಯೋಗಿಸಲಾಗುತ್ತಿದ್ದು, ನಂತರದ ಹತ್ತು ವರ್ಷಗಳ ಕಾಲ ಉತ್ಪಾದನಾ ಬೆಂಬಲ ನೀಡುವುದು ಈ ಯೋಜನೆಯ ರೂಪುರೇಷೆಯಾಗಿದೆ.
ಉತ್ಪಾದನಾ ಸಾಮರ್ಥ್ಯ 7.5 ಲಕ್ಷ ಟಿಇಯುಗೆ ಏರಿಕೆ:
ಈ ಯೋಜನೆಯು ಹೊಸ ಕಂಟೇನರ್ ಕಾರ್ಖಾನೆಗಳ ಸ್ಥಾಪನೆ ಮಾತ್ರವಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ ಉತ್ಪಾದನಾ ಘಟಕಗಳ ವಿಸ್ತರಣೆಗೂ ಉತ್ತೇಜನ ನೀಡಲಿದೆ. ಪ್ರಸ್ತುತ ಭಾರತದಲ್ಲಿ ವಾರ್ಷಿಕ ಕೇವಲ 70,000 ಟಿಇಯು (ಟ್ವೆಂಟಿ-ಫೂಟ್ ಈಕ್ವಿವಲೆಂಟ್ ಯೂನಿಟ್ಸ್) ಕಂಟೇನರ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಈ ಯೋಜನೆಯ ಮೂಲಕ ಅದನ್ನು 7.5 ಲಕ್ಷ ಟಿಇಯುಗೆ ಏರಿಸುವ ಗುರಿ ಹೊಂದಲಾಗಿದೆ.
ಪ್ರಸ್ತುತ ಭಾರತದ ವಿದೇಶಿ ವ್ಯಾಪಾರವು ಕಂಟೇನರ್‌ಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿದ್ದರೂ, ಬಹುತೇಕ ಕಂಟೇನರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. 'ಮ್ಯಾರಿಟೈಮ್ ಅಮೃತ ಕಾಲ ವಿಷನ್' ಅಡಿಯಲ್ಲಿ ಭಾರತದ ಕಂಟೇನರ್ ಸಂಚಾರವು 2024ರ ವೇಳೆಯಿದ್ದ 2.4 ಕೋಟಿ ಟಿಇಯುನಿಂದ 2047ರ ವೇಳೆಗೆ 17.5 ಕೋಟಿ ಟಿಇಯುಗೆ ತಲುಪುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವುದು ದೇಶದ ಸಾರಿಗೆ ರಂಗಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಯೋಜನೆಯ ಪ್ರಮುಖ ಹಣಕಾಸು ಪ್ರೋತ್ಸಾಹಕಗಳು:
ಈ ಯೋಜನೆಯಡಿಯಲ್ಲಿ ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಯೋಜನೆಗಳಿಗೆ ತಲಾ ₹859 ಕೋಟಿ ಬಡ್ಡಿಸಬ್ಸಿಡಿ ನೆರವು ಸಿಗಲಿದೆ. ಅಂತಾರಾಷ್ಟ್ರೀಯ ಹಡಗು ರವಾನೆ ಮಾನದಂಡಗಳಿಗೆ ಅನುಗುಣವಾಗಿ ಕಂಟೇನರ್ ಉತ್ಪಾದಿಸಿ ಮಾರಾಟ ಮಾಡುವ ತಯಾರಕರಿಗೆ ₹8,891 ಕೋಟಿ ಕಾರ್ಯಾಚರಣೆ ವೆಚ್ಚದ ನೆರವು (ಒಪೆಕ್ಸ್) ದೊರೆಯಲಿದೆ. ಇದರಡಿಯಲ್ಲಿ ಪ್ರತಿ 20 ಅಡಿ ಕಂಟೇನರ್‌ಗೆ ₹49,500 ಹಾಗೂ 40 ಅಡಿ ಕಂಟೇನರ್‌ಗೆ ₹86,625 ಪ್ರೋತ್ಸಾಹ ಧನ ನೀಡಲಾಗುವುದು. ಜೊತೆಗೆ, ಕಂಟೇನರ್ ತಯಾರಿಕೆಯಲ್ಲಿ ಬಳಕೆಯಾಗುವ ದೇಶೀಯ ವಸ್ತುಗಳ ಪ್ರಮಾಣವನ್ನು ಶೇ. 70 ರಿಂದ ಶೇ. 90 ಕ್ಕೆ ಹೆಚ್ಚಿಸುವುದು ಕಡ್ಡಾಯವಾಗಿದೆ.
ಪರೀಕ್ಷಾ ಕೇಂದ್ರಗಳು ಮತ್ತು ಪ್ರಮಾಣೀಕರಣ ಸೌಲಭ್ಯಗಳ ಅಭಿವೃದ್ಧಿಗೆ ₹150 ಕೋಟಿ ಹಾಗೂ ಯೋಜನೆಯ ನಿರ್ವಹಣೆ ಮತ್ತು ಉಸ್ತುವಾರಿಗೆ ₹100 ಕೋಟಿ ಕಾಯ್ದಿರಿಸಲಾಗಿದೆ. ಪ್ರಮುಖ ಬಂದರುಗಳಲ್ಲಿ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇಕಡಾ 25 ರಷ್ಟು ರಿಯಾಯಿತಿ ದರದಲ್ಲಿ ಜಮೀನು ಗುತ್ತಿಗೆ ನೀಡುವ ಬೆಂಬಲವನ್ನೂ ಸರ್ಕಾರ ಘೋಷಿಸಿದೆ. ಸಾಗರ ರವಾನೆ ಹಾಗೂ ಬಂದರು ಸಚಿವಾಲಯದ ಕಾರ್ಯದರ್ಶಿ ಅವರ ನೇತೃತ್ವದ ಅಂತರ-ಸಚಿವಾಲಯ ಚುಕ್ಕಾಣಿ ಸಮಿತಿಯು ಈ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಅನುಮೋದಿಸಲಿದೆ.
50,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ:
ಈ ಯೋಜನೆಯಿಂದ ಸುಮಾರು 3,000 ನೇರ ಉದ್ಯೋಗಗಳು ಹಾಗೂ ಉಕ್ಕು, ಬಿಡಿಭಾಗ ಮತ್ತು ಸಾರಿಗೆ ರಂಗದಲ್ಲಿ 50,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಮೂಲೆಯ ಕ್ಯಾಸ್ಟಿಂಗ್‌ಗಳು, ಪ್ರತ್ಯೇಕ ದರ್ಜೆಯ ಉಕ್ಕು, ಮರದ ಚೌಕಟ್ಟುಗಳು ಹಾಗೂ ಬಣ್ಣಗಳಂತಹ ಪೂರಕ ಉದ್ಯಮಗಳಿಗೂ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. 2039-40ರ ಹಣಕಾಸು ವರ್ಷದ ವೇಳೆಗೆ ಈ ಯೋಜನೆಯು ಸುಮಾರು ₹75,000 ಕೋಟಿ ಮೌಲ್ಯದ ಆರ್ಥಿಕ ಉತ್ಪಾದನೆಯನ್ನು ತರಲಿದ್ದು, ಸರ್ಕಾರ ನೀಡುತ್ತಿರುವ ನೆರವಿಗಿಂತ ಏಳು ಪಟ್ಟು ಹೆಚ್ಚು ಪ್ರಯೋಜನ ಒದಗಿಸಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಆಶಯಕ್ಕೆ ಈ ಯೋಜನೆ ದೊಡ್ಡ ಬಲ ತಂದಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಕಂಟೇನರ್‌ಗಳು ವ್ಯಾಪಾರ ಕ್ಷೇತ್ರದ ಬೆನ್ನೆಲುಬಾಗಿದ್ದು, ದೇಶದಲ್ಲೇ ಅವುಗಳನ್ನು ತಯಾರಿಸುವುದರಿಂದ ಭಾರತೀಯ ಬಂದರುಗಳು, ರಫ್ತುದಾರರು ಮತ್ತು ಹಡಗು ಸಂಸ್ಥೆಗಳಿಗೆ ಮಹತ್ವದ ಬೆಂಬಲ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

