ಬಂಟ್ವಾಳ: ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಒದಗಿಸುವುದರಿಂದ ಅವರ ವೃತ್ತಿ ಕೌಶಲ ವೃದ್ಧಿಯಾಗುವುದರ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ಶಾಸಕರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ನ ಕೈಗಾರಿಕಾ ವಿಭಾಗ, ಯೆಯ್ಯಾಡಿ, ಮಂಗಳೂರು ಇದರ ವತಿಯಿಂದ 2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ವಿತರಣೆ ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಗಾರೆ ಕೆಲಸ, ಬಡಗಿ, ಕಮ್ಮಾರಿಕೆ, ವಿದ್ಯುತ್ ಕೆಲಸ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂತಹ ವೃತ್ತಿಗಳನ್ನು ಅವಲಂಬಿಸಿರುವವರಿಗೆ ಅಗತ್ಯ ಉಪಕರಣಗಳನ್ನು ಒದಗಿಸುವುದು ಅವರ ಕೆಲಸದ ಗುಣಮಟ್ಟ ಹೆಚ್ಚಿಸಲು ಮತ್ತು ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ. ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸರಕಾರದ ಇಂತಹ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಮೂಲಕ ಮನೆಯಲ್ಲಿಯೇ ಉದ್ಯೋಗ ನಡೆಸಿ ಕುಟುಂಬದ ಆದಾಯಕ್ಕೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದಂತಾಗಿದೆ. ಯುವಜನರು ಹಾಗೂ ಮಹಿಳೆಯರು ಕೌಶಲಾಧಾರಿತ ವೃತ್ತಿಗಳಿಗೆ ಆದ್ಯತೆ ನೀಡಿ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಬಂಟ್ವಾಳ ತಾಲೂಕಿನ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಯೋಜನೆಯಡಿ ಉಚಿತ ಉಪಕರಣ ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಗ್ರಾಮೀಣ ಕೈಗಾರಿಕಾ ಇಲಾಖೆ ಮಂಗಳೂರು ಇದರ ಉಪನಿರ್ದೇಶಕ ಮಂಜುನಾಥ್ ಹೆಗಡೆ, ಹಾಗೂ ಸಿಬ್ಬಂದಿಗಳು. ಕೈಗಾರಿಕಾ ವಿಭಾಗದ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. 60 ಗಾರೆ, 28 ಬಡಗಿ, 85 ಹೊಲಿಗೆ, 34 ಇಲೆಕ್ಟ್ರಿಕಲ್, 15 ಕಮ್ಮಾರಿಕೆ, 40 ಅಕ್ಕಸಾಲಿಗ ಹೀಗೆ ಒಟ್ಟು 262 ವಿವಿಧ ಸಲಕರಣೆಗಳನ್ನು ವಿತರಸಿಲಾಯಿತು.

