ಬೊಗಸೆಯಲ್ಲಿ ಹಿಡಿದ ಬನವಾಸಿ:ಪಂಪನ ನೆಲದಲ್ಲಿ ಕಲ್ಲುಗಳು ಹೇಳಿದ ಕನ್ನಡದ ಸಾವಿರ ನೆನಪುಗಳು

Shreya Hegde
0

 ಲೇಖನ – ಉಮೇಶ ಮುಂಡಳ್ಳಿ, ಭಟ್ಕಳ


ಬನವಾಸಿಯ ಬಗ್ಗೆ ಹೇಳುವುದು ಎಂದರೆ ಸಮುದ್ರದ ವಿಸ್ತಾರವನ್ನು ಅಳೆಯಲು ಹೊರಟಂತೆ...

ಅದರ ಆಳವನ್ನು ಅರಿಯಲು ಪ್ರಯತ್ನಿಸಿದಂತೆ...

ಆಕಾಶದ ನಕ್ಷತ್ರಗಳನ್ನು ಎಣಿಸಲು ಕುಳಿತಂತೆ...


ಬನವಾಸಿ ಎಂಬ ಹೆಸರಿನೊಳಗೆ ಎಷ್ಟು ಇತಿಹಾಸವಿದೆ? ಎಷ್ಟು ಕಥೆಗಳಿವೆ? ಎಷ್ಟು ರಾಜವಂಶಗಳ ನೆನಪುಗಳಿವೆ? ಎಷ್ಟು ಕವಿಗಳ ಕನಸುಗಳಿವೆ? ಎಷ್ಟು ಶಿಲ್ಪಿಗಳ ಬೆವರಿದೆ? ಎಷ್ಟು ಭಕ್ತರ ನಂಬಿಕೆಯಿದೆ?ಇವೆಲ್ಲವನ್ನೂ ಒಂದೇ ಬರಹದಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಆದರೂ ಒಮ್ಮೊಮ್ಮೆ ಹುಚ್ಚು ಕುತೂಹಲವೊಂದು ಮನಸ್ಸನ್ನು ಕಾಡುತ್ತದೆ. ನನಗೆ ದಕ್ಕಿದ ಮಾಹಿತಿಯ ಮಿತಿಯಲ್ಲಿ, ನನ್ನ ದೃಷ್ಟಿಕೋನದಲ್ಲಿ, ನಾನು ಕಂಡು–ಕೇಳಿದ ಅನುಭವದ ನೆಲೆಯಲ್ಲಿ ಹೇಳಬೇಕಾದದ್ದನ್ನು ಹೇಳಲೇಬೇಕು ಎಂಬ ಅಗಮ್ಯ ಹಂಬಲ ಹುಟ್ಟುತ್ತದೆ. ಹಾಗಾಗಿ ಸಮುದ್ರದಿಂದ ಬೊಗಸೆಯಲ್ಲಿ ನೀರು ಹಿಡಿದು ತುಂಬಲು ಪ್ರಯತ್ನಿಸುವವನಂತೆ, ಬನವಾಸಿಯೆಂಬ ಇತಿಹಾಸದ ಮಹಾಸಾಗರದಿಂದ ಆಗಾಗ ಒಂದಿಷ್ಟು ನೆನಪುಗಳನ್ನು ಬೊಗಸೆಯಲ್ಲಿ ಹಿಡಿದು ನನ್ನ ಓದುಗರ ಮುಂದೆ ಇಡುತ್ತಲೇ ಇರುತ್ತೇನೆ. ಇದು ಕೂಡ ಅಂತಹದ್ದೇ ಒಂದು ಪ್ರಯತ್ನ. ಮಕ್ಕಳಾದರೂ ಓದಿ ಬನವಾಸಿ ಎಂದರೇನು ಎಂಬುದನ್ನು ಒಂದಿಷ್ಟಾದರೂ ತಿಳಿದುಕೊಳ್ಳಲಿ ಹಿರಿಯರಾದರೂ ಓದಿ ತಮಗೆ ಗೊತ್ತಿರುವ ಬನವಾಸಿಯ ನೆನಪುಗಳಿಗೆ ಮತ್ತಷ್ಟು ಬಣ್ಣ ಸೇರಿಸಿಕೊಳ್ಳಲಿ...


ಎಂಬುದು ಈ ಬರಹದ ಹಿಂದಿರುವ ಸಣ್ಣ ಆಸೆ. ಒಂದು ಪ್ರಶಸ್ತಿ ಒಂದು ದಿನ  ಒಂದು ಅಪರೂಪದ ಬನವಾಸಿ ಅನುಭವ ಕೆಲವೊಮ್ಮೆ ಜೀವನದಲ್ಲಿ ದೊರೆಯುವ ಒಂದು ಗೌರವ, ನಾವು ನಿರೀಕ್ಷಿಸದ ಮತ್ತೊಂದು ಅನುಭವದ ಬಾಗಿಲು ತೆರೆಯುತ್ತದೆ. ಕಳೆದ ವರ್ಷ ನನಗೂ ಅಂತಹ ಒಂದು ಸಂದರ್ಭ ಒದಗಿ ಬಂತು. ನನ್ನ ಔದ್ಯೋಗಿಕ ಬದುಕಿನ ಬೆಳವಣಿಗೆಯಲ್ಲಿ ಮಾರ್ಗದರ್ಶನ ನೀಡಿದ ನನ್ನ ಗುರುಗಳಾದ ಡಾ. ಅಚ್ಚುತ್ ರಾವ್ ಸರ್ ಅವರ ಬಳಗದವರೊಂದಿಗೆ ಕದಂಬ ಕನ್ನಡ ಸೇನೆ ಆಯೋಜಿಸಿದ್ದ ‘ಕದಂಬರ ನಾಡಿನಲ್ಲಿ ಕನ್ನಡ ವೈಭವ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅದೇ ಸಂದರ್ಭದಲ್ಲಿ ನನ್ನನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ‘ಕದಂಬ ಕನ್ನಡ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಎನ್ನುವುದು ಒಂದು ಕ್ಷಣದ ಗೌರವ. ಆದರೆ ಆ ಗೌರವದ ನೆಪದಲ್ಲಿ ದೊರೆತ ಅನುಭವ ಮಾತ್ರ ಜೀವನಪೂರ್ತಿ ಉಳಿಯುವ ಸಂಪತ್ತು. ಇಡೀ ದಿನ ಬನವಾಸಿಯಲ್ಲಿದ್ದು, ಗುರುಗಳೊಂದಿಗೆ ಅಲ್ಲಿನ ವೈಭವವನ್ನು ಕಣ್ಣಾರೆ ಕಂಡು, ದೇವಾಲಯದ ಅರ್ಚಕರಿಂದ ಹಲವು ಕುತೂಹಲಕಾರಿ ವಿಷಯಗಳನ್ನು ಕೇಳಿ, ಕದಂಬರ ಇತಿಹಾಸದ ಹೆಜ್ಜೆ ಗುರುತುಗಳನ್ನು ಹುಡುಕಿ, ಪಂಪನ ನೆನಪುಗಳ ನಡುವೆ ನಿಂತು ಅನುಭವಿಸಿದ ಆ ದಿನ ನನ್ನ ಪಾಲಿಗೆ ಒಂದು ಮರೆಯಲಾಗದ ಇತಿಹಾಸದ ಪಯಣ.


ಅಲ್ಲಿ ಕಂಡದ್ದು ಕೇವಲ ಕಲ್ಲುಗಳಲ್ಲ. ಕೇಳಿಸಿಕೊಂಡದ್ದು ಕೇವಲ ಕಥೆಗಳಲ್ಲ. ಅನುಭವಿಸಿದ್ದು ಕನ್ನಡದ ಒಂದು ಜೀವಂತ ಅಧ್ಯಾಯ. ಬನವಾಸಿ ಒಂದು ಊರಲ್ಲ, ಕಾಲದ ಬಾಗಿಲು ಉತ್ತರ ಕನ್ನಡದ ಹಸಿರು ಕಾಡು, ನದಿ, ಮಳೆ ಮತ್ತು ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಬನವಾಸಿ, ಕೇವಲ ಒಂದು ಊರಲ್ಲ. ಅದು ಕರ್ನಾಟಕದ ಪ್ರಾಚೀನ ಇತಿಹಾಸದ ಒಂದು ಮಹತ್ವದ ಪುಟ. ಕದಂಬರ ಪ್ರಾಚೀನ ರಾಜಧಾನಿಯಾಗಿದ್ದ ಈ ನೆಲದಲ್ಲಿ ಕನ್ನಡದ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಅನೇಕ ಹೆಜ್ಜೆ ಗುರುತುಗಳನ್ನು ಕಾಣಬಹುದು. ರಾಜರು ಬಂದರು, ರಾಜ್ಯಗಳು ಬೆಳೆದವು, ಸಾಮ್ರಾಜ್ಯಗಳು ಬದಲಾದವು, ಕಾಲದ ಚಕ್ರ ತಿರುಗಿತು ಆದರೆ ಬನವಾಸಿ ಉಳಿಯಿತು. ತನ್ನ ಎದೆಯೊಳಗೆ ಶತಮಾನಗಳ ನೆನಪುಗಳನ್ನು ಇಟ್ಟುಕೊಂಡೇ ಉಳಿಯಿತು.ಅದಕ್ಕಾಗಿಯೇ ಬನವಾಸಿಗೆ ಕಾಲಿಟ್ಟಾಗ, ನಾವು ಒಂದು ಊರಿಗೆ ಬಂದಿದ್ದೇವೆ ಎಂಬ ಭಾವನೆಗಿಂತ, ‘ನಾವು ನಮ್ಮ ಹಿಂದಿನ ಶತಮಾನಗಳೊಳಗೆ ಕಾಲಿಟ್ಟಿದ್ದೇವೆ’ ಎಂಬ ಅನುಭವವಾಗುತ್ತದೆ.


ಮಧುಕೇಶ್ವರ — ಜೇನುಬಣ್ಣದ ಈಶ್ವರನ ಸನ್ನಿಧಿ

ಬನವಾಸಿಯ ಹೃದಯದಲ್ಲಿ ವಿರಾಜಮಾನವಾಗಿರುವ ಶ್ರೀ ಮಧುಕೇಶ್ವರ ದೇವಾಲಯ ಈ ನೆಲದ ಅತ್ಯಂತ ಪ್ರಮುಖ ಗುರುತು. ಮಧುಕೇಶ್ವರ ಎಂಬ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಸ್ಥಳೀಯ ವಿವರಣೆ ಇದೆ. ಅರ್ಚಕರು ಹೇಳಿದ ಪ್ರಕಾರ, ಗರ್ಭಗುಡಿಯಲ್ಲಿರುವ ಈಶ್ವರನ ಮೂರ್ತಿ ಜೇನು ಅಥವಾ ಮಧುವಿನ ಬಣ್ಣವನ್ನು ಹೋಲುವ ತುಪ್ಪದ ಬಣ್ಣದಲ್ಲಿ ಕಾಣುವುದರಿಂದ ‘ಮಧುಕೇಶ್ವರ’ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇದು ಕೇಳಿದಾಗ ಒಂದು ಕ್ಷಣ ಮನಸ್ಸು ಆ ಬಣ್ಣವನ್ನು ಕಲ್ಪಿಸಿಕೊಳ್ಳುತ್ತದೆ. ಜೇನಿನ ಬಣ್ಣ, ಮಧುವಿನ ಬಣ್ಣ ಆ ಬಣ್ಣದೊಳಗೆ ಶಿವನ ಸಾನ್ನಿಧ್ಯ ಹೆಸರಿನಲ್ಲಿಯೇ ಪ್ರಕೃತಿ ಮತ್ತು ಭಕ್ತಿಯ ಒಂದು ಅಪೂರ್ವ ಸಂಗಮ. ಆದರೆ ಮಧುಕೇಶ್ವರ ನನಗೆ ಕೇವಲ ಒಂದು ದೇವಾಲಯವಲ್ಲ ಅದು ಕಾಲವನ್ನು ಮೀರಿ ನಿಂತಿರುವ ಒಂದು ಅನುಭವ. ಮೂರು ರಾಜಮನೆತನಗಳ ಕೈಚಳಕ?


ದೇವಾಲಯದ ಬಗ್ಗೆ ಅರ್ಚಕರಿಂದ ಕೇಳಿದ ಮತ್ತೊಂದು ಕುತೂಹಲಕಾರಿ ಸಂಗತಿ ನನ್ನ ಗಮನ ಸೆಳೆಯಿತು. ಅವರ ವಿವರಣೆಯ ಪ್ರಕಾರ, ದೇವಾಲಯದ ನಿರ್ಮಾಣವು ವಿವಿಧ ಕಾಲಘಟ್ಟಗಳಲ್ಲಿ ಶಾತವಾಹನರು, ಕದಂಬರು ಮತ್ತು ಬಾದಾಮಿ ಚಾಲುಕ್ಯರು ಎಂಬ ಮೂರು ರಾಜಮನೆತನಗಳ ಕಾಲದ ನಿರ್ಮಾಣ ಪರಂಪರೆಯೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅರ್ಚಕರು ತಿಳಿಸಿದ ಸ್ಥಳೀಯ ಮಾಹಿತಿಯ ಪ್ರಕಾರ, ಸುಮಾರು 1800 ವರ್ಷಗಳ ಹಿಂದೆ ಮೊದಲ ಭಾಗವನ್ನು ಶಾತವಾಹನರ ಕಾಲದಲ್ಲಿ, ನಂತರ ಕ್ರಿ.ಶ. 3ರಿಂದ 10ನೇ ಶತಮಾನದ ಅವಧಿಯಲ್ಲಿ ಕದಂಬರ ಕಾಲದಲ್ಲಿ ಎರಡನೇ ಭಾಗವನ್ನು, ನಂತರ 10ರಿಂದ 11ನೇ ಶತಮಾನದ ಅವಧಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಉಳಿದ ಭಾಗಗಳನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.


ಈ ಮಾಹಿತಿಯನ್ನು ಕೇಳುತ್ತಾ ನಿಂತಾಗ ನನಗೆ ಅನ್ನಿಸಿದ್ದು— ಒಂದು ದೇವಾಲಯವನ್ನು ಕಟ್ಟಲು ಕಲ್ಲು ಬೇಕು; ಆದರೆ ಒಂದು ಇತಿಹಾಸವನ್ನು ಕಟ್ಟಲು ಶತಮಾನಗಳು ಬೇಕು. ಇಂದು ನಾವು ಕಾಣುತ್ತಿರುವ ಮಧುಕೇಶ್ವರ ದೇವಾಲಯದ ಕಲ್ಲುಗಳ ಹಿಂದೆ ಇಂತಹ ದೀರ್ಘ ಕಾಲದ ನಿರ್ಮಾಣ ಪರಂಪರೆಯ ನೆನಪುಗಳಿವೆ ಎನ್ನುವುದು ನಿಜಕ್ಕೂ ಕುತೂಹಲ ಮೂಡಿಸುವ ಸಂಗತಿ. ಈ ರೀತಿಯ ಸ್ಥಳೀಯ ಮೌಖಿಕ ಮಾಹಿತಿಗಳನ್ನು ಇತಿಹಾಸದ ಶಾಸನ, ಪುರಾತತ್ವ ಮತ್ತು ಅಧಿಕೃತ ಅಧ್ಯಯನಗಳ ಬೆಳಕಿನಲ್ಲಿಯೂ ಪರಿಶೀಲಿಸುತ್ತಾ ಮುಂದಿನ ಪೀಳಿಗೆಗೆ ದಾಖಲಿಸುವ ಅಗತ್ಯವಿದೆ ಎಂಬ ಭಾವನೆಯೂ ಅಂದು ನನ್ನೊಳಗೆ ಮೂಡಿತು. 


ಈಶ್ವರನಿಂದ ನಂದಿಯವರೆಗೆ, ಐದು ಮಂಟಪಗಳ ಪಯಣ ಮಧುಕೇಶ್ವರ ದೇವಾಲಯದ ವಾಸ್ತು ವೈಭವವನ್ನು ಗಮನಿಸುತ್ತಾ ಹೋದರೆ ಅದರ ವಿನ್ಯಾಸವೇ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅರ್ಚಕರು ವಿವರಿಸಿದಂತೆ ದೇವಾಲಯದ ವಾಸ್ತು ವಿನ್ಯಾಸದಲ್ಲಿ ಗರ್ಭಮಂಟಪ, ಸಭಾಮಂಟಪ, ಸಂಕಲ್ಪಮಂಟಪ, ಲಲಿತಮಂಟಪ ಮತ್ತು ನಂದಿಮಂಟಪ ಸೇರಿದಂತೆ ಐದು ಮಂಟಪಗಳ ಸರಣಿ ಕಾಣುತ್ತದೆ. ಗರ್ಭಗುಡಿಯ ಈಶ್ವರನಿಂದ ಹೊರಗೆ ನಿಂತಿರುವ ನಂದಿಯವರೆಗೆ ಸಾಗುವ ಈ ವಾಸ್ತು ವಿನ್ಯಾಸವನ್ನು ಗಮನಿಸುತ್ತಾ ಹೋದರೆ, ಅದು ಕೇವಲ ಕಟ್ಟಡದ ಭಾಗಗಳ ಸರಣಿಯಂತೆ ಕಾಣುವುದಿಲ್ಲ. ಭಕ್ತಿಯ ಒಂದು ಕ್ರಮಬದ್ಧ ಪಯಣದಂತೆ ಕಾಣುತ್ತದೆ.


ಒಳಗೆ ಈಶ್ವರ, ಹೊರಗೆ ನಂದಿ, ಅವರ ನಡುವೆ ಮಂಟಪಗಳ ಸರಣಿ ಮತ್ತು ಅವುಗಳ ನಡುವೆ ಶತಮಾನಗಳ ಕಲೆ. ಏಳುವರೆ ಅಡಿ ಬಸವ ಕಣ್ಣುಗಳಲ್ಲೇ ಒಂದು ಕಥೆ! ದೇವಾಲಯದ ಆವರಣದಲ್ಲಿರುವ ಏಳುವರೆ ಅಡಿ ಎತ್ತರದ ಕಲ್ಲಿನ ಬಸವಣ್ಣ ನನ್ನನ್ನು ಬಹಳ ಹೊತ್ತು ನಿಲ್ಲಿಸಿದ ದೃಶ್ಯ. ಅಷ್ಟು ದೊಡ್ಡದಾದ ಬಸವಣ್ಣನನ್ನು ನೋಡುವುದೇ ಒಂದು ಅನುಭವ. ಆದರೆ ಅದಕ್ಕಿಂತ ಕುತೂಹಲ ಮೂಡಿಸುವ ಸಂಗತಿ ಅದರ ಮುಖದ ವಿನ್ಯಾಸ. ಸ್ವಲ್ಪ ಓರೆಯಾಗಿ ಕುಳಿತಿರುವ ಬಸವಣ್ಣ ಅವನ ಎಡಗಣ್ಣು ಪಾರ್ವತಿಯನ್ನು ನೋಡುವಂತೆ, ಬಲಗಣ್ಣು ಮಧುಕೇಶ್ವರನನ್ನು ನೋಡುವಂತೆ ಕಾಣುತ್ತದೆ ಎಂದು ಅಲ್ಲಿನವರು ವಿವರಿಸುತ್ತಾರೆ. ಒಂದು ಕ್ಷಣ ಬಸವಣ್ಣನ ಮುಖವನ್ನು ನೋಡುತ್ತಾ ನಿಂತರೆ ಕಲ್ಲಿನ ಮೂರ್ತಿಯ ಕಣ್ಣುಗಳಲ್ಲೂ ಭಾವವಿದೆಯೇನೋ ಅನ್ನಿಸುತ್ತದೆ. ಎಡಗಣ್ಣು ಅಮ್ಮನ ಕಡೆ ಬಲಗಣ್ಣು ಈಶ್ವರನ ಕಡೆ ನಂದಿಯ ದೃಷ್ಟಿಯಲ್ಲಿಯೇ ಶಿವ–ಶಕ್ತಿಯ ಸಂಬಂಧವನ್ನು ಶಿಲ್ಪಿ ಹಿಡಿದಿಟ್ಟಿದ್ದಾನೆಯೇ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ. ಶಿಲ್ಪಕಲೆ ಎಂದರೆ ಕೇವಲ ಕಲ್ಲಿಗೆ ರೂಪ ಕೊಡುವುದಲ್ಲ. ಕಲ್ಲಿಗೂ ದೃಷ್ಟಿ ಕೊಡುವುದು. ಕಲ್ಲಿಗೂ ಭಾವನೆ ಕೊಡುವುದು. ಅದಕ್ಕಾಗಿಯೇ ಇಂತಹ ಶಿಲ್ಪಗಳನ್ನು ಪುಸ್ತಕದ ಚಿತ್ರದಲ್ಲಿ ನೋಡುವುದಕ್ಕಿಂತ, ಒಮ್ಮೆ ಕಣ್ಣಾರೆ ಹೋಗಿ ನೋಡಬೇಕು. ನೋಡಿಯೇ ಅನುಭವಿಸಬೇಕು. ಕಂಬಗಳು ಕಲ್ಲಿನೊಳಗೆ ಸಿಕ್ಕಿಹಾಕಿಕೊಂಡಿರುವ ವಿಸ್ಮಯ ಮಧುಕೇಶ್ವರ ದೇವಾಲಯದ ಕಂಬಗಳು ಮತ್ತೊಂದು ಅದ್ಭುತ ಲೋಕ.


ಪ್ರತಿಯೊಂದು ಕಂಬವನ್ನು ನೋಡಿದಾಗಲೂ ಅದರ ವಿನ್ಯಾಸ, ಕೆತ್ತನೆ, ಅಳತೆ, ಸಮತೋಲನ—ಎಲ್ಲವೂ ನಮ್ಮನ್ನು ನಿಲ್ಲಿಸಿ ನೋಡಿಸುವಂತಿವೆ. ಒಂದು ಕಂಬವನ್ನು ನೋಡುತ್ತೇವೆ. ಅದರ ಮೇಲೆ ಒಂದು ಕೆತ್ತನೆ, ಆ ಕೆತ್ತನೆಯೊಳಗೆ ಮತ್ತೊಂದು ವಿನ್ಯಾಸ, ಅದನ್ನು ಗಮನಿಸುತ್ತಿದ್ದಂತೆ ಮತ್ತೊಂದು ವಿಸ್ಮಯ, ಅಲ್ಲಿನ ಕಂಬಗಳನ್ನು ಎಷ್ಟು ವಿವರಿಸಿದರೂ ಸಾಲದು, ಅವುಗಳನ್ನು ನೋಡಬೇಕು, ಹತ್ತಿರ ಹೋಗಬೇಕು, ಕಣ್ಣು ತುಂಬಿಕೊಳ್ಳಬೇಕು, ಆ ಕಲಾವಿದನ ಕೈಯನ್ನು ಮನಸ್ಸಿನಲ್ಲಿ ಊಹಿಸಬೇಕು. ಇಂದಿನ ಆಧುನಿಕ ಉಪಕರಣಗಳಿಲ್ಲದ ಕಾಲದಲ್ಲಿ, ಕಲ್ಲನ್ನು ಹೀಗೆ ಜೀವಂತಗೊಳಿಸಿದ ಆ ಕೈಗಳಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಸಲ್ಲಿಸಬೇಕು. ಪಂಪನ ಬನವಾಸಿ ಕವಿಯ ಕನಸಿನ ನೆಲ ಬನವಾಸಿಯ ಮಾತು ಬಂದಾಗ ನನ್ನ ಮನಸ್ಸು ಸಹಜವಾಗಿ ಒಬ್ಬ ಕವಿಯ ಕಡೆಗೆ ಹೋಗುತ್ತದೆ. ಆದಿಕವಿ ಪಂಪ ಬನವಾಸಿ ಮತ್ತು ಪಂಪನ ನಡುವಿನ ಸಂಬಂಧ ಕನ್ನಡ ಸಾಹಿತ್ಯದ ನೆನಪಿನಲ್ಲಿ ವಿಶೇಷವಾದದ್ದು.


ಪಂಪನ ಕಾವ್ಯದಲ್ಲಿ ಬನವಾಸಿಯ ಮೇಲಿನ ಒಲವು, ಈ ನೆಲದ ಪ್ರಕೃತಿ ಸೌಂದರ್ಯದ ವರ್ಣನೆ ಮತ್ತು ಅದರ ಮೇಲಿನ ಕವಿಯ ಭಾವಬಂಧ ಇವೆಲ್ಲವೂ ಬನವಾಸಿಗೆ ಸಾಹಿತ್ಯದ ಮತ್ತೊಂದು ಮುಖವನ್ನು ನೀಡಿವೆ. ಹೀಗಾಗಿ ಬನವಾಸಿಯಲ್ಲಿ ನಿಂತಾಗ ಎರಡು ಇತಿಹಾಸಗಳು ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಒಂದು ರಾಜರ ಇತಿಹಾಸ, ಇನ್ನೊಂದು ಕವಿಯ ಇತಿಹಾಸ, ಒಂದು ಕತ್ತಿಯ ಮೂಲಕ ಇತಿಹಾಸ ಬರೆದರೆ, ಮತ್ತೊಂದು ಪೆನ್ನಿನ ಮೂಲಕ ಇತಿಹಾಸವನ್ನು ಅಮರಗೊಳಿಸಿತು. ಅದಕ್ಕಾಗಿಯೇ ಬನವಾಸಿ ಕದಂಬರ ನೆಲ ಮಾತ್ರವಲ್ಲ, ಅದು ಪಂಪನ ಭಾವಲೋಕವೂ ಹೌದು. ಬನವಾಸಿಯ ಮೌನದಲ್ಲಿ ಕೇಳಿಸಿದ ಸಾವಿರ ಮಾತುಗಳು ಅಂದು ಬನವಾಸಿಯ ಬೀದಿಗಳಲ್ಲಿ, ದೇವಾಲಯದ ಆವರಣದಲ್ಲಿ, ಕಲ್ಲಿನ ನಡುವೆ ನಡೆದುಕೊಂಡು ಹೋಗುತ್ತಿದ್ದಾಗ ಒಂದು ವಿಚಿತ್ರ ಅನುಭವ ನನ್ನೊಳಗೆ ಮೂಡಿತ್ತು. ಎಷ್ಟೋ ವರ್ಷಗಳಿಂದ ನಾವು ಕನ್ನಡದ ಬಗ್ಗೆ ಮಾತನಾಡುತ್ತೇವೆ, ಕನ್ನಡದ ಇತಿಹಾಸದ ಬಗ್ಗೆ ಓದುತ್ತೇವೆ, ಕನ್ನಡದ ಕವಿಗಳ ಬಗ್ಗೆ ಹೆಮ್ಮೆಪಡುತ್ತೇವೆ, ಆದರೆ ಒಮ್ಮೆ ಆ ಇತಿಹಾಸ ನಡೆದ ನೆಲದ ಮೇಲೆ ನಿಂತಾಗ ಹೆಮ್ಮೆ ಎನ್ನುವುದು ಮಾತಾಗಿರುವುದಿಲ್ಲ; ಅದು ಅನುಭವವಾಗುತ್ತದೆ. 


ಮಧುಕೇಶ್ವರನ ಮುಂದೆ ನಿಂತಾಗ, ದೊಡ್ಡ ಬಸವನ ಕಣ್ಣುಗಳನ್ನು ನೋಡಿದಾಗ, ಕಂಬಗಳ ಕೆತ್ತನೆಗಳನ್ನು ಗಮನಿಸಿದಾಗ, ಪಂಪನನ್ನು ನೆನಪಿಸಿಕೊಂಡಾಗ, ಕದಂಬರ ಇತಿಹಾಸವನ್ನು ಮನಸ್ಸಿನಲ್ಲಿ ತಂದುಕೊಂಡಾಗ ಒಂದು ಪ್ರಶ್ನೆ ಮನಸ್ಸಿನೊಳಗೆ ಮೂಡುತ್ತದೆ. ಇಷ್ಟು ದೊಡ್ಡ ಇತಿಹಾಸ ನಮ್ಮ ನೆಲದಲ್ಲಿದ್ದರೂ ನಾವು ಅದನ್ನು ಎಷ್ಟು ಅರಿತಿದ್ದೇವೆ? ಇದು ಪ್ರವಾಸವಲ್ಲ ಮಕ್ಕಳಿಗೆ ಕೊಡುವ ಒಂದು ಪಾಠ ಬನವಾಸಿಗೆ ಹೋಗುವುದು ನನಗೆ ಪ್ರವಾಸವಾಗಿರಲಿಲ್ಲ ಅದು ಒಂದು ಪಾಠವಾಗಿತ್ತು. ಇತಿಹಾಸವನ್ನು ಪುಸ್ತಕದಲ್ಲಿ ಮಾತ್ರ ಓದಬಾರದು. ಕೆಲವೊಮ್ಮೆ ಇತಿಹಾಸ ನಡೆದ ನೆಲದ ಮೇಲೆ ನಿಂತು ಅನುಭವಿಸಬೇಕು. ನಮ್ಮ ಮಕ್ಕಳ ಕೈ ಹಿಡಿದು ಬನವಾಸಿಗೆ ಕರೆದುಕೊಂಡು ಹೋಗಬೇಕು. ಮಧುಕೇಶ್ವರನನ್ನು ತೋರಿಸಬೇಕು. ಏಳುವರೆ ಅಡಿ ಬಸವಣ್ಣನನ್ನು ತೋರಿಸಬೇಕು. ಅವನ ಕಣ್ಣುಗಳ ಕಥೆಯನ್ನು ಹೇಳಬೇಕು. ಕಂಬಗಳ ಕೆತ್ತನೆಗಳನ್ನು ತೋರಿಸಬೇಕು. ಪಂಪನ ಬಗ್ಗೆ ಹೇಳಬೇಕು. ಕದಂಬರ ಇತಿಹಾಸವನ್ನು ಪರಿಚಯಿಸಬೇಕು. ಆಗ ಒಂದು ದಿನ ಆ ಮಗು ಕೇಳಬಹುದು ‘ಅಪ್ಪಾ... ಇಷ್ಟು ದೊಡ್ಡ ಇತಿಹಾಸ ನಮ್ಮ ಕರ್ನಾಟಕದಲ್ಲೇ ಇದೆಯಾ?’ ಆ ಪ್ರಶ್ನೆಯೇ ಸಾಕು. ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ತಲುಪಿದೆ ಎಂದರ್ಥ.


ಬೊಗಸೆಯಲ್ಲಿ ಹಿಡಿದಷ್ಟು ಬನವಾಸಿ ಬನವಾಸಿಯ ಬಗ್ಗೆ ಬರೆಯುತ್ತಾ ಹೋದಂತೆ ಇನ್ನೂ ಎಷ್ಟೋ ವಿಚಾರಗಳು ನೆನಪಿಗೆ ಬರುತ್ತವೆ. ಇನ್ನೂ ಎಷ್ಟೋ ಪುಸ್ತಕಗಳನ್ನು ಓದಬೇಕಿದೆ. ಇನ್ನೂ ಎಷ್ಟೋ ಜನರಿಂದ ಕೇಳಬೇಕಿದೆ. ಇನ್ನೂ ಎಷ್ಟೋ ಕಲ್ಲುಗಳನ್ನು ಓದಬೇಕಿದೆ. ಹಾಗಾಗಿ ಇದು ಬನವಾಸಿಯ ಸಂಪೂರ್ಣ ಇತಿಹಾಸವಲ್ಲ. ಇದು ಬನವಾಸಿಯೆಂಬ ಮಹಾಸಾಗರದಿಂದ ನನ್ನ ಬೊಗಸೆಯಲ್ಲಿ ಹಿಡಿದಷ್ಟು ನೀರು ಮಾತ್ರ. ನಾನು ಕಂಡ ಬನವಾಸಿ, ನಾನು ಕೇಳಿದ ಬನವಾಸಿ, ನಾನು ಓದಿದ ಬನವಾಸಿ, ಪಂಪನ ಕಾವ್ಯದಲ್ಲಿ ಕಂಡ ಬನವಾಸಿ, ಕದಂಬರ ಇತಿಹಾಸದಲ್ಲಿ ಕಂಡ ಬನವಾಸಿ, ಮಧುಕೇಶ್ವರನ ಸನ್ನಿಧಿಯಲ್ಲಿ ಅನುಭವಿಸಿದ ಬನವಾಸಿ, ಇವೆಲ್ಲವನ್ನೂ ನನ್ನ ಓದುಗರೊಂದಿಗೆ ಹಂಚಿಕೊಳ್ಳಬೇಕೆಂಬ ಸಣ್ಣ ಪ್ರಯತ್ನವಿದು.


ಸಮುದ್ರವನ್ನು ಬೊಗಸೆಯಲ್ಲಿ ತುಂಬಲಾಗದು ನಕ್ಷತ್ರಗಳನ್ನು ಎಣಿಸಲಾಗದು. ಬನವಾಸಿಯ ಇತಿಹಾಸವನ್ನೂ ಒಂದೇ ಲೇಖನದಲ್ಲಿ ಮುಗಿಸಲಾಗದು ಆದರೂ ಬೊಗಸೆಯಲ್ಲಿ ಹಿಡಿದ ಒಂದು ಹನಿ ನೀರಿನಲ್ಲಿಯೂ ಸಮುದ್ರದ ರುಚಿ ಇರುತ್ತದೆ. ಹಾಗೆಯೇ ಬನವಾಸಿಯ ಒಂದು ಕಲ್ಲಿನಲ್ಲಿಯೂ ಕನ್ನಡದ ಸಾವಿರ ನೆನಪುಗಳಿವೆ. ಬನವಾಸಿ ಎಂದರೆ ಕೇವಲ ಒಂದು ಊರಲ್ಲ ಅದು ಕದಂಬರ ಹೆಜ್ಜೆ ಗುರುತು. ಅದು ಪಂಪನ ಪ್ರೀತಿಯ ನೆಲ ಅದು ಮಧುಕೇಶ್ವರನ ಸನ್ನಿಧಿ. ಅದು ಶಿಲ್ಪಿಗಳ ಬೆವರಿನಲ್ಲಿ ಉಳಿದ ಕಲೆ. ಅದು ಏಳುವರೆ ಅಡಿ ಬಸವನ ಕಣ್ಣುಗಳಲ್ಲಿ ಉಳಿದ ಭಕ್ತಿ. ಅದು ಕಂಬಗಳ ಕೆತ್ತನೆಯಲ್ಲಿ ಹೆಪ್ಪುಗಟ್ಟಿದ ಇತಿಹಾಸ. ಅದು ಕನ್ನಡಿಗನ ಎದೆಯೊಳಗೆ ಉಳಿಯಬೇಕಾದ ಒಂದು ಜೀವಂತ ನೆನಪು. ಬನವಾಸಿಯಿಂದ ಹಿಂದಿರುಗುವಾಗ ನನ್ನ ಕೈಯಲ್ಲಿ ಏನೂ ಇರಲಿಲ್ಲ. ಆದರೆ ಮನಸ್ಸು ಮಾತ್ರ ತುಂಬಿತ್ತು.


ಕದಂಬರ ನೆನಪಿನಿಂದ ಪಂಪನ ಕಾವ್ಯದಿಂದ ಮಧುಕೇಶ್ವರನ ಸನ್ನಿಧಿಯಿಂದ ಬಸವಣ್ಣನ ದೃಷ್ಟಿಯಿಂದ ಕಲ್ಲಿನ ಕಂಬಗಳ ವಿಸ್ಮಯದಿಂದ ಮತ್ತು ಕನ್ನಡಿಗನಾಗಿ ಹುಟ್ಟಿದ ಹೆಮ್ಮೆಯಿಂದ. ಅದಕ್ಕಾಗಿಯೇ ಮತ್ತೊಮ್ಮೆ ಬನವಾಸಿಗೆ ಹೋಗಬೇಕು ಎನ್ನಿಸುತ್ತದೆ. ಮತ್ತಷ್ಟು ಓದಬೇಕು. ಮತ್ತಷ್ಟು ಕೇಳಬೇಕು. ಮತ್ತಷ್ಟು ತಿಳಿದುಕೊಳ್ಳಬೇಕು. ಯಾಕೆಂದರೆ... ಬನವಾಸಿಯನ್ನು ಒಮ್ಮೆ ನೋಡಿದರೆ ಸಾಕಾಗುವುದಿಲ್ಲ. ಅದನ್ನು ಅರಿಯಲು ಮತ್ತೆ ಮತ್ತೆ ಅದರ ಬಳಿಗೆ ಹೋಗಬೇಕು. ಬಹುಶಃ... ಒಂದು ದಿನ ಮತ್ತೆ ಮಧುಕೇಶ್ವರನ ಮುಂದೆ ನಿಂತಾಗ, ಆ ಕಲ್ಲಿನ ಕಂಬವೊಂದು ನನ್ನ ಕಿವಿಗೆ ನಿಧಾನವಾಗಿ ಹೇಳಬಹುದು ‘ನನ್ನ ಕಥೆ ಇನ್ನೂ ಮುಗಿದಿಲ್ಲ...’ ಆಗ ನಾನು ಮತ್ತೆ ನನ್ನ ಬೊಗಸೆಯನ್ನು ಚಾಚುತ್ತೇನೆ. ಇತಿಹಾಸದ ಸಮುದ್ರದಿಂದ ಇನ್ನೊಂದು ಹನಿ ಹಿಡಿಯಲು...

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top