ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ನಡ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ವಿಭಾಗದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಲಾವಣ್ಯ ಅವರು ಬಾಲಕಿಯರ ವಿಭಾಗದ 3000 ಮೀಟರ್ ನಡಿಗೆ ಹಾಗೂ 1500 ಮೀಟರ್ ಓಟದ ಸ್ಪರ್ಧೆ ಎರಡರಲ್ಲೂ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇದರೊಂದಿಗೆ ಬಾಲಕಿಯರ ವಿಭಾಗದ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಗಾಯತ್ರಿ, ವೀಕ್ಷಿತ, ಲಾವಣ್ಯ ಮತ್ತು ಸುಭಿಕ್ಷ ಅವರ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ಕಾಲೇಜಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
ಇದಲ್ಲದೆ ಕಾಲೇಜಿನ ಇತರ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಗಾಯತ್ರಿ ಅವರು 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಮಹಮ್ಮದ್ ಸುಹೇಲ್ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನೂ, ಮಹಮ್ಮದ್ ಮನ್ಸೂರ್ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನೂ ಪಡೆದಿರುತ್ತಾರೆ. ಹಾಗೆಯೇ ಬಾಲಕಿಯರ ತ್ರಿಜಿಗಿತ ಸ್ಪರ್ಧೆಯಲ್ಲಿ ಚೈತ್ರ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ರಿಲೇ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, ಬಾಲಕರ 4×100 ಮೀಟರ್ ಓಟದಲ್ಲಿ ಮಹಮ್ಮದ್ ಮನ್ಸೂರ್, ಮಹಮ್ಮದ್ ಸುಹೇಲ್, ಅಖಿಲೇಶ್ ಮತ್ತು ಸಚಿನ್ ಅವರ ತಂಡ ಹಾಗೂ ಬಾಲಕಿಯರ 4×100 ಮೀಟರ್ ಓಟದಲ್ಲಿ ಗಾಯತ್ರಿ, ವೀಕ್ಷಿತ, ಲಾವಣ್ಯ ಮತ್ತು ಸುಭಿಕ್ಷ ಅವರ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಯ ಹಿಂದೆ ಕಾಲೇಜಿನ ಕ್ರೀಡಾ ಮಾರ್ಗದರ್ಶಿಯಾದ ಶ್ರೀಮತಿ ವಸಂತಿ ಪಿ ಅವರ ನಿರಂತರ ಪ್ರೋತ್ಸಾಹ ಮತ್ತು ತರಬೇತಿಯಿದೆ. ಅಲ್ಲದೆ ಪ್ರಾಂಶುಪಾಲರಾದ ಶ್ರೀಮತಿ ಲಿಲ್ಲಿ ಪಿ ವಿ ಅವರ ದಕ್ಷ ಮಾರ್ಗದರ್ಶನ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರ ಸಹಕಾರ ಈ ಎಲ್ಲ ಯಶಸ್ಸಿಗೆ ಮುಖ್ಯ ಕಾರಣವಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿ, ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದೆ.


