ಮಂಗಳೂರು: ನವಗಿರಿ ಸೇವಾ ಟ್ರಸ್ಟ್‌ನ ಬ್ರಾಹ್ಮಣ ಯುವ ಸಂಘಟನೆಯಾದ 'ಯುವ ಚೇತನ' ಹೊಸಬೆಟ್ಟು, ಕುಳಾಯಿ ಇದರ 33ನೇ ವಾರ್ಷಿಕೋತ್ಸವವು ಸ್ಥಳೀಯ ನವಗಿರಿ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ವೇದಮೂರ್ತಿ ನಂದಪ್ರಸಾದ್ ಉದ್ಘಾಟಿಸಿ, "ನಿತ್ಯ ಜಪತಪಾನುಷ್ಟಾನಗಳೇ ಬ್ರಾಹ್ಮಣ್ಯದ ರಕ್ಷಣೆ ಮತ್ತು ಬ್ರಾಹ್ಮಣನ ಏಳಿಗೆಗೆ ಮೂಲ ಕಾರಣ" ಎಂದು ನುಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗರಿ ಸಮೂಹ ಸಂಸ್ಥೆಯ ಮಾಲಕರಾದ ಶ್ರೀ ಅಗಿರಿ ರಾಘವೇಂದ್ರ ರಾವ್ ವಹಿಸಿ ಮಾತನಾಡಿ, "ಯಾವುದೇ ಮೀಸಲಾತಿ ಸೌಲಭ್ಯವಿಲ್ಲದೆ ಸಮಾಜದಲ್ಲಿ ಸ್ವಸಾಮರ್ಥ್ಯದಿಂದ ಬೆಳೆದ ಸಮಾಜವಿದ್ದರೆ ಅದು ಬ್ರಾಹ್ಮಣ ಸಮಾಜ" ಎಂದು ಅಭಿಪ್ರಾಯಪಟ್ಟರು. ವೇದಮೂರ್ತಿ ಸುಬ್ರಹ್ಮಣ್ಯ ಮಯ್ಯ ಅವರು ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾಗಮ ಟ್ರಸ್ಟ್ ಸುರತ್ಕಲ್‌ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವಾಸುದೇವ ಐತಾಳ್ ಮಾತನಾಡಿ, ಯುವ ಚೇತನದ 33 ವರ್ಷಗಳ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು. "ಯುವಜನರನ್ನು ಸಂಘಟಿಸುವುದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ" ಎಂದು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಅದಾನಿ ಪವರ್ ಲಿಮಿಟೆಡ್‌ನ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ರವಿಚಂದ್ರ ಮೈರ್ಪಾಡಿ ಹಾಗೂ ವನಿತಾ ಸಮಾಜ ಹೊಸಬೆಟ್ಟುವಿನ ಅಧ್ಯಕ್ಷರಾದ ಸಾವಿತ್ರಿ ಎಚ್. ಭಟ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
ವಿದ್ಯಾರ್ಥಿಗಳಿಗೆ ಗೌರವ: ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (II PUC) ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಒಟ್ಟು 21 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿವೇತನ: ಇಬ್ಬರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಾಧಕರಿಗೆ ಸನ್ಮಾನ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ವರು ಸಾಧಕರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ವಿಶೇಷ ಆಕರ್ಷಣೆ: 'ಭಲೇ ಜೋಡಿ Season-5'
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಭಲೇ ಜೋಡಿ Season–5’ ಸ್ಪರ್ಧೆಯಲ್ಲಿ ಹಲವಾರು ಜೋಡಿಗಳು ಉತ್ಸಾಹದಿಂದ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದವು. ಸ್ಪರ್ಧೆಯಲ್ಲಿ ಅನಿಲ್ ಮತ್ತು ರಾಗಶ್ರೀ ಜೋಡಿ ಪ್ರಥಮ ಬಹುಮಾನ ಪಡೆದರೆ, ಶರತ್ ಮತ್ತು ಶ್ರೀವಿದ್ಯಾ ಜೋಡಿ ರನ್ನರ್-ಅಪ್ ಸ್ಥಾನ ಗಳಿಸಿತು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸಂತ ರಾಜ್ ಪ್ರಾರ್ಥನೆಗೈದರು. ಪವನ್ ಮೈರ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಕುಳಾಯಿ ಸ್ವಾಗತಿಸಿದರು. ಸಂಘದ ವಾರ್ಷಿಕ ವರದಿಯನ್ನು ವಿಕ್ರಮ್ ಮೈರ್ಪಾಡಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಅರುಣ್ ಕೆ., ಕೋಶಾಧಿಕಾರಿ ಅಮಿತ್ ಎಚ್., ಉಪಾಧ್ಯಕ್ಷರಾದ ಪ್ರಶಾಂತ್ ಎಚ್. ಕ್ರೀಡಾ ಕಾರ್ಯದರ್ಶಿ ಸಾತ್ವಿಕ್ ಎಚ್. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
