ಬೆಂಗಳೂರು: ಅತ್ಯಾಧುನಿಕ ಮೈಕ್ರೋಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತವು ದೀರ್ಘಕಾಲೀನ ನಾಯಕತ್ವ ಸಾಧಿಸಲು ಅಲ್ಟ್ರಾ-ಹೈ ಡೆನ್ಸಿಟಿ ಇಂಟಿಗ್ರೇಷನ್ (UHDI) ಮತ್ತು ಚಿಪ್‌ಲೆಟ್‌ಗಳ ಮೇಲೆ ತಕ್ಷಣವೇ ಗಮನಹರಿಸಬೇಕು ಎಂದು ಬೆಂಗಳೂರಿನ ಇಟಲಿ ರಾಯಭಾರ ಕಚೇರಿಯ ವೈಜ್ಞಾನಿಕ ರಾಜತಾಂತ್ರಿಕ ಮುಖ್ಯಸ್ಥ ಪ್ರೊ. ಮಾರ್ಕೊ ರೇ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ (NMIT) ಆಯೋಜನೆಗೊಂಡಿರುವ ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನಗಳ ಕುರಿತ 2 ದಿನಗಳ 4ನೇ ಆವೃತ್ತಿಯ ಅಂತಾರಾಷ್ಟ್ರೀಯ ಸಮ್ಮೇಳನ ‘ಎನ್.ಎಂ.ಐ.ಟಿ.ಕಾನ್-2026’ ಅನ್ನು ಉದ್ಘಾಟಿಸಿ ಮಾತನಾಡಿದರು.
ಮೈಕ್ರೋಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ಆಕ್ಸಿಲರೇಟರ್‌ಗಳು ಆಧುನಿಕ ತಂತ್ರಜ್ಞಾನದ ಅದೃಶ್ಯ ಅಡಿಪಾಯವಾಗಿದ್ದರೂ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದ್ದು, ಎಂಜಿನಿಯರಿಂಗ್ ಕೇವಲ ಸಮೀಕರಣಗಳಲ್ಲ, ಅದೊಂದು ಆಳವಾದ ಮಾನವ ಕಲಾಪ್ರಕಾರ ಎಂಬುವುದನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ಹೇಳಿದರು.
ಆಸ್ಟ್ರೇಲಿಯಾದ ಆರ್.ಎಂ.ಐ.ಟಿ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ. ಮಾಲ್ಕಾ ಎನ್. ಹಲ್ಗಮುಗೆ ಮಾತನಾಡಿ, ಐಒಟಿ (IoT) ಮತ್ತು ಕ್ಲೌಡ್ ಅಳವಡಿಕೆಯಿಂದ ಕೂಡಿರುವ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಭದ್ರತೆ ಮತ್ತು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದರ ಮಹತ್ವವನ್ನು ವಿವರಿಸಿದರು. ಸಮ್ಮೇಳನದಲ್ಲಿ ಸೋಬಿಟ್ ಸೈಬರ್ ಸೆಕ್ಯೂರಿಟಿಯ ಸಂಸ್ಥಾಪಕ ಸೊನಿಲ್ ಸೊಬೇದಾರ್ ಹಾಗೂ ಕ್ವಾಲ್ಕಾಮ್ ಟೆಕ್ನಾಲಜೀಸ್‌ನ ಹಿರಿಯ ಇಂಜಿನಿಯರ್ ಆದರ್ಶ್ ರವಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು.
ಅಮೆರಿಕ, ಮಲೇಷಿಯಾ, ಇಂಡೋನೇಷಿಯಾ, ಬಾಂಗ್ಲಾದೇಶ್ ಸೇರಿದಂತೆ ವಿವಿಧ ದೇಶಗಳಿಂದ ಮತ್ತು ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಒಟ್ಟು 2,284 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 94 ಪ್ರಬಂಧಗಳು 11 ಸಮಾನಾಂತರ ಅಧಿವೇಶನಗಳಲ್ಲಿ ಮಂಡನೆಗೆ ಆಯ್ಕೆಯಾಗಿದ್ದವು. ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಆರಂಭದಲ್ಲೇ ವೃತ್ತಿಜೀವನದ ಗುರಿಗಳನ್ನು ನಿರ್ಧರಿಸಿ, ಕೇವಲ ಅಂಕಗಳಿಕೆಗಿಂತ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು.
ಸಮ್ಮೇಳನದ ಅಧ್ಯಕ್ಷ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಪರಮೇಶಾಚಾರಿ ಬಿ.ಡಿ ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿದರು ಮತ್ತು ಡಾ. ಜಿ. ತಿಮ್ಮರಾಜ ಯಾದವ ವಂದಿಸಿದರು. ವಿವಿಧ ದೇಶಗಳ ತಾಂತ್ರಿಕ ಸಂಸ್ಥೆಗಳ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
