• ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಇವರಿಂದ ಆಸಕ್ತ ಸಾರ್ವಜನಿಕರಿಗಾಗಿ ಉಪನ್ಯಾಸ ಕಾರ್ಯಕ್ರಮ.
• ಯುವಜನತೆ ಮತ್ತು ವೈಚಾರಿಕ ಸವಾಲುಗಳು ವಿಷಯದ ಕುರಿತಾದ ವಿಶೇಷ ಸಂವಾದ ಕಾರ್ಯಕ್ರಮ.
ಪುತ್ತೂರು: ಇಂದಿನ ಜಾಗತಿಕ ಮತ್ತು ರಾಷ್ಟ್ರೀಯ ಸನ್ನಿವೇಶದಲ್ಲಿ ಯುವಜನತೆ ಮತ್ತು ವೈಚಾರಿಕ ಸವಾಲುಗಳು ಅತ್ಯಂತ ನಿರ್ಣಾಯಕ ಹಾಗೂ ಗಂಭೀರವಾದ ವಿಷಯವಾಗಿದೆ. ಪ್ರಸ್ತುತ ಯುವ ಪೀಳಿಗೆಯನ್ನು ದಾರಿ ತಪ್ಪಿಸಲು ದೇಶದ ಒಳಗೂ ಮತ್ತು ಜಾಗತಿಕ ಮಟ್ಟದಲ್ಲೂ ವ್ಯವಸ್ಥಿತವಾದ ಸಿದ್ಧಾಂತ ಆಧಾರಿತ ಸಂಚುಗಳು ನಡೆಯುತ್ತಿವೆ. ಕಮ್ಯುನಿಸ್ಟ್ ಸಿದ್ಧಾಂತಗಳು ಮತ್ತು ಮಿಷನರಿಗಳ ಮೂಲಕ ಸಮಾಜದಲ್ಲಿ ಗಲಭೆ ಹಾಗೂ ವಿಧ್ವಂಸಕ ಕೃತ್ಯಗಳನ್ನು ಪ್ರಚೋದಿಸಲು ಹಲವಾರು ಸಂಸ್ಥೆಗಳು ವಿದೇಶಿ ಧನಸಹಾಯ ಹಾಗೂ ತರಬೇತಿಯೊಂದಿಗೆ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ವ್ಯವಸ್ಥಿತ ಹುನ್ನಾರಗಳನ್ನು ಮೆಟ್ಟಿ ನಿಲ್ಲಲು ಇಂದಿನ ಯುವ ಸಮುದಾಯವು ವೈಚಾರಿಕವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ಹೀಗಾಗಿ, ಯುವಪೀಳಿಗೆಯು ಇಂತಹ ದೇಶವಿರೋಧಿ ಹಾಗೂ ಬೌದ್ಧಿಕ ಹುನ್ನಾರಗಳನ್ನು ಅರಿತುಕೊಂಡು, ಬಾಹ್ಯ ಭ್ರಮೆಗಳಿಗೆ ಬಲಿಯಾಗದೆ ದೇಶದ ಸಾರ್ವಭೌಮತ್ವ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸನ್ನದ್ಧರಾಗಬೇಕೆಂದು ಖ್ಯಾತ ವಾಗ್ಮಿಗಳು ಹಾಗೂ ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಇವರು ಅಭಿಪ್ರಾಯಪಟ್ಟರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಆಸಕ್ತ ಸಾರ್ವಜನಿಕರಿಗಾಗಿ ನಡೆಸಿದ ಯುವಜನತೆ ಮತ್ತು ವೈಚಾರಿಕ ಸವಾಲುಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು, ಬಳಿಕ ಈ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರತೀಕ್ ಪೈ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಲಾಜಿಕ್ ಹೈವ್ ಪುತ್ತೂರು ಇವರು ಮಾತನಾಡುತ್ತಾ ಉತ್ತಮ ಆಲೋಚನೆಗಳು ನಮ್ಮನ್ನು ಪರಿಪಕ್ವವನ್ನಾಗಿಸುವುದು ಮಾತ್ರವಲ್ಲದೇ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಬಲ್ಲದು. ಸಾಮಾಜಿಕ ಜಾಲತಾಣಗಳಿಗೆ ಆದ್ಯತೆ ನೀಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಸಾಧ್ಯವಾದಷ್ಟು ಅವುಗಳ ಬಳಕೆ ಕಡಿಮೆ ಮಾಡಿ ಸಾಮಾಜಿಕ ಜವಾಬ್ದಾರಿಗಳೊಂದಿಗೆ ಕಾರ್ಯಪ್ರವೃತ್ತರಾಗಿ ಮುನ್ನಡೆಯಬೇಕು ಎಂದು ನುಡಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣಶೆಟ್ಟಿ ಕಡಬ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ರವೀಂದ್ರ. ಪಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್. ವಂದಿಸಿದರು. ವಿದ್ಯಾರ್ಥಿನಿ ಹಂಸಿನಿ ವೈಯಕ್ತಿಕ ಗೀತೆಯನ್ನು ಹಾಡಿ, ಸುಪ್ರಜಾ ರಾವ್ ಪ್ರಾರ್ಥಿಸಿದರು. ಪ್ರಥಮ ವರ್ಷದ ತಾಂತ್ರಿಕ ವಿಭಾಗದ ಸಂಯೋಜಕಿ ಡಾ. ಶ್ವೇತಾಂಬಿಕ ಪೆರ್ನಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.

.png)
