ಪುತ್ತೂರು : ಪದವಿ ಶಿಕ್ಷಣವು ಒಂದು ಮೆಟ್ಟಿಲು ಮಾತ್ರವಾಗಿದ್ದು, ಪದವಿ ನಂತರದ ಉನ್ನತ ವ್ಯಾಸಾಂಗ ಮತ್ತು ಸರಿಯಾದ ವೃತ್ತಿ ಆಯ್ಕೆಯು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಬ್ಯಾಂಕಿಂಗ್, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಅಥವಾ ಸಿಎ, ಸಿಎಸ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಹೆಚ್ಚಿನ ಸಂಶೋಧನಾ ಮನೋಭಾವ ಮತ್ತು ಅವಕಾಶಗಳ ಬಗ್ಗೆ ಅರಿವು ಅತ್ಯಗತ್ಯ ಎಂದು ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ಮಾರ್ಗದರ್ಶಕ ಡಾ. ಪಿ.ಎನ್. ಉದಯಚಂದ್ರ ತಿಳಿಸಿದ್ದಾರೆ.
ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಘಟಕ, ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅನ್ಲಾಕಿಂಗ್ ಆಪರ್ಚುನಿಟಿಸ್’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸರಿಯಾದ ಸಂಸ್ಥೆಯ ಆಯ್ಕೆ ಮತ್ತು ನಿರಂತರ ಪ್ರಯತ್ನದಿಂದ ಮಾತ್ರ ಉನ್ನತ ವ್ಯಾಸಾಂಗದಲ್ಲಿ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಎಸ್. ಮಾತನಾಡಿ, ಬಿ.ಕಾಂ ಮತ್ತು ಬಿಬಿಎ ಶಿಕ್ಷಣವು ಕೆಲವೇ ಉದ್ಯೋಗಗಳಿಗೆ ಸೀಮಿತವಾಗಿರದೆ ಅದರ ವ್ಯಾಪ್ತಿ ವಿಸ್ತಾರವಾಗಿದೆ. ಸೂಕ್ತ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ರೇಖಾ ಉಪಸ್ಥಿತರಿದ್ದರು.
ತೃತೀಯ ಬಿಬಿಎ ವಿದ್ಯಾರ್ಥಿನಿ ಧನಲಕ್ಷ್ಮಿ ಸ್ವಾಗತಿಸಿ, ಬಿ.ಕಾಂ ವಿದ್ಯಾರ್ಥಿನಿ ಚೈತ್ರ ಪೂಜಾರಿ ವಂದಿಸಿದರು. ಬಿಬಿಎ ವಿದ್ಯಾರ್ಥಿನಿ ದೀಪ್ತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.
