ಉಡುಪಿಯಲ್ಲಿ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ: ಸಾಂಪ್ರದಾಯಿಕ ವೈಭವ, ವಿಟ್ಲಪಿಂಡಿ ಹಾಗೂ ಕೋಟಿ ತುಳಸಿ ಅರ್ಚನೆ

Upayuktha
0

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಎಂದರೆ ಉಡುಪಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಮಠದ ವರ್ತುಲದಲ್ಲಿ ಜಗದೊಡೆಯನ ಜನ್ಮಾಷ್ಟಮಿಯ ಸಡಗರ ಕಳೆಗಟ್ಟಿದೆ. ಸೆಪ್ಟೆಂಬರ್ 4ರ ರಾತ್ರಿ 12:06ಕ್ಕೆ ರೋಹಿಣಿ ನಕ್ಷತ್ರದ ಸಹಯೋಗದೊಂದಿಗೆ ಚಂದ್ರೋದಯವಾಗಲಿದ್ದು, ಆ ಶುಭ ಮುಹೂರ್ತದಲ್ಲೇ ಪರ್ಯಾಯ ಪೀಠಾಧೀಶರಿಂದ ಶ್ರೀಕೃಷ್ಣನಿಗೆ ಮಹಾಪೂಜೆ ಹಾಗೂ ಕೃಷ್ಣಾರ್ಘ್ಯ ಪ್ರದಾನ ನೆರವೇರಲಿದೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ನೆರೆಯುವ ಸಾವಿರಾರು ಭಕ್ತಾದಿಗಳಿಗೂ ಶ್ರೀಕೃಷ್ಣನಿಗೆ ಅರ್ಘ್ಯ ಬಿಡುವ ವಿಶೇಷ ಅವಕಾಶ ಕಲ್ಪಿಸಲಾಗಿದೆ.


ಜನ್ಮಾಷ್ಟಮಿಯ ಮರುದಿನ ಜನಪ್ರಿಯ 'ವಿಟ್ಲಪಿಂಡಿ' ಅಂದರೆ ಕೃಷ್ಣಲೀಲೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ಭವ್ಯ ರಥೋತ್ಸವ ನಡೆಸಲಾಗುತ್ತದೆ. ರಥೋತ್ಸವದ ವೇಳೆ ಗೊಲ್ಲರಿಂದ ಸಾಂಪ್ರದಾಯಿಕ ಮೊಸರುಕುಡಿಕೆ ಉತ್ಸವ ಹಾಗೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯ ಹಬ್ಬರ ಮನೆಮಾಡಲಿದೆ. ಇದರೊಂದಿಗೆ ಪರ್ಯಾಯ ಶ್ರೀಪಾದರ ಆಶಯದಂತೆ ಶ್ರೀ ಶೀರೂರು ಮಠದ ಮುಂಭಾಗದ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಪ್ರಸಿದ್ಧ ಪೈಲ್ವಾನರಿಂದ ವೈಭವದ ಮಲ್ಲಯುದ್ಧ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿದೆ.


ವಿಟ್ಲಪಿಂಡಿಯ ದಿನ ಮಹಾಪೂಜೆಯ ನಂತರ ಊರ-ಪರವೂರ ಭಕ್ತರಿಗೆ ಬೃಹತ್ ಅನ್ನಸಂತರ್ಪಣೆ ನಡೆಯಲಿದ್ದು, ಜೊತೆಗೆ ವಿಶೇಷ ಖಾದ್ಯಗಳ ಪ್ರಸಾದ ವಿತರಣೆ ಇರಲಿದೆ. ಇದಕ್ಕಾಗಿ ಸುಮಾರು ಒಂದೂವರೆ ಲಕ್ಷ ಚಕ್ಕುಲಿಗಳು ಹಾಗೂ ತಲಾ ಮೂವತ್ತು ಸಾವಿರದಂತೆ ಐದು ಬಗೆಯ ವಿವಿಧ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಪ್ರಸಾದಗಳ ತಯಾರಿಕೆಗಾಗಿ ಇಪ್ಪತ್ತು ಕ್ವಿಂಟಾಲ್ ಬೆಲ್ಲ ಮತ್ತು ಏಳು ಕ್ವಿಂಟಾಲ್ ಸಕ್ಕರೆಯನ್ನು ಬಳಸಲಾಗುತ್ತಿದ್ದು, ಸುಮಾರು 80 ಪರಿಣಿತ ಬಾಣಸಿಗರು ಅಹೋರಾತ್ರಿ ಈ ಉಂಡೆ-ಚಕ್ಕುಲಿ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಶೇಷ ಪ್ರಸಾದವನ್ನು ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೂ ವಿತರಿಸಲಾಗುವುದು.


ಕಳೆದ ಒಂದು ತಿಂಗಳಿನಿಂದ 'ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ' ಶೀರ್ಷಿಕೆಯಡಿಯಲ್ಲಿ ಪರ್ಯಾಯ ಶ್ರೀ ಶೀರೂರು ಮಠವು ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಭಕ್ತರಿಗೆ ಹಾಗೂ ಮಠದ ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದೆ. ಇದರ ಭಾಗವಾಗಿ ಸಾಂಪ್ರದಾಯಿಕ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ಪ್ರಕಟಿಸಿದ್ದಾರೆ.


ರಾಷ್ಟ್ರ ಮತ್ತು ಲೋಕ ಕಲ್ಯಾಣಾರ್ಥವಾಗಿ ಸೆಪ್ಟೆಂಬರ್ 6ರಂದು ರಾಜಾಂಗಣದಲ್ಲಿ ವಿಪ್ರ ಬಾಂಧವರ ಸಹಯೋಗದೊಂದಿಗೆ 'ಕೋಟಿ ತುಳಸಿ ಅರ್ಚನೆ' ನಡೆಯಲಿದೆ. ಭಗವಂತನಿಗೆ ಸಮರ್ಪಿಸಲು ಸದ್ಭಕ್ತರು ತುಳಸಿ ಹೂವುಗಳನ್ನು ತರಬಹುದಾಗಿದೆ. ಸುದೀರ್ಘವಾಗಿ ನಡೆದ ಈ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮದ ಭವ್ಯ ಸಮಾರೋಪ ಸಮಾರಂಭವು ಸೆಪ್ಟೆಂಬರ್ 6ರಂದು ಸಂಜೆ 5:00 ಗಂಟೆಗೆ ರಾಜಾಂಗಣದಲ್ಲಿ ನೆರವೇರಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top