ತುಳು ಭಾಷೆಗೆ ಎರಡನೇ ಭಾಷಾ ಸ್ಥಾನಮಾನ ಸಿಕ್ಕಿರುವುದು ಅವಿಸ್ಮರಣೀಯ: ಒಡಿಯೂರು ಶ್ರೀ

Upayuktha
0

 ಒಡಿಯೂರಿನಲ್ಲಿ ‘ಗ್ರಾಮ ವಿಕಾಸ ರಜತ ಸಂಭ್ರಮ’




ಒಡಿಯೂರು: ಕಳೆದ ಹಲವು ವರ್ಷಗಳಿಂದ ಒಡಿಯೂರು ಗ್ರಾಮೀಣ ಪ್ರದೇಶದಲ್ಲಿ ತುಳುನಾಡಿನ ತುಳು ತೇರು ಎಳೆಯುತ್ತಿರುವ ಪ್ರಾಮಾಣಿಕ ಪ್ರಯತ್ನಗಳ ನಡುವೆ, ಮಂಗಳೂರಿನಲ್ಲಿ ಈಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯಾಗಿ ಅಧಿಕೃತ ಘೋಷಣೆಯಾಗಿರುವುದು ಅತ್ಯಂತ ಸಂತಸದ ಮತ್ತು ಅವಿಸ್ಮರಣೀಯ ಕ್ಷಣವಾಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ  ಹೇಳಿದರು.


ಬಂಟ್ವಾಳ ತಾಲ್ಲೂಕಿನ ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನಮ್ ನೇತೃತ್ವದಲ್ಲಿ, ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ರಜತ ಸಂಭ್ರಮ ಸಮಿತಿ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ರವಿವಾರ ನಡೆದ 'ಗ್ರಾಮ ವಿಕಾಸ ರಜತ ಸಂಭ್ರಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. 'ವಿಕಸಿತ ಭಾರತಕ್ಕೆ ಗ್ರಾಮ ವಿಕಾಸವೇ ಮುನ್ನುಡಿ' ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅವರು, "ಒಡಿಯೂರು ಕ್ಷೇತ್ರದಿಂದ 60 ಸಾವಿರಕ್ಕೂ ಮಿಕ್ಕಿ ಬಡ ಕುಟುಂಬಗಳು ಇಂದು ಸಂತೃಪ್ತ ಜೀವನ ನಡೆಸುತ್ತಿವೆ" ಎಂದರು.


ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಪುರಸ್ಕಾರ:

ಇದೇ ಸಂದರ್ಭದಲ್ಲಿ ಪತ್ರಕರ್ತ ಯಶು ವಿಟ್ಲ ಅವರ ಸಂಪಾದಕತ್ವದಲ್ಲಿ ಹೊರಬಂದ 'ರಜತ ವಿಕಾಸ' ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮುಂಬೈನ ಪ್ರಖ್ಯಾತ ಸರ್ಜನ್ ಡಾ. ಅದಿಕ್ ಕೆ. ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಅತಿಥಿಗಳಿಗೆ ಒಡಿಯೂರು ಶ್ರೀಗಳು ರಚಿಸಿದ 'ತುಳು ಲಿಪಿ ಭಗವದ್ಗೀತೆ'ಯನ್ನು ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ರವಿರಾಜ್ ಶೆಟ್ಟಿ ಒಡಿಯೂರು ಮತ್ತು ತಂಡದವರಿಂದ ಭಜನಾ ಸಂಕೀರ್ತನೆ ನೆರವೇರಿತು.


ಸಾಧ್ವಿ ಮಾತಾನಂದಮಯಿ ಅವರು ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹಾಗೂ ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ಹುಬ್ಬಳ್ಳಿ ಉಪಸ್ಥಿತರಿದ್ದು ಶುಭ ಹಾರೈಸಿದರು.


ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, "ಮುಂದಿನ ದಿನಗಳಲ್ಲಿ ತುಳು ಭಾಷೆಯು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲಿ" ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ವಾಮಯ ಶೆಟ್ಟಿ ಮುಂಬೈ, ದಾಮೋದರ್ ಶೆಟ್ಟಿ ಮುಂಬೈ, ಪ್ರಭಾಕರ್ ಶೆಟ್ಟಿ ಪುಣೆ, ಸಹಕಾರಿ ರತ್ನ ಸುರೇಶ್ ರೈ ಮತ್ತಿತರ ಗಣ್ಯರು ಭಾಗವಹಿಸಿದ್ದರು.


ಪತ್ರಕರ್ತ ಯಶು ವಿಟ್ಲ ಸ್ವಾಗತಿಸಿ, ಮಾತೇಶ್ ಭಂಡಾರಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top