ಕರಾವಳಿ ಕ್ಯಾಬಿನೆಟ್ ನಿರ್ಧಾರಕ್ಕೆ ಸ್ವಾಗತ
ಮಂಗಳೂರು: ಶುಕ್ರವಾರ ನಡೆದ ಕರಾವಳಿ ಕ್ಯಾಬಿನೆಟ್ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಿರುವುದನ್ನು ತುಳುಕೂಟ (ರಿ.) ಕುಡ್ಲ ಮುಕ್ತಕಂಠದಿಂದ ಸ್ವಾಗತಿಸಿದೆ ಹಾಗೂ ಈ ಐತಿಹಾಸಿಕ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಅವರು, ತುಳು ಭಾಷೆಗೆ ಅರ್ಹ ಗೌರವ ಮತ್ತು ಮಾನ್ಯತೆ ಸಿಕ್ಕಿರುವುದು ಸಮಸ್ತ ತುಳುವರ ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಆಡಳಿತಾತ್ಮಕ ಗುರುತನ್ನು ಎತ್ತಿಹಿಡಿಯುವಲ್ಲಿ ಈ ನಿರ್ಧಾರ ಮಹತ್ವದ ಪಾತ್ರ ವಹಿಸಲಿದೆ. ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಈ ಘೋಷಣೆ ಹೊಸ ಶಕ್ತಿ ನೀಡಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.


