ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಕರ್ನಾಟಕ ಸರ್ಕಾರಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಭಿನಂದನೆ

Upayuktha
0


ಮಂಗಳೂರು: "ತುಳು ನಮ್ಮ ಮಾತೃಭಾಷೆ ಮಾತ್ರವಲ್ಲ; ಅದು ನಮ್ಮ ನೆಲದ ಇತಿಹಾಸ, ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಅಸ್ಮಿತೆಯ ಜೀವಂತ ಪ್ರತೀಕ" ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯಪಟ್ಟಿದ್ದಾರೆ.

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಸ್ತುತ ಕರ್ನಾಟಕ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಬಂಟ ಸಮುದಾಯದ ಪರವಾಗಿ ಅವರು ಹೃತ್ಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, "ಈ ಐತಿಹಾಸಿಕ ಕ್ಷಣವು ಕೇವಲ ಇಂದಿನ ಸಾಧನೆಯಲ್ಲ; ಇದು ಹಲವು ದಶಕಗಳ ಕನಸು, ಹೋರಾಟ ಮತ್ತು ನಿರಂತರ ಪ್ರಯತ್ನಗಳ ಫಲ. ತುಳು ಭಾಷೆಯ ಉಳಿವು, ಬೆಳವಣಿಗೆ ಮತ್ತು ಅಧಿಕೃತ ಮಾನ್ಯತೆಗಾಗಿ ಬಹು ವರ್ಷಗಳ ಕಾಲ ಧ್ವನಿ ಎತ್ತಿದ ಹಿರಿಯರು, ಸಾಹಿತಿಗಳು, ಸಂಶೋಧಕರು, ಕಲಾವಿದರು, ಸಂಘ-ಸಂಸ್ಥೆಗಳು, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಸಂಖ್ಯಾತ ತುಳು ಭಾಷಾ ಪ್ರೇಮಿಗಳ ಪರಿಶ್ರಮವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ," ಎಂದಿದ್ದಾರೆ.

ಭಾಷೆಗೆ ಮಾನ್ಯತೆ ದೊರಕುವುದು ಎಂದರೆ ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಅದು ಒಂದು ಜನಸಮುದಾಯದ ಭಾಷೆ ಮತ್ತು ಸಂಸ್ಕೃತಿಗೆ ದೊರಕುವ ಗೌರವ ಎಂದು ಹೇಳಿದ ಅವರು, ಕನ್ನಡದ ನೆಲದಲ್ಲಿ ಕನ್ನಡದೊಂದಿಗೆ ತುಳು ಕೂಡ ಗೌರವದಿಂದ ಅರಳಲಿ; ತುಳು ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಆಡಳಿತದ ಕ್ಷೇತ್ರಗಳಲ್ಲಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂದು ಆಶಿಸಿದರು.

"ಇದು ಒಬ್ಬರ ಗೆಲುವಲ್ಲ - ತಲೆಮಾರುಗಳ ಕನಸಿನ ಸಾಕಾರ. ಹೋರಾಡಿದವರ, ತುಳುವನ್ನು ಉಳಿಸಿದವರ ಹಾಗೂ ಪ್ರೀತಿಸಿದ ಪ್ರತಿಯೊಬ್ಬ ತುಳುವನ ಜಯ," ಎಂದು ಕೆ. ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top